ರಾಯಚೂರು | ಸಿಡಿಲು, ಮಿಂಚಿನಿಂದ ತಪ್ಪಿಸಿಕೊಳ್ಳಲು ವರುಣ ಮಿತ್ರ ಸಹಾಯವಾಣಿ : ಜಿಲ್ಲಾಧಿಕಾರಿ ನಿತೀಶ್ ಕೆ.

ರಾಯಚೂರು : ಮಳೆ-ಗಾಳಿ ಹಾಗೂ ಸಿಡಿಲು-ಮಿಂಚಿನಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಕೆ.ಎಸ್.ಎನ್.ಡಿ.ಎಂ.ಸಿ. ವರುಣ ಮಿತ್ರ ಸಹಾಯವಾಣಿ 9243345433ಯನ್ನು ಸಂಪರ್ಕಿಸಿ ಹವಾಮಾನ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಗುಡುಗು ಸಿಡಿಲಿನ ಮುನ್ನೆಚ್ಚರಿಕೆಗಳನ್ನು ಕೆ.ಎಸ್.ಎನ್.ಡಿ.ಎಂ.ಸಿ ಅಭಿವೃದ್ಧಿಪಡಿಸಿರುವ ಸಿಡಿಲು ಆ್ಯಪ್‌ನಲ್ಲಿ ಪಡೆಯಬಹುದು. ಅಥವಾ ಎನ್‌ಡಿಎಂಎ ಅಭಿವೃದ್ಧಿಪಡಿಸಿರುವ ದಾಮಿನಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಸಿಡಿಲು ಯಾವ ಪ್ರದೇಶದಲ್ಲಿ ಬರುವ ಸಾಧ್ಯತೆ ಇರುತ್ತದೆ ಎಂಬುದರ ಕುರಿತು 30 ನಿಮಿಷಗಳ ಮೊದಲೇ ಮುನ್ಸೂಚನೆ ಹಾಗೂ ಸಿಡಿಲಿನ ಅಪಾಯಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಸಲಹೆ, ಸೂಚನೆಗಳನ್ನು ನೀಡುತ್ತದೆ.
ಹವಾಮಾನ ವಿಷಯದಲ್ಲಿ ಮಾಹಿತಿ ಮತ್ತು ಅಲರ್ಟ್ ಆ್ಯಪ್ ಪಡೆಯಲು ಎನ್‌ಡಿಎಂಎ ಅಭಿವೃದ್ಧಿಪಡಿಸಿರುವ ಸಾಚೆಟ್ ಆ್ಯಪ್ ನಲ್ಲೂ ಪಡೆಯಬಹುದು. ಈ ಅವಶ್ಯಕ ಆ್ಯಪ್‌ಗಳಿಂದ ಜಿಲ್ಲೆಯಲ್ಲಿ ಜೀವಹಾನಿ, ಜಾನುವಾರುಗಳ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.