ಬದ್ಲಾಪುರದ ‘ರಾಜಕೀಯ ಬದ್ಲಾ’

Update: 2024-09-25 07:51 GMT

PC: ANI 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಹಾರಾಷ್ಟ್ರಾದ್ಯಂತ ಸದ್ದು ಮಾಡಿದ್ದ ಬದ್ಲಾಪುರ ನರ್ಸರಿ ಶಾಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ ಆರೋಪಿ ಅಕ್ಷಯ ಶಿಂದೆ ಪೊಲೀಸರ ಕೈಯಿಂದ ಪರಾರಿಯಾಗುವ ಪ್ರಯತ್ನದಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಶಿಂದೆಯನ್ನು ವಶಕ್ಕೆ ಪಡೆದುಕೊಂಡು ಬದ್ಲಾಪುರಕ್ಕೆ ಮರಳುತ್ತಿದ್ದಾಗ ದಾರಿ ಮಧ್ಯೆ ಪೊಲೀಸನೋರ್ವನ ಬಂದೂಕನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಆರೋಪಿ ಪೊಲೀಸರ ಪ್ರತಿ ದಾಳಿಗೆ ಬಲಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ‘ಇದೊಂದು ನಕಲಿ ಎನ್‌ಕೌಂಟರ್’ ಎಂದು ಆರೋಪಿಯ ಕುಟುಂಬ ಆರೋಪಿಸಿದೆ. ವಿರೋಧ ಪಕ್ಷಗಳೂ ಈ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಇದೇ ಸಂದರ್ಭದಲ್ಲಿ ‘ಆರೋಪಿಗೆ ತಕ್ಕ ಶಿಕ್ಷೆಯಾಗಿದೆ’ ಎಂದು ಪೊಲೀಸರ ಕೃತ್ಯವನ್ನು ಹಲವರು ಸಮರ್ಥಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದ ಸ್ಥಳೀಯ ನಿವಾಸಿಗಳನ್ನು ಸರಕಾರ ಈ ನಕಲಿ ಎನ್‌ಕೌಂಟರ್ ಮೂಲಕ ಸಮಾಧಾನಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬದ್ಲಾಪುರದ ನರ್ಸರಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಹೇಯವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅತ್ಯಾಚಾರ ನಡೆದಿದೆಯೋ ಎನ್ನುವುದರ ಬಗ್ಗೆ ಗೊಂದಲಗಳಿದ್ದರೂ ಆರೋಪಿ ದೌರ್ಜನ್ಯ ಎಸಗಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಇಲ್ಲಿ ಆರೋಪಿ ನರ್ಸರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಶೌಚ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು ಮೊದಲನೆಯದೇನೂ ಅಲ್ಲ. ಜಮ್ಮುವಿನಲ್ಲಿ ಆಸೀಫಾ ಎನ್ನುವ ಮಗುವಿನ ಮೇಲೆ ದೇವಸ್ಥಾನದ ಆವರಣದಲ್ಲೇ ಅತ್ಯಂತ ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಹಾಕಲಾಗಿತ್ತು. ಸಮಾಜದಲ್ಲಿ ಗಣ್ಯರೆಂದು ಕರೆಸಿಕೊಂಡವರು ಈ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದರು. ಈ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕುವುದು ಪಕ್ಕಕ್ಕಿರಲಿ, ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಬಿಜೆಪಿಯ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಭಾರತ ಮಕ್ಕಳ ಪಾಲಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ವಿಶ್ವ ಸಂಸ್ಥೆಯ ಒಂದು ವರದಿ ಹೇಳುತ್ತದೆ. 2016ರಿಂದ 2022ರವರೆಗಿನ ಅಂಕಿ ಅಂಶಗಳನ್ನು ತೆಗೆದುಕೊಂಡರೆ, ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಇದು ಹೇಳುತ್ತದೆ. ಇಷ್ಟಾದರೂ, ಬದ್ಲಾಪುರದಲ್ಲಿ ನರ್ಸರಿ ಶಾಲೆಯಲ್ಲಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಇಷ್ಟು ಬೇಗ ನ್ಯಾಯ ಸಿಕ್ಕಿದ್ದು ಹೇಗೆ? ಎನ್ನುವ ಪ್ರಶ್ನೆ ಉತ್ತರ ಸಿಗದೇ ಇರುವಷ್ಟು ಜಟಿಲವಾಗಿಯೇನೂ ಇಲ್ಲ.

ಮುಖ್ಯವಾಗಿ ಇಲ್ಲಿ ಆರೋಪಿ ಒಬ್ಬ ಶೌಚ ಕಾರ್ಮಿಕನಾಗಿದ್ದ. ಆತನಿಗೆ ವರ್ಗ ಬಲವಾಗಲಿ, ಜಾತಿ ಬಲವಾಗಲಿ ಇರಲಿಲ್ಲ. ಇಡೀ ಪ್ರಕರಣ, ಅನಿರೀಕ್ಷಿತವಾಗಿ ರಾಜಕೀಯ ಬಣ್ಣವನ್ನು ಪಡೆದುಕೊಂಡಿತ್ತು. ಬದ್ಲಾಪುರಕ್ಕೆ ಸೀಮಿತವಾಗಿದ್ದ ಈ ಪ್ರಕರಣ, ರಾಜಕೀಯ ನಾಯಕರ ಪ್ರವೇಶದೊಂದಿಗೆ ‘ಮಹಾರಾಷ್ಟ್ರ ಬಂದ್’ವರೆಗೂ ಮುಂದುವರಿಯಿತು. ಮುಖ್ಯಮಂತ್ರಿಯೇ ಸ್ಪಷ್ಟೀಕರಣ ನೀಡುವಂತಹ ಸನ್ನಿವೇಶ ನಿರ್ಮಾಣವಾಯಿತು. ಸರಕಾರಕ್ಕೆ ಆಗಿರುವ ಮುಜುಗರವನ್ನು ತಪ್ಪಿಸಲು ಆರೋಪಿಯನ್ನು ಎನ್‌ಕೌಂಟರ್ ಹೆಸರಿನಲ್ಲಿ ಕೊಂದು ಹಾಕಿ ಜನರನ್ನು ಖುಷಿ ಪಡಿಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಪ್ರಕರಣದಲ್ಲಿ ಆರೋಪಿ ಮರಣದಂಡನೆಗೆ ಅರ್ಹನಾಗಿದ್ದರೂ, ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವ ಅಧಿಕಾರವಿರುವುದು ನ್ಯಾಯಾಲಯಕ್ಕೆ ಮಾತ್ರ. ರಾಜಕಾರಣಿಗಳ ಅಗತ್ಯವನ್ನು ಪೂರೈಸುವುದಕ್ಕಾಗಿ ಪೊಲೀಸರೇ ತೀರ್ಪನ್ನು ನೀಡಿ, ಆರೋಪಿಗೆ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ. ಆದುದರಿಂದ, ಈ ಎನ್‌ಕೌಂಟರ್ ನಕಲಿಯೇ? ಅಸಲಿಯೇ? ಎಂಬುದನ್ನು ಅರಿತುಕೊಳ್ಳುವ ಹಕ್ಕು ಆರೋಪಿಯ ಕುಟುಂಬಿಕರಿಗಿದೆ. ಇಷ್ಟಕ್ಕೂ ಈ ಲೈಂಗಿಕ ದೌರ್ಜನ್ಯ ಪ್ರಕರಣ ಇಷ್ಟೊಂದು ಬಿಗಡಾಯಿಸಲು ಕಾರಣ ಕೇವಲ ಆರೋಪಿ ಮಾತ್ರವೇ ಅಲ್ಲ. ಮಕ್ಕಳ ದೇಹದ ಮೇಲಿನ ಗಾಯಗಳ ಆಧಾರದಿಂದ ಪೋಷಕರು ಶಾಲೆಗೆ ಹೋಗಿ ದೂರು ನೀಡಿದ್ದಾರೆ. ಆದರೆ ಶಾಲೆಯ ಆಡಳಿತ ಮಂಡಳಿ ಪೋಷಕರ ಈ ದೂರನ್ನು ನಿರ್ಲಕ್ಷಿಸಿತು. ಕೊನೆಗೆ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮುಂದಾರು. ವಿಪರ್ಯಾಸವೆಂದರೆ, ಪೊಲೀಸರು ಕೂಡ 24 ಗಂಟೆ ಕಾಲ ದೂರನ್ನು ಸ್ವೀಕರಿಸಲು ಸತಾಯಿಸಿದರು. ಇದು ಪೋಷಕರನ್ನು ತೀವ್ರ ಆಕ್ರೋಶಕ್ಕೀಡು ಮಾಡಿತು. ಈ ಆಕ್ರೋಶ ನಿಧಾನಕ್ಕೆ ಪ್ರತಿಭಟನೆಯ ರೂಪ ಪಡೆಯಿತು. ಸ್ಥಳೀಯ ನೂರಾರು ನಿವಾಸಿಗಳು ಶಾಲೆ ಮತ್ತು ಪೊಲೀಸ್ ಠಾಣೆಗಳ ಮುಂದೆ ಧರಣಿ ಕೂತರು. ಆ ಬಳಿಕ ಪೊಲೀಸರು ದೂರನ್ನು ಸ್ವೀಕರಿಸಿದರಾದರೂ ಅಷ್ಟರಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಬೇರೆ ಬೇರೆ ಸಂಘಟನೆಗಳು ಈ ಪ್ರತಿಭಟನಾಕಾರರ ಜೊತೆಗೆ ಸೇರಿಕೊಂಡವು. ಬಳಿಕ ನಿವಾಸಿಗಳೆಲ್ಲ ಸೇರಿ ರೈಲು ತಡೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಬೀಸಿದರು. ಹಲವರು ಗಾಯಗೊಂಡರು. ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಈ ಮೂಲಕ ರಾಜ್ಯಮಟ್ಟದ ಸುದ್ದಿಯಾದಾಗ ವಿರೋಧ ಪಕ್ಷದ ನಾಯಕರು ಪ್ರತಿಭಟನೆಯಲ್ಲಿ ಗುರುತಿಸಿಕೊಂಡು ‘ಮಹಾರಾಷ್ಟ್ರ ಬಂದ್’ ಘೋಷಿಸಿದರು.

ಆರಂಭದಲ್ಲೇ ಶಾಲಾ ಆಡಳಿತ ಮಂಡಳಿ ಪೋಷಕರ ದೂರನ್ನು ಗಂಭೀರವಾಗಿ ಸ್ವೀಕರಿಸಿ ಪೊಲೀಸ್ ದೂರು ನೀಡಿ ಆರೋಪಿಯ ಬಂಧನಕ್ಕೆ ಸಹಕರಿಸಿದ್ದರೆ ಪ್ರಕರಣ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ. ಆತ ದೌರ್ಜನ್ಯವೆಸಗಿದ್ದಾನೆ ಎಂದಾದರೆ ಆತನ ರಕ್ಷಣೆಗೆ ಮುಂದಾಗಿದ್ದ ಶಾಲಾ ಆಡಳಿತ ಮಂಡಳಿಯೂ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ, ತಕ್ಷಣವೇ ದೂರು ಸ್ವೀಕರಿಸದ ಪೊಲೀಸರು ಕೂಡ ಆರೋಪಿಯ ಕೃತ್ಯದಲ್ಲಿ ಸಹಭಾಗಿಗಳಾದಂತಾಯಿತು. ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಆರೋಪಿಯನ್ನೇ ಬಲಿಕೊಟ್ಟು, ಉಳಿದೆಲ್ಲ ಸಹ ಆರೋಪಿಗಳನ್ನು ಪರೋಕ್ಷವಾಗಿ ರಕ್ಷಿಸಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಇನ್ನಾರೋ ಆಗಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಕೆಲವೊಮ್ಮೆ ಇಂತಹ ಎನ್‌ಕೌಂಟರ್‌ಗಳು ನಡೆಯುವುದೇ ಸತ್ಯವನ್ನು ಮುಚ್ಚಿ ಹಾಕುವುದಕ್ಕಾಗಿ. ಇರುವ ಪ್ರಮುಖ ಸಾಕ್ಷಿಯನ್ನೇ ಕೊಂದು ಹಾಕಿದರೆ, ವಿಚಾರಣೆ ಮುಂದುವರಿಯುವುದೇ ಇಲ್ಲ. ಪೋಷಕರು ಆರೋಪ ಮಾಡಿದಾಗ ಶಾಲಾ ಆಡಳಿತ ಮಂಡಳಿ ಪ್ರಕರಣವನ್ನು ಮುಚ್ಚಿ ಹಾಕಲು ಯಾಕೆ ಯತ್ನಿಸಿತು? ಮಕ್ಕಳ ಮೇಲೆ ನಡೆದ ಅತ್ಯಾಚಾರಕ್ಕಿಂತಲೂ ಶಾಲೆಯ ವರ್ಚಸ್ಸು ಮುಖ್ಯ ಎಂದು ಭಾವಿಸಿತೆ? ಅಥವಾ ಪ್ರಕರಣದಲ್ಲಿ ಇನ್ನಾರಾದರೂ ಶಾಮೀಲಾಗಿದ್ದಾರೆಯೆ? ಎನ್‌ಕೌಂಟರ್‌ನಲ್ಲಿ ಆರೋಪಿಯ ಅನಿರೀಕ್ಷಿತ ಸಾವು, ಈ ಪ್ರಶ್ನೆಗಳನ್ನು ಹುಟ್ಟಿಸಿ ಹಾಕಿದೆ.

ಬದ್ಲಾಪುರದ ಎನ್‌ಕೌಂಟರ್‌ನ ದಿನವೇ ಗುಜರಾತ್‌ನಲ್ಲಿ ಆರು ವರ್ಷದ ಮಗುವಿನ ಮೇಲೆ ಪ್ರಾಂಶುಪಾಲನೊಬ್ಬ ಅತ್ಯಾಚಾರ ಎಸಗಿ, ಬಳಿಕ ಕೊಂದು ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಇದು ಬದ್ಲಾಪುರ ಘಟನೆಗಿಂತಲೂ ಭೀಕರವಾಗಿದೆ. ಇಲ್ಲಿ ಅತ್ಯಾಚಾರಕ್ಕೆ ಸಹಕರಿಸದೇ ಇದ್ದುದಕ್ಕೆ ಪ್ರಾಂಶುಪಾಲ ಮಗುವನ್ನು ಕೊಂದು ಹಾಕಿದ್ದ. ಅದೇ ಗುಜರಾತ್‌ನ ಭರೂಚ್ ಎಂಬಲ್ಲಿ 10 ತಿಂಗಳ ಮಗುವಿನ ಮೇಲೆ ದುಷ್ಕರ್ಮಿಯೊಬ್ಬ ಬರ್ಬರವಾಗಿ ಅತ್ಯಾಚಾರವೆಸಗಿದ್ದಾನೆ. ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಎನ್‌ಕೌಂಟರ್ ಸದ್ದು ಕೇಳಿಸಿಲ್ಲ. ಇಷ್ಟಕ್ಕೂ ಗುಜರಾತ್ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿಗಳನ್ನು ಬಿಡುಗಡೆ ಮಾಡಿ, ಅವರಿಗೆ ಹೂಹಾರ ಹಾಕಿ, ಆರತಿ ಎತ್ತಿದ ರಾಜ್ಯ. ಈ ದೇಶದಲ್ಲಿ ಯಾವ ವಿಚಾರಣೆಯೂ ನಡೆಸದೇ ಆರೋಪಿಗಳನ್ನು ನ್ಯಾಯಾಲಯದ ಹೊರಗೆ ವಿಚಾರಣೆ ನಡೆಸಿ, ತಕ್ಷಣವೇ ಮರಣದಂಡನೆ ವಿಧಿಸಬೇಕಾದರೆ ಆರೋಪಿ ಕೆಳಜಾತಿಯವನಾಗಿರುವುದು ಮತ್ತು ಕೆಳವರ್ಗದವನಾಗಿರುವುದು ಅಗತ್ಯ ಎನ್ನುವುದನ್ನು ಬದ್ಲಾಪುರದ ‘ರಾಜಕೀಯ ಬದ್ಲಾ’ ಮತ್ತೊಮ್ಮೆ ಜಾಹೀರು ಪಡಿಸಿದೆ. ಶೌಚಕಾರ್ಮಿಕನ ಪೋಷಕರು ಆಗ್ರಹಿಸಿದಂತೆ ಎನ್‌ಕೌಂಟರ್ ವಿಶೇಷ ತನಿಖಾ ತಂಡದಿಂದ ತನಿಖೆಗೆ ಒಳಗಾಗಲೇ ಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News