ರಾಯಚೂರು | ಜಾತಿಗಣತಿ ವಿರೋಧಿಸಿ ವೀರಶೈವ ಲಿಂಗಾಯತ ಸಮಾಜದಿಂದ ಪ್ರತಿಭಟನಾ ಮೆರವಣಿಗೆ

ರಾಯಚೂರು : ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಜಾತಿಗಣತಿಯ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ವೀರಶೈವ ಲಿಂಗಾಯತ ಸಮಾಜದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಹೊರವಲಯದ ಹರ್ಷಿತಾ ಗಾರ್ಡನ್ ನಲ್ಲಿ ಸಮಾಜದ ವಿವಿಧ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಮಾವೇಶ ನಡೆಸಲಾಯಿತು.
ಸರ್ಕಾರ ಅವೈಜ್ಞಾನಿಕ, ಅಸಂವಿಧಾನಿಕ ಜಾತಿಗಣತಿ ತಯಾರಿಸಿದೆ. ಸಮಾಜದ ಜನಸಂಖ್ಯೆಯನ್ನು ಅತ್ಯಂತ ಕಡಿಮೆ ತೋರಿಸಲಾಗಿದೆ. ಇದು ಸಮಾಜವನ್ನು ಒಡೆಯುವ ಕೃತ್ಯವಾಗಿದೆ. ಕೂಡಲೇ ವರದಿ ಕೈ ಬಿಡಬೇಕು ಹಾಗೂ ಮರುಜಾತಿಗಣತಿ ನಡೆಸಬೇಕು ಎಂದು ಆಗ್ರಹಿಸಿದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಜಾತಿ ಗಣತಿ ಕೈ ಬಿಡದಿದ್ದರೆ ರಕ್ತಕ್ರಾಂತಿ ನಡೆಸಲು ಹಿಂಜರಿಯುವುದಿಲ್ಲ. ಇದು ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೃತ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಂಎಲ್ ಸಿ ಬಸನಗೌಡ ಬಾದರ್ಲಿ ಮಾತನಾಡಿ, ಸಮಾಜದಿಂದ ನಾವು ವಿನಃ ನಮ್ಮಿಂದ ಸಮಾಜವಲ್ಲ. ಈಗಾಗಲೇ ಸರ್ಕಾರಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ. ಸಮಯ ಬಂದರೆ ನಾವು ರಾಜಿನಾಮೆ ಕೊಡಲು ಸಿದ್ಧ ಎಂದು ಎಚ್ಚರಿಸಿದರು.
ಬೈಪಾಸ್ ಮಾರ್ಗವಾಗಿ ಡಿಸಿ ಕಚೇರಿವರೆಗೂ ಸಾವಿರಾರು ಜನ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕೆಲಕಾಲ ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಕೆಲ ಕಾಲ ಪರದಾಡುವಂತಾಯಿತು.
