ನೀಲಿ ಚಿತ್ರಗಳ ಹಿಂದಿರುವ ಕಪ್ಪು ಮುಖಗಳು

Update: 2024-09-26 05:38 GMT

ಸಾಂದರ್ಭಿಕ ಚಿತ್ರ ( freepik)

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ದೇಶಾದ್ಯಂತ ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ, ‘ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ’ಯ ಕುರಿತಂತೆ ಸು.ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ‘‘ಮಕ್ಕಳ ನೀಲಿ ಚಿತ್ರಗಳನ್ನು ನೋಡುವುದು ಮಾತ್ರವಲ್ಲ, ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೊಕ್ಸೊ)ಯಡಿ ಅಪರಾಧವಾಗುತ್ತದೆ’’ ಎಂದು ತೀರ್ಪಿನಲ್ಲಿ ತಿಳಿಸಿದೆ. ಈ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪೊಂದರಲ್ಲಿ ‘‘ಇಲೆಕ್ಟ್ರಾನಿಕ್ ಸಲಕರಣೆಯೊಂದರಲ್ಲಿ ಮಕ್ಕಳ ನೀಲಿ ಚಿತ್ರವನ್ನು ಕೇವಲ ಡೌನ್‌ಲೋಡ್ ಮಾಡುವುದು ಅಥವಾ ವೀಕ್ಷಿಸುವುದು ಪೊಕ್ಸೊ ಮತ್ತು ಐಟಿ ಕಾಯ್ದೆಗಳ ಅಡಿ ಅಪರಾಧವಾಗುವುದಿಲ್ಲ’’ ಎಂಬುದಾಗಿ ಹೇಳಿತ್ತು. ಇದೀಗ ಆ ಪ್ರಕರಣವನ್ನು ವಿಚಾರಣೆ ನಡೆಸಿ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್ ‘‘ಚೈಲ್ಡ್ ಪೋರ್ನೋಗ್ರಫಿ ಅಥವಾ ಮಕ್ಕಳ ನೀಲಿ ಚಿತ್ರ ಎಂಬ ಪದದ ಬದಲಿಗೆ ‘ಚೈಲ್ಡ್ ಸೆಕ್ಷುವಲ್ ಎಕ್ಸ್ ಪ್ಲಾಯ್‌ಟೇಟಿವ್ ಆ್ಯಂಡ್ ಅಬ್ಯೂಸ್ ಮೆಟೀರಿಯಲ್’ ಎಂಬ ಪದಕ್ಕೆ ಅಧ್ಯಾದೇಶವೊಂದನ್ನು ತರುವಂತೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸಂಸತ್‌ಗೆ ಸಲಹೆ ನೀಡಿದೆ. ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವಲ್ಲಿ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಪೊಕ್ಸೊ ಕಾಯ್ದೆಯನ್ನು 2012ರಲ್ಲಿ ಜಾರಿಗೆ ತರಲಾಯಿತು. ಅಂತಹ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದನ್ನು ಕಾಯ್ದೆ ಕಡ್ಡಾಯಗೊಳಿಸಿದೆ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಅವರ ಬದುಕಿನ ಮೇಲೆ, ವ್ಯಕ್ತಿತ್ವದ ಮೇಲೆ, ಭವಿಷ್ಯದ ಮೇಲೆ ತೀವ್ರ ದುಷ್ಪರಿಣಾಮಗಳನ್ನು ಬೀರುತ್ತವೆೆ. ಇದೇ ಸಂದರ್ಭದಲ್ಲಿ ಇದರ ವಿಚಾರಣೆ ಮಕ್ಕಳ ಮೇಲಿನ ದೌರ್ಜನ್ಯಗಳ ಮುಂದುವರಿದ ಭಾಗವಾಗುವ ಸಾಧ್ಯತೆಗಳೂ ಇವೆ. ಆರೋಪಿಗಳನ್ನು ರಕ್ಷಿಸುವ ಭಾಗವಾಗಿ ಆರೋಪಿ ಪರ ವಕೀಲ ವಿಚಾರಣೆಯ ನೆಪದಲ್ಲಿ ಮಕ್ಕಳನ್ನು ಮಾನಸಿಕವಾಗಿ ಹಿಂಸಿಸುವ ಸಾಧ್ಯತೆಗಳಿವೆ. ಆದುದರಿಂದಲೇ ಇದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆಯಾದರೂ, ಈ ಬೇಡಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ವಿಪರ್ಯಾಸವೆಂದರೆ, ಕಾನೂನು ಚಾಪೆಯಡಿ ತೂರಿದರೆ, ಆರೋಪಿಗಳು ರಂಗೋಲಿಯಡಿಯಲ್ಲಿ ತೂರುತ್ತಿದ್ದಾರೆ. ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ವ್ಯವಸ್ಥೆಯೂ ಪರೋಕ್ಷವಾಗಿ ಸಹಕರಿಸುತ್ತಿದೆ.

ಮಕ್ಕಳ ಮೇಲೆ ನಡೆಯುವ ಹೆಚ್ಚಿನ ಲೈಂಗಿಕ ದೌರ್ಜನ್ಯಗಳು ಕುಟುಂಬ ವಲಯದ ಒಳಗೇ ನಡೆಯುತ್ತವೆೆ. ಕುಟುಂಬದ ಪ್ರತಿಷ್ಠೆ, ಸಂಬಂಧಗಳು, ಸಮಾಜ ಇತ್ಯಾದಿಗಳಿಗೆ ಅಂಜಿ ಮಗುವಿನ ಬಾಯಿಯನ್ನು ಮುಚ್ಚಿಸಲಾಗುತ್ತದೆ. ಮಗು ದೂರನ್ನು ಹೇಳಿದರೂ ಅದನ್ನು ಹೆತ್ತವರು ಗಂಭೀರವಾಗಿ ತೆಗೆದುಕೊಳ್ಳದೆ ಮಗುವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರವೃತ್ತಿ ಹೆಚ್ಚಾಗುತ್ತಿವೆ. ಇದರ ಲಾಭವನ್ನು ಕುಟುಂಬದೊಳಗಿರುವ ದುಷ್ಕರ್ಮಿಗಳು ತಮ್ಮದಾಗಿಸುತ್ತಾರೆ. ಯಾವುದು ಕೆಟ್ಟ ಸ್ಪರ್ಶ, ಯಾವುದು ಒಳ್ಳೆಯ ಸ್ಪರ್ಶ ಎನ್ನುವುದರ ಬಗ್ಗೆ ಮಕ್ಕಳಿಗೆ ಬಾಲ್ಯದಲ್ಲಿ ತಿಳಿಸಿ ಕೊಡುವ ಕೆಲಸವನ್ನೂ ಮಾಡುವುದಿಲ್ಲ. ಈ ಬಗ್ಗೆ ಹೇಳಿಕೊಡುವುದನ್ನೇ ಮುಜುಗರದಿಂದ ನೋಡುವ ಪಾಲಕರು ನಮ್ಮ ನಡುವೆ ಇನ್ನೂ ಇದ್ದಾರೆ. ಶಾಲೆಗಳಲ್ಲಿ ಶಿಕ್ಷಕರು, ಸಿಬ್ಬಂದಿಯೂ ಮಕ್ಕಳ ಜೊತೆಗೆ ವರ್ತಿಸುವ ವರ್ತನೆಗಳಲ್ಲಿ ಅನೇಕ ಸಂದರ್ಭ ವಿಕೃತಗಳು ಕಂಡು ಬರುತ್ತವೆ. ಆದರೆ ಅಮಾಯಕ ಮಕ್ಕಳು ಅದನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ. ಒಂದು ವೇಳೆ ಗುರುತಿಸಿದರೂ, ಅದನ್ನು ಪೋಷಕರಲ್ಲಿ ಹೇಗೆ ವಿವರಿಸಬೇಕು ಎನ್ನುವುದರಲ್ಲಿ ಸೋಲುತ್ತಾರೆ. ಆದುದರಿಂದ, ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಬೇಕಾದರೆ ಮೊತ್ತ ಮೊದಲು ಪೋಷಕರನ್ನು ಈ ಬಗ್ಗೆ ಶಿಕ್ಷಿತರನ್ನಾಗಿ ಮಾಡಬೇಕಾಗಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ನಡೆಸುವ ವಿಕೃತ ಮನಸ್ಸುಗಳನ್ನು ಸಿದ್ಧಗೊಳಿಸುವಲ್ಲಿ ನೀಲಿ ಚಿತ್ರಗಳ ಪಾತ್ರ ಬಹುದೊಡ್ಡದಿದೆ. ಇಂಟರ್‌ನೆಟ್‌ಗಳು ಮಕ್ಕಳ ಅಶ್ಲೀಲ ಚಿತ್ರಗಳಿಗಾಗಿ ಕುಖ್ಯಾತವಾಗಿವೆ. ಇಂಟರ್‌ನೆಟ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ನೋಡುವವನು ಪರೋಕ್ಷವಾಗಿ ಆ ಅಪರಾಧದಲ್ಲಿ ಭಾಗಿಯಾಗಿರುತ್ತಾನೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗುವುದು ಅಪರಾಧವಾದರೆ, ಅವರನ್ನು ಅಶ್ಲೀಲ ದೃಶ್ಯಗಳಿಗೆ ಬಳಸಿಕೊಳ್ಳುವುದು ಅದಕ್ಕಿಂತಲೂ ದೊಡ್ಡ ಅಪರಾಧವಾಗಿದೆ. ಇದರ ಹಿಂದೆ ಬೃಹತ್ ಕ್ರಿಮಿನಲ್‌ಗಳ ಜಾಲವೇ ಇದೆ. ಇಂತಹ ದೃಶ್ಯಗಳನ್ನು ನೋಡುವವರಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಕ್ರಿಮಿನಲ್‌ಗಳು ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳ ಗಮನಕ್ಕೆ ಬಾರದಂತೆಯೂ ಅವರ ದೈಹಿಕ ಭಾಗಗಳನ್ನು ಚಿತ್ರೀಕರಿಸಿ ವೆಬ್‌ಸೈಟ್‌ಗಳಲ್ಲಿ ತುಂಬಿಸಲಾಗುತ್ತದೆ. ಕೆಲವೊಮ್ಮೆ ಕುಟುಂಬದ ವಲಯದೊಳಗಿರುವವರೇ ಮಕ್ಕಳ ಫೋಟೊಗಳನ್ನು ವೆಬ್‌ಸೈಟ್‌ಗಳಿಗೆ ಹಾಕಿ ಬಿಡುವುದು ಅಥವಾ ಫೋಟೊಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಿದೆ. ಇದು ಮಕ್ಕಳ ವ್ಯಕ್ತಿತ್ವದ ಮೇಲೆ ಅವರಿಗೆ ಅರಿವೇ ಇಲ್ಲದಂತೆ ನಡೆಸುವ ಭೀಕರ ದಾಳಿಯಾಗಿದೆ. ಇದರಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರೆಲ್ಲರೂ ಅಪರಾಧಿಗಳೇ ಆಗಿರುತ್ತಾರೆ. ಆದುದರಿಂದ, ಮಕ್ಕಳ ದೇಹಭಾಗಗಳಿರುವ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನೂ ಪೊಕ್ಸೊ ಕಾಯ್ದೆಯಡಿಗೆ ತರಬೇಕು ಎನ್ನುವ ಸುಪ್ರೀಂಕೋರ್ಟ್ ತೀರ್ಪನ್ನು ಅಭಿನಂದಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ ಮಕ್ಕಳ ಕೈಗೇ ಅಶ್ಲೀಲ ನೀಲಿ ಚಿತ್ರಗಳು ಅತ್ಯಂತ ಸುಲಭವಾಗಿ ಸಿಗುತ್ತಿವೆೆ. ಇಂದು ಸಣ್ಣ ಮಕ್ಕಳೂ ಮೊಬೈಲ್‌ಗಳನ್ನು, ಇಂಟರ್‌ನೆಟ್‌ಗಳನ್ನು ಬಳಸುತ್ತಿದ್ದಾರೆ. ಪೋಷಕರು ಅದೆಷ್ಟೇ ನಿಯಂತ್ರಣಗಳನ್ನು ಹೇರಿದರೂ ಮಕ್ಕಳು ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡದಂತೆ ತಡೆಯುವುದು ಸಾಧ್ಯವಾಗುತ್ತಿಲ್ಲ. ಲೈಂಗಿಕ ಚಟುವಟಿಕೆಗಳ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲದ ಮಕ್ಕಳು ಈ ನೀಲಿ ಚಿತ್ರಗಳ ಬಲೆಗೆ ಬಿದ್ದರೆ, ಅದು ಅವರ ಮುಗ್ಧತೆಯ ಮೇಲೆ ತೀವ್ರ ಘಾಸಿಯನ್ನುಂಟು ಮಾಡುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಬಾಲ್ಯದಲ್ಲೇ ಇಂತಹ ಅಶ್ಲೀಲ ವೆಬ್‌ಸೈಟ್‌ಗಳ ಸುಳಿಗೆ ಸಿಲುಕಿ ಮನಸ್ಸನ್ನು ಪೂರ್ಣ ಪ್ರಮಾಣದಲ್ಲಿ ಕೆಡಿಸಿಕೊಂಡ ಮಕ್ಕಳ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ. ಹೇಗೆ ವಿಕೃತ ಮನಸ್ಸಿನ ದೊಡ್ಡವರ ಕೈಗೆ ಮಕ್ಕಳ ನೀಲಿ ಚಿತ್ರಗಳು ಸಿಗಬಾರದೋ ಹಾಗೆಯೇ, ಮಕ್ಕಳ ಕೈಗೆ ದೊಡ್ಡವರ ನೀಲಿ ಚಿತ್ರಗಳು ದೊರಕದಂತೆ ನೋಡಿಕೊಳ್ಳುವುದು ಕೂಡ ಇಂದಿನ ಅಗತ್ಯವಾಗಿದೆ. ಹೀಗೆ ಬಾಲ್ಯ ಕಾಲದಲ್ಲಿ ನೋಡಬಾರದ್ದನ್ನು ನೋಡುತ್ತಾ ಬೆಳೆದವರೇ ಭವಿಷ್ಯದಲ್ಲಿ ಲೈಂಗಿಕತೆಯ ಬಗ್ಗೆ ವಿಕೃತಾಸಕ್ತಿಯನ್ನು ಬೆಳೆಸಿಕೊಳ್ಳತೊಡಗುತ್ತಾರೆ. ಇದು ಅವರ ವೈವಾಹಿಕ ಬದುಕು ಮತ್ತು ಲೈಂಗಿಕ ಬದುಕಿನ ಮೇಲೆ ತೀವ್ರ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಇಂತಹ ಮಕ್ಕಳೇ ಬೆಳೆದು ವಿಕೃತ ಅಶ್ಲೀಲ ಚಿತ್ರಗಳನ್ನು ನೋಡುವ ಮತ್ತು ಅದನ್ನೇ ಮನಸ್ಸಿನಲ್ಲಿಟ್ಟು ಸಮಾಜದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗಾಗಿ ಗುರುತಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ, ಅಶ್ಲೀಲ ವೈಬ್‌ಸೈಟ್‌ಗಳಿಗೆ ಕಡಿವಾಣ ಹಾಕಲು ಸರಕಾರ ಗರಿಷ್ಠ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕು. ನೀಲಿ ಚಿತ್ರಗಳ ಹಿಂದಿರುವ ಕಪ್ಪು ಮುಖಗಳನ್ನು ಗುರುತಿಸಿ, ಕಠಿಣವಾಗಿ ಶಿಕ್ಷಿಸುವ ಕೆಲಸವನ್ನು ಕಾನೂನು ವ್ಯವಸ್ಥೆ ಮಾಡಬೇಕಾಗಿದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಅತ್ಯಗತ್ಯವಾಗಿ ನಡೆಯಬೇಕಾದ ಕೆಲಸ ಇದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News