ಟೀಕಿಸಿದ್ದು ಭಾರತವನ್ನಲ್ಲ, ಭಾರತದ ಸರಕಾರವನ್ನು

Update: 2023-07-01 04:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದೊಳಗೆ ಏನೇನು ಸಂಭವಿಸುತ್ತಿವೆ ಎನ್ನುವ ಮಾಹಿತಿಗಳು ಪ್ರಧಾನಿ ಮೋದಿಯವರನ್ನು ತಲುಪಬೇಕಾದರೆ ಅವರು ವಿದೇಶ ಪ್ರವಾಸ ಮಾಡುವುದು ಅನಿವಾರ್ಯವೆ? ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಮೊದಲ ಬಾರಿ, ಭಾರತದಲ್ಲಿ ನಡೆಯುತ್ತಿರುವ ಗಲಭೆ, ಹಿಂಸಾಚಾರ, ಮಾನವ ಹಕ್ಕು ಉಲ್ಲಂಘನೆಗಳು, ಅಮಾಯಕರ ಹತ್ಯೆ, ಪತ್ರಕರ್ತರ ದಮನಗಳ ಬಗ್ಗೆ ಮಾಹಿತಿ ದೊರಕಿದಂತಿದೆ. ಆದುದರಿಂದಲೇ ಅವರು ಅವೆಲ್ಲವನ್ನೂ ನಿರಾಕರಿಸಿದ್ದಾರೆ. ಬಹುಶಃ ಈ ಎಲ್ಲ ಮಾಹಿತಿಗಳನ್ನು ಭಾರತದಲ್ಲಿ ಅವರ ಸುತ್ತಲಿನ ಅಧಿಕಾರಿ ವರ್ಗ, ರಾಜಕೀಯ ಶಕ್ತಿಗಳು ಮುಚ್ಚಿಟ್ಟಿರಬಹುದೇ ಎನ್ನುವ ಅನುಮಾನ ವಿಶ್ವದ ನಾಯಕರನ್ನು ಕಾಡುತ್ತಿದೆ. ಯಾಕೆಂದರೆ, ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಅವರು ಎದುರಿಸಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದ ರೀತಿಯನ್ನು ಗಮನಿಸಿದರೆ ಭಾರತದಲ್ಲಿ ನಡೆಯುತ್ತಿರುವ ಅವಾಂತರಗಳ ಬಗ್ಗೆ ಅವರಿಗೆ ಅರಿವೇ ಇಲ್ಲದಿರುವುದು ಸ್ಪಷ್ಟವಾಗಿ ಬಿಡುತ್ತದೆ. ಆದುದರಿಂದಲೇ ಪತ್ರಕರ್ತರ ಪ್ರಶ್ನೆಗಳಿಂದ ಅವರು ಗಲಿಬಿಲಿಗೊಂಡಂತಿತ್ತು. ಅಮೆರಿಕದಲ್ಲಿರುವ ಅವರ ಭಕ್ತರಿಗೂ ಪತ್ರಕರ್ತರ ಪ್ರಶ್ನೆಗಳನ್ನು ಜೀರ್ಣಿಸಲು ಕಷ್ಟವಾಗಿದೆ. ಮುಖ್ಯವಾಗಿ, ಭಾರತದಲ್ಲಿ ಈಗ ನಡೆಯುತ್ತಿರುವ ಮಾನವ ಹಕ್ಕುಗಳ ದಮನಗಳನ್ನು ಅನಿವಾಸಿ ಭಾರತೀಯರೆಂದು ಕರೆಸಿಕೊಂಡಿರುವ ಪ್ರಧಾನಿ ಮೋದಿಯ ಭಕ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆಯೋ ಅಥವಾ ಇಂತಹ ಘಟನೆಗಳು ಭಾರತದಲ್ಲಿ ನಡೆದೇ ಇಲ್ಲವೆಂದು ವಾದಿಸುತ್ತಿದ್ದಾರೆಯೋ ಎನ್ನುವುದು ಕೂಡ ಸ್ಪಷ್ಟವಿಲ್ಲ. ಅದೇನೇ ಇರಲಿ, ಕನಿಷ್ಠ ಅಮೆರಿಕದ ಮಾಧ್ಯಮಗಳ ಮೂಲಕವಾದರೂ ಮಣಿಪುರದ ಬೆಂಕಿ, ಅಲ್ಪಸಂಖ್ಯಾತರ ದಮನಗಳ ಬಗ್ಗೆ ವಿವರಗಳು ಪ್ರಧಾನಿ ಮೋದಿಯನ್ನು ತಲುಪಿದವಲ್ಲ ಎನ್ನುವುದು ಸದ್ಯಕ್ಕೆ ಭಾರತೀಯರ ಸಮಾಧಾನವಾಗಿದೆ.

ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಅಲ್ಲಿನ ವಿವಿಧ ಸಂಘಟನೆಗಳು ಭಾರತದ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸುತ್ತಾ ತಮ್ಮ ಪ್ರತಿಭಟನೆಗಳನ್ನು ಸಲ್ಲಿಸಿದ್ದವು. ಪ್ರಧಾನಿ ಮೋದಿಯವರ ವಿರುದ್ಧ ಬ್ಯಾನರ್ಗಳು, ಪ್ರತಿಭಟನಾ ಫಲಕಗಳು ಕಾಣಿಸಿಕೊಂಡವು. ಶ್ವೇತಭವನದ ಮುಂದೆ ಜನರು ಧರಣಿ ನಡೆಸಿದರು. ಪ್ರಧಾನಿ ಮೋದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವೆಲ್ಲವು ಭಾರತದ ಮೇಲಿನ ಕಾಳಜಿಯಿಂದ ನಡೆದಿತ್ತೇ ಹೊರತು, ಭಾರತದ ವಿರುದ್ಧ ನಡೆದ ಪ್ರತಿಭಟನೆಗಳಾಗಿರಲಿಲ್ಲ. ಭಾರತವನ್ನು ವಿಶ್ವಗುರುವಾಗಿಸುವ ಮಹತ್ತರ ಉದ್ದೇಶವನ್ನು ಹೊಂದಿರುವ ಪ್ರಧಾನಿ ಮೋದಿಯವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು. ಸ್ವಾತಂತ್ರ್ಯದ ಬಳಿಕ ಭಾರತದ ಹಿರಿಮೆಯನ್ನು ವಿಶ್ವದ ಮುಂದೆ ಎಲ್ಲ ಪ್ರಧಾನಿಗಳು ಕಾಪಾಡಿಕೊಂಡು ಬಂದಿದ್ದಾರೆ. ಆ ಹಿರಿಮೆಯನ್ನು ಎತ್ತಿ ಹಿಡಿಯುವುದು ತನ್ನ ಹೊಣೆಗಾರಿಕೆಯೂ ಹೌದು ಎಂದು ತಿಳಿದು ಪ್ರತಿಕ್ರಿಯಿಸಬೇಕಾಗಿತ್ತು. ಆದರೆ, ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತದ ವರ್ಚಸ್ಸನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅವರು ಬಲಿಕೊಟ್ಟಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿದ ರೀತಿಯಂತೂ ತೀರಾ ಕಳಪೆಯಾಗಿದೆ. ಇದರಿಂದ ಭಾರತದ ವರ್ಚಸ್ಸಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಧಕ್ಕೆಯಾಗಿದೆ. ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಭಾರತದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು ಮಾತ್ರವಲ್ಲ, ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಪಡೆದುಕೊಂಡಿದ್ದರು. ಒಬಾಮ ಪ್ರತಿಷ್ಠಿತ ಶಾಂತಿ ನೊಬೆಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡವರು. ಹಾಗೆಂದು ಅಧ್ಯಕ್ಷರಾಗಿದ್ದಾಗ ಅವರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳು ಸರಿಯಾಗಿದ್ದವು ಎಂದು ಅರ್ಥವಲ್ಲ. ಆದರೆ, ಭಾರತದ ಇಂದಿನ ಪರಿಸ್ಥಿತಿಯ ಕುರಿತಂತೆ ಅವರು ವ್ಯಕ್ತಪಡಿಸಿರುವ ಕಳವಳಗಳು ಮಾತ್ರ ನಿರ್ಲಕ್ಷಿಸುವಂತಹದ್ದಲ್ಲ. ‘‘ಅಲ್ಪಸಂಖ್ಯಾತರ ರಕ್ಷಣೆಯ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿಯವರ ಜೊತೆ ಬೈಡನ್ ಸರಕಾರ ಪ್ರಸ್ತಾಪಿಸಬೇಕು. ಅಲ್ಪಸಂಖ್ಯಾತರ ರಕ್ಷಣೆಗೆ ಭಾರತ ಸೂಕ್ತಕ್ರಮ ಕೈಗೊಳ್ಳದೇ ಇದ್ದರೆ ಅಂತರ್ರಾಷ್ಟ್ರೀಯ ಮಟ್ಟದ ಟೀಕೆಗಳನ್ನು ಎದುರಿಸಬೇಕಾಗುತ್ತದೆ’’ ಎಂದು ಒಬಾಮಾ ಅವರು ಹೇಳಿಕೆ ನೀಡಿದ್ದರು. ಭಾರತವೆಂದಲ್ಲ, ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿರಿಸಿರುವ ಯಾವುದೇ ದೇಶವೂ ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಭರವಸೆಯನ್ನು ನೀಡಬೇಕಾಗುತ್ತದೆ. ಇದು ಪಾಕಿಸ್ತಾನ, ಬಾಂಗ್ಲಾದಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೂ, ಶ್ರೀಲಂಕಾದಲ್ಲಿರುವ ತಮಿಳು ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಭಾರತದಲ್ಲಿ ಅಲ್ಪಸಂಖ್ಯಾತರು ಆತಂಕಗಳನ್ನು ಎದುರಿಸುತ್ತಿಲ್ಲ ಎಂದಾದರೆ ಪ್ರಧಾನಿ ಮೋದಿಯವರು ಒಬಾಮಾ ಹೇಳಿಕೆಗೆ ಗಲಿಬಿಲಿ ಗೊಳ್ಳುವ ಅಗತ್ಯವೇ ಇಲ್ಲ. ಆದರೆ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯ, ಬುಡಕಟ್ಟು ಜನಾಂಗಗಳು, ದಲಿತರ ಸ್ಥಿತಿ ದಿನದಿನಕ್ಕೆ ಚಿಂತಾಜನಕವಾಗುತ್ತಿದೆ. ಮಣಿಪುರದಲ್ಲಿ ಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಯ ಹಿಂದೆ ಕೇಂದ್ರ ಸರಕಾರದ ವೈಫಲ್ಯಗಳಿವೆ ಎನ್ನುವುದನ್ನು ಮಣಿಪುರದ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಪತ್ರಕರ್ತರ ದಮನ, ಜೈಲಲ್ಲಿ ಕೊಳೆಯುತ್ತಿರುವ ಮಾನವ ಹಕ್ಕು ಹೋರಾಟಗಾರರು ಇವೆಲ್ಲವೂ ಭಾರತದಲ್ಲಿ ಪ್ರಜಾಸತ್ತೆಯ ಸ್ಥಿತಿಗತಿಗಳನ್ನು ಹೇಳುತ್ತಿವೆ. ಒಬಾಮಾ ಅವರು ಹೊಸ ಆರೋಪಗಳನ್ನೇನೂ ಮಾಡಿಲ್ಲ.

ಆದರೆ ಇದಕ್ಕೆ ಭಾರತದ ನಾಯಕರು ತೀರಾ ಕೆಳಮಟ್ಟದ ಭಾಷೆಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘‘ಜಗತ್ತೆಲ್ಲ ಒಂದೇ ಎಂಬ ತತ್ವವನ್ನು ಭಾರತ ಪಾಲಿಸುತ್ತಿದೆ’’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಒಬಾಮಾ ಅವರಿಗೆ ಪ್ರತ್ಯುತ್ತರಿಸಿದ್ದಾರೆ. ಅಷ್ಟೇ ಅಲ್ಲ ‘‘ನೀವು ಅಧ್ಯಕ್ಷರಾಗಿದ್ದಾಗ ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಸಿದ ದಾಳಿಗಳನ್ನು ನೆನಪಿಸಿಕೊಳ್ಳಿ’’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೋರ್ವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ‘‘ಭಾರತ ಅತಿ ದೊಡ್ಡ ಪ್ರಜಾಸತ್ತಾತ್ಮಕ ದೇಶ. ಪ್ರಜಾಪ್ರಭುತ್ವ ಹೊಂದಿದ ದೇಶಗಳಿಗೆ ಭಾರತ ತಾಯಿಯ ಸ್ಥಾನದಲ್ಲಿದೆ’’ ಎಂದು ಒಬಾಮಾ ಅವರಿಗೆ ತಿಳಿ ಹೇಳಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರಂತೂ ಅತ್ಯಂತ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ ‘‘ಒಬಾಮಾ ಅವರು ಅಧಿಕಾರದಲ್ಲಿದ್ದಾಗ ಆರು ಮುಸ್ಲಿಮ್ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ಮಾಡಿದ್ದಾರೆ’’ ಎಂದು ನೆನಪಿಸಿದ್ದಾರೆ. ಒಬಾಮಾ ಅವರ ಅಧಿಕಾರಾವಧಿಯಲ್ಲಿ ಅವರು ಮಾಡಿದ ತಪ್ಪುಗಳನ್ನು ಮುಂದಿಟ್ಟುಕೊಂಡು ಮೋದಿಯ ಮೇಲಿನ ಇಂದಿನ ಆರೋಪಗಳನ್ನು ಸಮರ್ಥಿಸಿಕೊಳ್ಳುವುದೆಂದರೆ ಪರೋಕ್ಷವಾಗಿ ಆರೋಪಗಳನ್ನು ಒಪ್ಪಿಕೊಂಡಂತೆಯೇ ಸರಿ.

‘ಜಗತ್ತೆಲ್ಲ ಒಂದೇ ಎನ್ನುವ ತತ್ವವನ್ನು ಭಾರತ ಪಾಲಿಸುತ್ತಿದೆ’ ಎನ್ನುವುದರ ಬಗ್ಗೆ ಒಬಾಮಾ ಅವರು ಎಂದಿಗೂ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ. ಭಾರತದ ಬಗ್ಗೆ ಅಗಾಧ ಗೌರವ ಇಟ್ಟುಕೊಂಡ ಕಾರಣಕ್ಕಾಗಿಯೇ ಅವರು ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ದಾಳಿಗಳು ನಿಧಾನಕ್ಕೆ ದೇಶವನ್ನು ಧಾರ್ಮಿಕವಾಗಿ ಇಬ್ಭಾಗಿಸುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಅವರು ಟೀಕಿಸಿರುವುದು ಭಾರತವನ್ನಲ್ಲ, ಮೋದಿ ಸರಕಾರದ ಆಡಳಿತ ವೈಖರಿಯನ್ನು. ಜಗತ್ತೆಲ್ಲ ಒಂದೇ ಎಂದು ಭಾವಿಸುವ ಭಾರತದ ವರ್ಚಸ್ಸಿಗೆ ಮೋದಿ ಸರಕಾರದ ಆಡಳಿತದಿಂದ ಧಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದ್ದ ಕಾರಣದಿಂದಲೇ ಅವರು ಭಾರತದ ಬೆಳವಣಿಗೆಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ವಿಶ್ವದ ತಾಯಿ ಎಂದು ಗುರುತಿಸಲ್ಪಟ್ಟಿರುವ ಭಾರತದ ಪ್ರಜಾಪ್ರಭುತ್ವ, ಮೋದಿಯ ಆಡಳಿತದಲ್ಲಿ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರು ಒಂದೋ ಆರೋಪಗಳನ್ನು ನಿರಾಕರಿಸಬೇಕು ಅಥವಾ ಅದನ್ನು ಸರಿಪಡಿಸುವ ಮೂಲಕ ಭಾರತದ ಹಿರಿಮೆಯನ್ನು ಕಾಪಾಡುವ ಭರವಸೆಯನ್ನು ವಿಶ್ವಕ್ಕೆ ನೀಡಬೇಕು. ಅದರ ಬದಲಿಗೆ , ಒಬಾಮಾ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳನ್ನು ಮುಂದಿಟ್ಟು ತನ್ನ ಕೃತ್ಯಗಳನ್ನು ಸಮರ್ಥಿಸಲು ಮುಂದಾಗುವುದು ಭಾರತಕ್ಕೆ ಶೋಭೆ ತರುವುದಿಲ್ಲ. ಒಬಾಮಾ ಮುಸ್ಲಿಮ್ ದೇಶಗಳ ಮೇಲೆ ದಾಳಿ ನಡೆಸಿದ್ದಾರೆ ಎನ್ನುವುದು ನಿಜ. ಆದರೆ ಆ ಕೃತ್ಯ, ಮೋದಿ ಸರಕಾರ ಭಾರತದಲ್ಲಿ ತನ್ನದೇ ಜನರ ಮೇಲೆ ದೌರ್ಜನ್ಯ ಎಸಗಲು ಪರವಾನಿಗೆಯಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News