ರಾಯಚೂರು | ಓಪೆಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ನಿತೀಶ್ ಕೆ. ಭೇಟಿ : ವೈದ್ಯರೊಂದಿಗೆ ಸಭೆ
ರಾಯಚೂರು : ನಗರದ ರಾಜೀವ್ ಗಾಂಧಿ ಸೂಪರ್ ಸ್ಪೇಷಾಲಿಟಿ (ಓಪೆಕ್) ಆಸ್ಪತ್ರೆಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಅಧಿಕಾರಿ ಹಾಗೂ ವೈದ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ನಂತರ ಮಾತನಾಡಿದ ಅವರು, ಕಳೆದ ಎರಡು ತಿಂಗಳುಗಳಿಂದ ಪ್ರತಿದಿನ ಆಸ್ಪತ್ರೆಗೆ ಬರುವ ಹೊರ ರೋಗಿಗಳು, ಒಳ ರೋಗಿಗಳು, ಶಸ್ತ್ರ ಚಿಕಿತ್ಸೆ ವಿಭಾಗ, ಡಯಾಲಿಸಸ್ ಹಾಗೂ ಆಯುಷ್ಮಾನ್ ಆರೋಗ್ಯ ಯೋಜನೆಗಳಲ್ಲಿಯ ಅಂಕಿ ಸಂಖ್ಯೆಗಳನ್ನು ಗಮನಿಸಿ, ಇನ್ನೂ ಉತ್ತಮ ಪ್ರಗತಿಗಾಗಿ ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರುವಂತಹ ಬಡ ರೋಗಿಗಳಿಗೆ ಯಾವುದೇ ಕುಂದು ಕೊರತೆ ಇಲ್ಲದೇ ಸಹಕಾರ ನೀಡಿ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಆಸ್ಪತ್ರೆಯನ್ನು ಇನ್ನೂ ಸಮರ್ಪಕವಾಗಿ ಮೇಲ್ದರ್ಜೆಗೇರಿಸಲು ಯಾವ ರೀತಿಯಾಗಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವಿಶೇಷಾಧಿಕಾರಿಗಳಾದ ಡಾ.ರಮೇಶ್ ಸಿ.ಸಾಗರ್ ಮತ್ತು ಆಸ್ಪತ್ರೆಯ ಎಲ್ಲಾ ಹಿರಿಯ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.