ರಾಯಚೂರು | ನಗರ ಸಭೆ ಸದಸ್ಯೆಯ ಪತಿ, ಬೆಂಬಲಿಗರಿಂದ ವ್ಯಕ್ತಿಯೋರ್ವನ ಮೇಲೆ ಹಲ್ಲೆ : ದೂರು ದಾಖಲು

ಸಾಂದರ್ಭಿಕ ಚಿತ್ರ
ರಾಯಚೂರು : ವಾಟ್ಸಪ್ ಗ್ರೂಪ್ ನಲ್ಲಿ ವಿಡಿಯೋ ಒಂದಕ್ಕೆ ನಗುವಿನ ಎಮೋಜಿ ಹಾಕಿದ್ದಕ್ಕೆ ವ್ಯಕ್ತಿಯೊರ್ವನ ಮನೆಗೆ ನುಗ್ಗಿ ನಗರಸಭೆಯ ಸದಸ್ಯೆಯ ಪತಿ, ಮಗ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿ ಕಲ್ಲು ತೂರಾಟ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಹೇಶ ರೆಡ್ಡಿ ಎಂದು ಗುರುತಿಸಲಾಗಿದೆ.
ದೂರಿನ ಪ್ರಕಾರ ಮಹೇಶ ‘ಆಂಧ್ರ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಬಾಯಿರೆಡ್ಡಿಯ 26 ಸೆಕೆಂಡ್ ನ ವಿಡಿಯೋ ಮುನ್ನುರುವಾಡಿ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಕಳುಹಿಸಿದಾಗ ’ ನಗರಸಭೆಯ ಸದಸ್ಯೆಯ ಮಗ ಸಂತೋಷ ರೆಡ್ಡಿ ನಗುವಿನ ಎಮೋಜಿ ಹಾಕಿದ್ದಾನೆ ಇದನ್ನು ನೋಡಿದ ಮಹೇಶ ಇದನ್ನು ಡಿಲೀಟ್ ಮಾಡುವಂತೆ ಹೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಬಳಿಕ ಸಂತೋಷ ರೆಡ್ಡಿಯ ತಂದೆ ನಗರಸಭೆ ಮಾಜಿ ಸದಸ್ಯ ಹಾಗೂ ಹಾಲಿ ಸದಸ್ಯೆಯ ಪತಿ ಬಿ.ತಿಮ್ಮಾರೆಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಸೋಮವಾರ ರಾತ್ರಿ 11.30ಕ್ಕೆ ಮನೆಗೆ ನುಗ್ಗಿ ತಮ್ಮ ಬೆಂಬಲಿಗರ ಜೊತೆ ಹಲ್ಲೆ ಮಾಡಿದ್ದು, ಈ ವೇಳೆ ಮಹೇಶನ ಪತ್ನಿಯನ್ನು ಎಳೆದಾಡಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಂಗಳವಾರ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಅಲ್ಲದೇ ತಮಗೆ ಬಿ.ತಿಮ್ಮಾರೆಡ್ಡಿಯಿಂದ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಲ್ಲದೇ ಎಸ್.ಪಿ ಪುಟ್ಟಮಾದಯ್ಯ ಅವರಿಗೆ ಮನವಿ ಸಲ್ಲಿಸಿ ರಕ್ಷಣೆ ಕೋರಿದ್ದಾರೆ.
ತಿಮ್ಮಾರೆಡ್ಡಿ ಅವರ ಬೆಂಬಲಿಗ ತರುಣ ತನ್ನ ಮೇಲೆ ಮಹೇಶ ಹಲ್ಲೆ ಮಾಡಿದ್ದಾನೆಂದು 11 ಜನರ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ.