ರಾಯಚೂರು | ಪ್ರಧಾನಿ ಮೋದಿಯವರ ಕ್ಷೇತ್ರದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ : ಸಿಪಿಐಎಂ ಪ್ರತಿಭಟನೆ

ರಾಯಚೂರು : ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಹಾಗೂ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕ್ಷೇತ್ರದಲ್ಲಿ ಅತ್ಯಾಚಾರ ಘಟನೆ ಹೆಚ್ಚಾಗಿ ನಡೆಯುತ್ತಿದ್ದನ್ನು ಖಂಡಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಮತ್ತು ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದಿಂದ ಸಿಂಧನೂರು ತಾಲೂಕು ತಹಶಿಲ್ದಾರ್‌ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಳಿಕ ತಹಶೀಲ್ದಾರರ ಮೂಲಕ ರಾಷ್ಟ್ರ ಪತಿಗೆ ಮನವಿ ಸಲ್ಲಿಸಿದರು.
ವಾರಣಾಸಿಯಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯಲು, ಪ್ರಧಾನಿಯೇ ಈ ಬಗ್ಗೆ ಗಮನಹರಿಸಿ ಪೊಲೀಸ್ ಆಡಳಿತಕ್ಕೆ ಸಮನ್ಸ್ ಜಾರಿ ಮಾಡುವುದರ ಜೊತೆಗೆ ಕಠಿಣ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಹೇಯ ಘಟನೆಯನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿರುವ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಅಪರಾಧಿಗಳು ಹೇಗೆ ನಿರ್ಭಯದಿಂದ ಇದ್ದಾರೆ ಎಂಬುದು ತುಂಬಾ ಗಂಭೀರ ವಿಷಯ. ಫ್ಯಾಸಿಸ್ಟ್ ಸಂಘ ಪರಿವಾರಕ್ಕೆ ಸೇರಿದ ಈ ಅತ್ಯಾಚಾರಿಗಳ ಬಿಡುಗಡೆಯ ನಂತರ, ಕೇಸರಿ ಪಡೆಗಳು ಅವರ ಬಿಡುಗಡೆಯನ್ನು ಹಾರ ತುರಾಯಿ ಮೂಲಕ ಸಂಭ್ರಮಿಸಿದರು. ಇದಕ್ಕೂ ಮುಂಚೆಯೂ, ಬಿಎಚ್‌ಯುನಲ್ಲಿ ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಬಿಎಚ್‌ಯು ಹುಡುಗಿಯರು ಬೀದಿಗಿಳಿದಿದ್ದಾರೆ. ಎಲ್ಲಾ ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಮತ್ತು ಅವರೆಲ್ಲರನ್ನೂ ಗ್ಯಾಂಗ್ ರೇಪ್ ಸೆಕ್ಷನ್ ಅಡಿಯಲ್ಲಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಾಲಕಿಗೆ ಸರ್ಕಾರಿ ವೆಚ್ಚದಲ್ಲಿ ಆಕೆಯ ಆಯ್ಕೆಯ ಸಮರ್ಥ ವಕೀಲರನ್ನು ಒದಗಿಸಬೇಕು ಮತ್ತು ಆಕೆಗೆ ಸಾಧ್ಯವಾದಷ್ಟು ಬೇಗ ನ್ಯಾಯ ಒದಗಿಸಬೇಕು. ಬಾಲಕಿಯ ತಂದೆಯ ಪರವಾಗಿ ನಾಪತ್ತೆ ವರದಿಯನ್ನು ಬರೆಯಲು ನಿರಾಕರಿಸಿದ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಬೇಕು. ಬಾಲಕಿಗೆ ಅಗತ್ಯವಾದ ದೈಹಿಕ ಮತ್ತು ಮಾನಸಿಕ ಚಿಕಿತ್ಸೆಯನ್ನು ಒದಗಿಸಬೇಕು, ಜೊತೆಗೆ ಕ್ರೀಡಾಪಟುವಾಗುವ ಅವಳ ಕನಸನ್ನು ಈಡೇರಿಸಲು ಎಲ್ಲಾ ರೀತಿಯ ಸಹಾಯವನ್ನು ಸರಕಾರ ನೀಡಬೇಕು ಎಂದು ಕೋರಿದ್ಧಾರೆ.
ಬನಾರಸ್‌ನಲ್ಲಿ (ವಾರಾಣಸಿ)ಹೆಚ್ಚುತ್ತಿರುವ ಅತ್ಯಾಚಾರ ಅಪರಾಧಗಳನ್ನು ನಿಲ್ಲಿಸಲು ಮತ್ತು ಮಹಿಳೆಯರಿಗೆ ಭಯಮುಕ್ತ ವಾತಾವರಣವನ್ನು ಸೃಷ್ಟಿಸಲು ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ, ತುಳಸಮ್ಮ ಹೊಸಮನಿ, ಹನುಮಂತ ಗೋಡಿಹಾಳ, ಹೆಚ್. ಆರ್.ಹೊಸಮನಿ, ಮುದಿಯಪ್ಪ ಹನುಮನಗರ ಕ್ಯಾಂಪ್, ಧರಗಯ್ಯ,ಹುಲುಗಪ್ಪ ಬಳ್ಳಾರಿ ರುಕ್ಮಿಣೆಮ್ಮ, ಯಮನೂರ, ಬಸವರಾಜ ಭೂತಲದಿನ್ನಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.