ರಾಜ್ಯ ಬಿಜೆಪಿ ಭಿನ್ನಮತ: ಎತ್ತು ಏರಿಗೆಳೆದರೆ ಕೋಣ ನೀರಿಗೆ

Update: 2025-01-31 08:45 IST
ರಾಜ್ಯ ಬಿಜೆಪಿ ಭಿನ್ನಮತ: ಎತ್ತು ಏರಿಗೆಳೆದರೆ ಕೋಣ ನೀರಿಗೆ
  • whatsapp icon
Full View

ಜೋಡಿಸುವುದಕ್ಕೆ ಯತ್ನಿಸಿದಷ್ಟು ಬಿಜೆಪಿಯ ಬಿರುಕು ದೊಡ್ಡದಾಗುತ್ತಿದೆ. ಪ್ರಜಾಸತ್ತಾತ್ಮಕ ದಾರಿಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವ ಮೂಲಕ ಬಿಜೆಪಿಯೊಳಗಿನ ಆಕ್ರೋಶವನ್ನು ತಣಿಸಲು ವರಿಷ್ಠರು ಮುಂದಾಗಿದ್ದರೆ, ಚುನಾವಣೆಯು ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿದೆ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಬಣದ ಕೈ ಮೇಲಾಗಿರುವುದು, ಬಿಜೆಪಿಯ ಯತ್ನಾಳ್ ಬಣವನ್ನು ಸಿಟ್ಟಿಗೆಬ್ಬಿಸಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಸುಧಾಕರ್ ಅವರು ಸಿಡಿದಿದ್ದು, ನೇರವಾಗಿ ಯುದ್ಧವನ್ನು ಘೋಷಿಸಿದ್ದಾರೆ. ‘‘ನನ್ನ ಸಮಾಧಾನದ ದಿನಗಳು ಮುಗಿದವು. ಇನ್ನು ಯುದ್ಧ ಕಾಲ’’ ಎಂದು ಅವರು ಸವಾಲು ಹಾಕಿದ್ದಾರೆ. ‘‘ಸ್ವತಃ ಚುನಾವಣೆಗೆ ನಿಂತು ಗೆಲ್ಲಲು ಅರ್ಹತೆಯಿಲ್ಲದ ವಿಜಯೇಂದ್ರ ಅವರು ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಪಾಧ್ಯಕ್ಷರಾಗಿ ತಮಗೆ ಬೇಕಾದವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ’’ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ. ಇದರ ಬೆನ್ನಿಗೇ ಯತ್ನಾಳ್ ಅವರು ‘‘ವಿಜಯೇಂದ್ರ ಅವರು ಹಣದ ಮೂಲಕ ರಾಜ್ಯಾಧ್ಯಕ್ಷರಾಗಲು ಹೊರಟಿದ್ದಾರೆ. ಹಾಗಾದರೆ ಅನಗತ್ಯವಾಗಿ ಚುನಾವಣೆಯನ್ನು ಯಾಕೆ ಮಾಡಬೇಕು? ನೇರವಾಗಿಯೇ ಆಯ್ಕೆ ಮಾಡಿ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲ ನಿಂದನೀಯ ಟೀಕೆಗಳಿಗೆ ಸಭ್ಯ ಭಾಷೆಯಲ್ಲೇ ಉತ್ತರಿಸುತ್ತಾ ವಿಜಯೇಂದ್ರ ಮುತ್ಸದ್ದಿತನವನ್ನು ಪ್ರದರ್ಶಿಸುತ್ತಿದ್ದಾರೆ.

ಇಲ್ಲಿಯವರೆಗಿನ ವಿದ್ಯಮಾನವನ್ನು ಗಮನಿಸಿದರೆ, ಜಿಲ್ಲಾ ಮಟ್ಟದ ನಾಯಕರ ಆಯ್ಕೆಯಲ್ಲಿ ವಿಜಯೇಂದ್ರ ಅವರ ಕೈ ಮೇಲಾಗಿದೆ. ಇದು ಪರೋಕ್ಷವಾಗಿ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಲು ಪೂರಕವಾಗಿದೆ. ಚುನಾವಣೆಯಲ್ಲಿ ವಿಜಯೇಂದ್ರ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರಾದರೂ, ತಳಸ್ತರದ ನಾಯಕರ ಆಯ್ಕೆಯ ಸಂದರ್ಭದಲ್ಲಿ ಆಗಿರುವ ಹಿನ್ನಡೆ, ಯತ್ನಾಳ್‌ಗೆ ಸೋಲಿನ ಸೂಚನೆಯನ್ನು ನೀಡಿದೆ. ಬಣ ರಾಜಕೀಯದಲ್ಲಿ ಯತ್ನಾಳ್ ಬೆನ್ನಿಗೆ ಆರೆಸ್ಸೆಸ್ ನಿಂತಿದೆಯಾದರೂ, ಅದು ಬಹಿರಂಗವಾಗಿ ತನ್ನ ಬೆಂಬಲವನ್ನು ಘೋಷಿಸುವ ಸ್ಥಿತಿಯಲ್ಲಿ ಇಲ್ಲ. ಒಳಗೊಳಗೆ ಯತ್ನಾಳ್‌ಗೆ ಕುಮ್ಮಕ್ಕು ನೀಡುವವರು ರಾಜ್ಯಾಧ್ಯಕ್ಷರನ್ನಾಗಿಸುವ ವಿಷಯದಲ್ಲಿ ಬೀದಿಗಿಳಿದು ಕೆಲಸ ಮಾಡುವವರಲ್ಲ. ಬಿಜೆಪಿಯೊಳಗಿರುವ ಕೆಲವು ನಾಯಕರಿಗೆ ವಿಜಯೇಂದ್ರ ಅಧಿಕಾರದಿಂದ ಕೆಳಗಿಳಿಯಬೇಕೇ ಹೊರತು, ಆ ಜಾಗದಲ್ಲಿ ಯತ್ನಾಳ್‌ರನ್ನು ಕೂರಿಸುವ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಹೊಂದಿಲ್ಲ. ಇಷ್ಟಕ್ಕೂ ಹಲವು ನಾಯಕರು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಬಹಿರಂಗ ಚುನಾವಣೆಯಲ್ಲಿ ಸ್ಪರ್ಧಿಸಿ, ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲ. ವರಿಷ್ಠರಿಗೆ ಯಡಿಯೂರಪ್ಪ ಕೈಯಿಂದ ಚುಕ್ಕಾಣಿಯನ್ನು ಕಿತ್ತುಕೊಳ್ಳುವ ಇರಾದೆ ಇದೆಯಾದರೂ, ಅದನ್ನು ಅತ್ಯಂತ ನಾಜೂಕಿನಿಂದ ನಿರ್ವಹಿಸುವುದು ಅತ್ಯಗತ್ಯ ಎನ್ನುವುದನ್ನು ಮನಗಂಡಿದ್ದಾರೆ. ಈಗಾಗಲೇ ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿರುವುದು ಬಿಜೆಪಿ ವರಿಷ್ಠರನ್ನು ನಿದ್ದೆಗೆಡಿಸಿದೆ. ಇದೇ ಹೊತ್ತಿಗೆ ಶ್ರೀರಾಮುಲು ಕೂಡ ಕಾಂಗ್ರೆಸ್ ಸೇರುವ ಬಗ್ಗೆ ವದಂತಿ ಹರಡುತ್ತಿದೆ. ಯತ್ನಾಳ್ ಮತ್ತು ಯಡಿಯೂರಪ್ಪ ಇವರಲ್ಲಿ, ಬಿಜೆಪಿಯನ್ನು ಮುನ್ನಡೆಸಬಲ್ಲ ವರ್ಚಸ್ಸು ಇರುವುದು ಯಡಿಯೂರಪ್ಪರಿಗೆ ಎನ್ನುವುದರ ಬಗ್ಗೆ ವರಿಷ್ಠರಿಗೂ ಅನುಮಾನವಿಲ್ಲ. ಯತ್ನಾಳ್‌ನ ಹರಕು ಬಾಯಿ ಬಿಜೆಪಿಯೊಳಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುವ ಅಪಾಯವಿದೆ ಎನ್ನುವ ಆತಂಕ ಅವರದು. ಆದುದರಿಂದ, ವರಿಷ್ಠರು, ಪ್ರಜಾಸತ್ತಾತ್ಮಕ ಚುನಾವಣೆಯೇ ನಾಯಕನಾರು ಎನ್ನುವುದನ್ನು ನಿರ್ಧರಿಸಲಿ ಎನ್ನುತ್ತಿದ್ದಾರೆ. ಪ್ರಜಾಸತ್ತೆಯನ್ನು ಹಣ ಮತ್ತು ಜಾತಿ ಬಲದಿಂದ ಹೇಗೆ ಕೊಂಡುಕೊಳ್ಳಬಹುದು ಎನ್ನುವುದನ್ನು ಯಡಿಯೂರಪ್ಪ ಅವರಿಗೆ ಹೊಸದಾಗಿ ಕಲಿಸಬೇಕಾಗಿಲ್ಲ. ಆದುದರಿಂದಲೇ, ಯತ್ನಾಳ್ ಅವರು ಕೆರಳಿದ್ದಾರೆ. ಸೋಲಿನ ವಾಸನೆ ಅವರಿಗೆ ಅದಾಗಲೇ ಬಡಿದಿದೆ.

ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಬಣ ಗೆದ್ದಿರುವುದರಿಂದ, ಯತ್ನಾಳ್ ಅವರು ಸ್ಪರ್ಧಿಸಿದರೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಶೇಷ ಬದಲಾವಣೆ ಕಷ್ಟ. ಕುಮಾರ ಬಂಗಾರಪ್ಪ ಅವರು ಯತ್ನಾಳ್ ಮತ್ತು ರಮೇಶ್ ಜಾರಕಿ ಹೊಳಿಯವರ ಪರವಾಗಿ ಕೊಡೆ ಹಿಡಿದಿದ್ದಾರೆ. ಸುಧಾಕರ್ ಕೂಡ ವಿಜಯೇಂದ್ರ ಅವರಿಗೆ ತಿರುಗಿ ಬಿದ್ದಿದ್ದಾರೆ. ಆದರೆ ಬೊಮ್ಮಾಯಿ, ಅಶೋಕ್, ಸೋಮಣ್ಣರಂತಹ ಹಿರಿಯ ನಾಯಕರು ಬಾಯಿ ತೆರೆಯದೇ ಇದ್ದರೆ ವಿಜಯೇಂದ್ರ ಅವರ ಬದಲಾವಣೆ ಕಷ್ಟ. ಯಡಿಯೂರಪ್ಪ ಅವರೊಂದಿಗೆ ಅಸಮಾಧಾನ ಹೊಂದಿರುವ ಬಿಜೆಪಿಯೊಳಗಿರುವ ಕೆಲವು ಹಿರಿಯ ನಾಯಕರು ಯತ್ನಾಳ್ ಜೊತೆಗೆ ಬಹಿರಂಗವಾಗಿ ಗುರುತಿಸುವ ಕೆಲಸವನ್ನು ಮಾಡುತ್ತಿಲ್ಲ. ಇದೇ ಸಂದರ್ಭದಲ್ಲಿ ಯತ್ನಾಳ್ ಅವರು ಲಿಂಗಾಯತ ಸಮುದಾಯದ ಆಕ್ರೋಶವನ್ನೂ ಸೆರಗಿನಲ್ಲಿ ಕಟ್ಟಿಕೊಂಡಿದ್ದಾರೆ. ಬಸವಣ್ಣನವರಿಗೆ ಅವಮಾನಮಾಡಿದ್ದಾರೆ ಎನ್ನುವ ಆರೋಪವೂ ಅವರ ಮೇಲಿದೆ. ಆದುದರಿಂದಲೇ, ಬಿಜೆಪಿಯ ಕೆಲವರಿಗೆ ಯತ್ನಾಳ್ ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪವಾಗಿದ್ದಾರೆ.

‘‘ವಿಜಯೇಂದ್ರ ಹಣದ ಮೂಲಕ ಪ್ರಜಾಸತ್ತೆಯನ್ನು ಕೊಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ’’ ಎಂದು ಆರೋಪಿಸುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಮುನ್ನವೇ ಅದರ ಬಗ್ಗೆ ತಮ್ಮ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ಸ್ಪರ್ಧೆಗೆ ಅವರು ಹಿಂಜರಿಯುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೆ, ವಿಜಯೇಂದ್ರ ಅವರನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ. ಒಂದು ವೇಳೆ ಮತ್ತೂ ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಟೀಕೆ ಮುಂದುವರಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ವರಿಷ್ಠರಿಗೆ ಅನಿವಾರ್ಯವಾಗುತ್ತದೆ. ಇದು ಬಿಜೆಪಿಯ ಸ್ಥಿತಿಯನ್ನು ಇನ್ನಷ್ಟು ಚಿಂತಾಜನಕಗೊಳಿಸಬಹುದು. ಒಂದು ವೇಳೆ ಚುನಾವಣೆಯಲ್ಲಿ ವಿಜಯೇಂದ್ರ ಬಣಕ್ಕೆ ಹಿನ್ನಡೆಯಾದರೂ ಬಿಜೆಪಿ ವರಿಷ್ಠರ ಸಮಸ್ಯೆ ಮುಗಿಯುವುದಿಲ್ಲ. ಯಾಕೆಂದರೆ, ಈಗಾಗಲೇ ಬಹುತೇಕ ಜಿಲ್ಲಾಧ್ಯಕ್ಷರು ವಿಜೇಯಂದ್ರ ಪರವಾಗಿದ್ದಾರೆ. ಅವರೆಲ್ಲ ಹೊಸ ನಾಯಕನಿಗೆ ಎಷ್ಟರಮಟ್ಟಿಗೆ ಸಹಕರಿಸುತ್ತಾರೆ ಎನ್ನುವ ಪ್ರಶ್ನೆ ಏಳುತ್ತದೆ. ತನ್ನನ್ನು ಅತ್ಯಂತ ಹೀನಾಯವಾಗಿ, ವೈಯಕ್ತಿಕವಾಗಿ ನಿಂದಿಸಿರುವ ಯತ್ನಾಳ್ ಮತ್ತು ಅವರ ಗುಂಪಿನ ಜೊತೆಗೆ ವಿಜಯೇಂದ್ರ ಅವರು ಸಹಕರಿಸುವುದು ಕಷ್ಟವೇ ಆಗಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಸ್ಥಿತಿ ಈ ಚುನಾವಣೆಯ ಬಳಿಕ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ. ಮತ್ತು ಒಂದು ಗುಂಪು ಬಿಜೆಪಿಯಿಂದ ಸಿಡಿಯುವುದು ಅಥವಾ ಕಾಂಗ್ರೆಸ್, ಇನ್ನಿತರ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸೂಚನೆ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಅಧಿಕಾರ ಕಳೆದುಕೊಂಡ ಬಳಿಕವೂ ಗುಂಪುಗಾರಿಕೆ ಶಮನವಾಗಿಲ್ಲ ಎನ್ನುವುದು ರಾಜ್ಯ ಬಿಜೆಪಿಯ ಬಹುದೊಡ್ಡ ದುರಂತವಾಗಿದೆ. ಇವರಿಗೆ ಹೋಲಿಸಿದರೆ, ರಾಜ್ಯ ಕಾಂಗ್ರೆಸ್ ಎಷ್ಟೋ ವಾಸಿ. ಯಾಕೆಂದರೆ, ಇಲ್ಲಿ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆಯಾದರೂ, ಅದು ಬಹಿರಂಗವಾಗಿ ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವಲ್ಲಿ ವರಿಷ್ಠರು ಭಾಗಶಃ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ತನ್ನ ವರ್ಚಸ್ಸನ್ನು ಪಕ್ಷದೊಳಗೆ ಉಳಿಸಿಕೊಂಡಿದ್ದಾರೆ ಮಾತ್ರವಲ್ಲ, ಆ ವರ್ಚಸ್ಸಿನ ಮೂಲಕವೇ ಪಕ್ಷವನ್ನು ನಿಯಂತ್ರಣದಲ್ಲಿಟ್ಟಿದ್ದಾರೆ. ಕಾಂಗ್ರೆಸ್‌ನೊಳಗಿರುವ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿಯಂತಹ ನಾಯಕರು ಹಣ ಬಲ, ಜಾತಿ ಬಲದಲ್ಲಿ ಕಡಿಮೆಯೇನೂ ಇಲ್ಲ. ಅವರೂ ಬಿಜೆಪಿಯೊಳಗಿರುವ ನಾಯಕರಂತೆ ಪಕ್ಷದ ಹಿತಾಸಕ್ತಿಯನ್ನು ಸಂಪೂರ್ಣ ಮರೆತು ಕಚ್ಚಾಟಕ್ಕಿಳಿದಿದ್ದರೆ ಸರಕಾರ ಎಂದೋ ಉರುಳಿ ಬಿಡುತ್ತಿತ್ತು. ತಮ್ಮ ಅಸಮಾಧಾನವನ್ನು ಯಾವ ಹಂತದವರೆಗೆ ವ್ಯಕ್ತಪಡಿಸಬಹುದು ಎನ್ನುವ ಪ್ರಜ್ಞೆ, ವಿವೇಕ ಇವರಲ್ಲಿದ್ದುದರಿಂದಲೇ, ಸರಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News