ದೇಶದ ಮಹಿಳೆಯರ ಪಾಲಿಗೆ ಅಪಾಯಕಾರಿಯಾದ ಆಸ್ಪತ್ರೆಗಳು

Update: 2024-08-17 05:05 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ವೈದ್ಯೆಯೊಬ್ಬರನ್ನು ಬರ್ಬರ ಅತ್ಯಾಚಾರ ಎಸಗಿ ಕೊಂದು ಹಾಕಿರುವ ಪ್ರಕರಣ ರಾಜಕೀಯ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ದೇಶದ ವೈದ್ಯರು ಈ ಕೃತ್ಯದ ವಿರುದ್ಧ ಒಂದಾಗಿದ್ದಾರೆ ಮಾತ್ರವಲ್ಲ, ದೇಶಾದ್ಯಂತ ಬಂದ್ ನಡೆಸುವುದಕ್ಕೆ ಮುಂದಾಗಿದ್ದಾರೆ. ಸಾಧಾರಣವಾಗಿ ವೈದ್ಯರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತವೆ. ವೈದ್ಯರು ಈ ಹಲ್ಲೆಗಳ ವಿರುದ್ಧ ಹಲವು ಬಾರಿ ಬೀದಿಗಿಳಿದಿದ್ದು, ಇಂತಹ ದಾಳಿಗಳು ನಡೆಯದಂತೆ ಸರಕಾರವೂ ಕಾನೂನನ್ನು ಬಿಗಿಗೊಳಿಸಿದೆ. ಅನೇಕ ಸಂದರ್ಭಗಳಲ್ಲಿ ವೈದ್ಯರ ಬೇಜವಾಬ್ದಾರಿಯೂ ಇಂತಹ ದಾಳಿಗಳಿಗೆ ಕಾರಣವಾಗುತ್ತದೆ. ತಮ್ಮ ಪರವಾಗಿರುವ ಕಾನೂನನ್ನು ಕೆಲವು ಬಾರಿ ಬೇಜವಾಬ್ದಾರಿಗಳನ್ನು ಮುಚ್ಚಿ ಹಾಕಲು ದುರುಪಯೋಗಗೊಳಿಸುವುದೂ ಇದೆ. ಆದರೆ ಕೋಲ್ಕತಾದಲ್ಲಿ ಘಟಿಸಿರುವುದು ಭಿನ್ನವಾದ ಪ್ರಕರಣ. ಆಕೆ ವೈದ್ಯಳಾದ ಕಾರಣಕ್ಕಾಗಿಯೇ ಅಪರಾಧಿ ಈ ಕೃತ್ಯವನ್ನು ಎಸಗಿದ್ದಾನೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟವಿಲ್ಲ. ಒಬ್ಬ ವೈದ್ಯೆ ಎನ್ನುವುದಕ್ಕಿಂತ ಒಬ್ಬ ಮಹಿಳೆಯ ಮೇಲೆ ನಡೆದ ಬರ್ಬರ ದೌರ್ಜನ್ಯವಾಗಿ ಇದನ್ನು ಪರಿಗಣಿಸಿ, ವೈದ್ಯರ ಜೊತೆಗೆ ಜನತೆ ಕೈ ಜೋಡಿಸಬೇಕಾಗಿದೆ. ಇದು ವೈದ್ಯರಿಗೆ ಸಿಗಬೇಕಾದ ನ್ಯಾಯ ಮಾತ್ರವಲ್ಲ, ಸಹಸ್ರಾರು ಬಾರಿ ಅತ್ಯಾಚಾರಕ್ಕೊಳಗಾಗಿ, ದೌರ್ಜನ್ಯಕ್ಕೊಳಗಾಗಿ ಇನ್ನೂ ತುಸು ಜೀವ ಉಳಿಸಿಕೊಂಡಿರುವ ಮನುಷ್ಯನ ಘನತೆಗೆ ಸಿಗಬೇಕಾದ ನ್ಯಾಯವಾಗಿದೆ.

ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರ ಮೇಲೆ, ದಾದಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಬೇರೆ ಬೇರೆ ಮುಖಗಳಿವೆ. ಆಸ್ಪತ್ರೆಗಳಲ್ಲಿ ಪುರುಷ ವೈದ್ಯರು ಕರ್ತವ್ಯ ನಿರ್ವಹಿಸಿದಷ್ಟು ಸುಲಭವಾಗಿ ಮಹಿಳಾ ವೈದ್ಯರು ಕಾರ್ಯನಿರ್ವಹಿಸುವ ವಾತಾವರಣ ಇನ್ನೂ ಈ ದೇಶದಲ್ಲಿಲ್ಲ. 70ರ ದಶಕದಲ್ಲಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಅರುಣಾ ಶಾನ್‌ಭಾಗ್ ಎನ್ನುವ ದಾದಿಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಹಲ್ಲೆ ದೇಶಾದ್ಯಂತ ಸುದ್ದಿಯಾಗಿತ್ತು. ಈ ದುರ್ಘಟನೆಯಲ್ಲಿ ಸೋಹನ್ ಲಾಲ್ ವಾಲ್ಮೀಕಿ ಎಂಬ ವ್ಯಕ್ತಿ ದಾದಿಯ ಕುತ್ತಿಗೆಗೆ ನಾಯಿಯ ಸರಪಳಿಯನ್ನು ಬಿಗಿದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂದರ್ಭದಲ್ಲಿ ಆಕೆ ಕೋಮಾವಸ್ಥೆಯನ್ನು ತಲುಪಿದ್ದರು. ಮುಂದೆ ಈಕೆ ಸುಮಾರು 42 ವರ್ಷಗಳನ್ನು ಕೋಮಾವಸ್ಥೆಯಲ್ಲೇ ಕಳೆದು, ಬಳಿಕ ಮೃತಪಟ್ಟರು. ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ದಾದಿಯರ ಯೋಗಕ್ಷೇಮಗಳು ಸಾಕಷ್ಟು ಚರ್ಚೆಯಾಗಿದ್ದವು. ಇದಾದ ಬಳಿಕವೂ ಆಸ್ಪತ್ರೆಗಳಲ್ಲಿ ಇಂತಹ ಬರ್ಬರ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆಸ್ಪತ್ರೆಗಳಲ್ಲಿ ಕೇವಲ ವೈದ್ಯರ ಮೇಲೆ ಅಥವಾ ದಾದಿಯರ ಮೇಲೆ ಮಾತ್ರ ಅತ್ಯಾಚಾರ, ದೌರ್ಜನ್ಯಗಳು ನಡೆದಿರುವುದಲ್ಲ. ಕಳೆದ ಫೆಬ್ರವರಿ ತಿಂಗಳಲ್ಲಿ ರಾಜಸ್ಥಾನದ ಆಲ್ವಾರ್ ಆಸ್ಪತ್ರೆಯಲ್ಲಿ ಶ್ವಾಸಕೋಶದ ಕಾಯಿಲೆಗಾಗಿ ಐಸಿಯುವಿನಲ್ಲಿ ದಾಖಲಾಗಿದ್ದ 24 ವರ್ಷದ ಮಹಿಳೆಯ ಮೇಲೆ, ಪುರುಷ ನರ್ಸ್ ಒಬ್ಬ ಬರ್ಬರವಾಗಿ ಅತ್ಯಾಚಾರ ಎಸಗಿದ್ದ. ಬಳಿಕ ಆರೋಪಿಯನ್ನು ಬಂಧಿಸಲಾಯಿತು. ಕೆಲವು ವರ್ಷಗಳ ಹಿಂದೆ ಹರ್ಯಾಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ದುಷ್ಕರ್ಮಿಯೊಬ್ಬ ಚೊಚ್ಚಲ ಬಾಣಂತಿಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿತ್ತು. ಮಹಿಳೆ ಸಹಾಯಕ್ಕಾಗಿ ಕೂಗುತ್ತಿದ್ದರೂ ಯಾರೊಬ್ಬರೂ ಸ್ಪಂದಿಸಿರಲಿಲ್ಲ ಎನ್ನುವುದು ತನಿಖೆಯ ಸಂದರ್ಭದಲ್ಲಿ ಗೊತ್ತಾಗಿದೆ.

ಅನೇಕ ಸಂದರ್ಭದಲ್ಲಿ ವೈದ್ಯರಿಂದಲೇ ದಾದಿಯರ ಮೇಲೆ, ವೈದ್ಯೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುವುದಿದೆ. ದಾದಿಯರಂತೂ ಆಸ್ಪತ್ರೆಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ಹಲವು ಒತ್ತಡಗಳನ್ನು ಎದುರಿಸುತ್ತಾ ತಮ್ಮ ವೃತ್ತಿಯನ್ನು ನಿರ್ವಹಿಸಬೇಕಾಗುತ್ತದೆ. ಒಂದೆಡೆ ಆಕೆ ರೋಗಿಗಳ ಪೋಷಕರಿಂದ ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲ ಏರುಪೇರುಗಳ ಮೊದಲ ಗುರಿ ಈ ಮಹಿಳಾ ನರ್ಸ್‌ಗಳೇ ಆಗಿರುತ್ತಾರೆ. ಇನ್ನೊಂದೆಡೆ ಅವರು ವೈದ್ಯರಿಂದಲೂ ಶೋಷಣೆಗೊಳಗಾಗಬೇಕಾಗುತ್ತದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ದಾದಿಯರ ಸ್ಥಿತಿಯಂತೂ ಅತ್ಯಂತ ದಯನೀಯವಾಗಿರುತ್ತದೆ. ಇಷ್ಟಾದರೂ ತಮಗಾಗುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುವ ಹಕ್ಕು ಅವರಿಗಿರುವುದಿಲ್ಲ . ಒಂದು ವೇಳೆ ಮಾತನಾಡಿದ್ದೇ ಆದರೆ ಅವರು ತಮ್ಮ ವೃತ್ತಿಯನ್ನು ತೊರೆಯಬೇಕಾಗುತ್ತದೆ. ಕೋಲ್ಕತಾದ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಈ ಎಲ್ಲ ಹಿನ್ನೆಲೆಯನ್ನಿಟ್ಟುಕೊಂಡು ನೋಡಬೇಕಾಗುತ್ತದೆ. ತನ್ನ ಸಿಬ್ಬಂದಿಯ ಯೋಗಕ್ಷೇಮವನ್ನು ನೋಡಿಕೊಳ್ಳಲು ವಿಫಲವಾದ ಸಂಸ್ಥೆಯ ಮುಖ್ಯಸ್ಥರೇ ಇದಕ್ಕೆ ಮೊದಲ ಹೊಣೆಗಾರರಾಗುತ್ತಾರೆ. ಹಗಲು ರಾತ್ರಿ ರೋಗಿಗಳ ಯೋಗಕ್ಷೇಮಕ್ಕಾಗಿ ದುಡಿಯುವ ವೈದ್ಯೆಯರಿಗೆ ರಕ್ಷಣೆ ನೀಡಬೇಕಾಗಿರುವುದು ಆಯಾ ಆಸ್ಪತ್ರೆಗಳ ಹೊಣೆಗಾರಿಕೆಯಾಗಿದೆ. ಆದುದರಿಂದ ಆಡಳಿತ ಮುಖ್ಯಸ್ಥರ ಮೇಲೆ ಕ್ರಮಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಅತ್ಯಂತ ವಿಪರ್ಯಾಸವೆಂದರೆ, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರ ಮೇಲೆ ದುಷ್ಕರ್ಮಿಗಳು ಗುರುವಾರ ದಾಳಿ ನಡೆಸಿದ್ದಾರೆ ಮಾತ್ರವಲ್ಲ, ಆಸ್ಪತ್ರೆಗೂ ಹಾನಿಯೆಸಗಿದ್ದಾರೆ. ನ್ಯಾಯಕ್ಕಾಗಿ ವೈದ್ಯರು ಪ್ರತಿಭಟಿಸುವುದು ಕೆಲವು ದುಷ್ಕರ್ಮಿಗಳಿಗೆ ಬೇಕಾಗಿಲ್ಲ ಎನ್ನುವುದನ್ನು ಇದು ಹೇಳಿದೆ. ಕೃತ್ಯಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆಯಾದರೂ, ಪ್ರಕರಣ ಪಡೆಯುತ್ತಿರುವ ತಿರುವುಗಳನ್ನು ಗಮನಿಸಿದರೆ, ಇನ್ನಷ್ಟು ಮಂದಿ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಕಾಣುತ್ತಿವೆ. ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬ ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ಆರೋಪ ಮಾಡಿರುವುದು ಕೆಲವರನ್ನು ಕೆರಳಿಸಿದೆ. ಮಹಿಳೆಯ ಮೇಲೆ ನಡೆದಿರುವ ಈ ಭೀಕರ ದೌರ್ಜನ್ಯವನ್ನು ಮಹಿಳೆಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು. ವಿರೋಧ ಪಕ್ಷಗಳನ್ನು ಬೆಟ್ಟು ಮಾಡಿ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮುಖ್ಯವಾಗಿ ಬಿಜೆಪಿ ಈ ಕೃತ್ಯವನ್ನು ನಿಜಕ್ಕೂ ಪ್ರಾಮಾಣಿಕವಾಗಿ ವಿರೋಧಿಸುತ್ತಿದೆಯೇ ಎನ್ನುವುದು ಕೂಡ ಮುಖ್ಯವಾಗಿದೆ. ಪಶ್ಚಿಮಬಂಗಾಳವನ್ನು ಯಾವ ಪಕ್ಷ ಆಳುತ್ತಿದೆ ಎನ್ನುವ ಆಧಾರದ ಮೇಲೆ ಪ್ರಕರಣದ ಗಂಭೀರತೆಯನ್ನು ಅಳೆಯುವುದು ಸರಿಯಲ್ಲ. ದೇಶ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗಾಗಿ ಅಂತರ್‌ರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ದಲಿತ ಮಹಿಳೆಯರ ಮೇಲೆ ಇಂತಹ ದೌರ್ಜನ್ಯಗಳು ದಿನನಿತ್ಯ ಸುದ್ದಿಯಾಗುತ್ತದೆಯಾದರೂ, ಅದು ಮಹತ್ವವನ್ನು ಪಡೆಯುವುದಿಲ್ಲ. ಇಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಹತ್ವ ಪಡೆಯಬೇಕಾದರೆ, ಸಂತ್ರಸ್ತರು ಮೇಲ್‌ಜಾತಿ, ಮೇಲ್‌ವರ್ಗಕ್ಕೆ ಸೇರಿದವರಾಗಿರಬೇಕಾಗುತ್ತದೆ. ಆಗ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ವಿಪರ್ಯಾಸವೆಂದರೆ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಮಹಿಳೆಯರು ಮೇಲ್‌ವರ್ಗಕ್ಕೆ ಸೇರಿದರೂ ಅಸಹಾಯಕರಾಗಬೇಕಾಯಿತು. ಯಾಕೆಂದರೆ, ಆರೋಪಿಸ್ಥಾನದಲ್ಲಿ ಈ ದೇಶದ ಸಂಸ್ಕೃತಿ ರಕ್ಷಣೆಯ ಗುತ್ತಿಗೆಯನ್ನು ತೆಗೆದುಕೊಂಡ ಪಕ್ಷದ ಸಂಸದನೇ ನಿಂತಿದ್ದ.

ಸಂತ್ರಸ್ತ ವೈದ್ಯೆಯ ಪರವಾಗಿ ದೇಶಾದ್ಯಂತ ವೈದ್ಯರು ಶನಿವಾರ ಹಮ್ಮಿಕೊಂಡಿರುವ ಪ್ರತಿಭಟನೆಗೆ ದೇಶದ ಎಲ್ಲ ವರ್ಗದ, ಎಲ್ಲ ಸಮುದಾಯದ ಜನರೂ ಕೈಜೋಡಿಸಬೇಕಾಗಿದೆ. ಈ ಹೋರಾಟ ಆಸ್ಪತ್ರೆಗಳಲ್ಲಿ ದೌರ್ಜನ್ಯಕ್ಕೊಳಗಾಗುವ ಎಲ್ಲ ವರ್ಗದ ಮಹಿಳೆಯರಿಗೂ ನ್ಯಾಯ ನೀಡುವಂತಾಗಲಿ. ಕೆಂಪುಕೋಟೆಯಲ್ಲಿ ನಿಂತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಭಾಷಣ ಮಾಡಿದ ಪ್ರಧಾನಿಗೆ, ದೇಶದಲ್ಲಿ ಮಾನ, ಪ್ರಾಣವನ್ನು ಅಂಗೈಯಲ್ಲಿಟ್ಟು ಬದುಕುತ್ತಿರುವ ಪ್ರತೀ ಮಹಿಳೆಯ ನೋವಿನ ಕೂಗು ಕೇಳುವಂತಾಗಲಿ. ಸಂತ್ರಸ್ತ ಮತ್ತು ಆರೋಪಿಯ ವರ್ಗ, ಧರ್ಮ, ಜಾತಿಯ ಮಾನದಂಡದ ಆಧಾರದಲ್ಲಿ ಪ್ರಕರಣದ ಗಂಭೀರತೆಯನ್ನು ನಿರ್ಧರಿಸುವ ಮನಸ್ಥಿತಿಯಿಂದ ಹೊರ ಬಂದು, ದೌರ್ಜನ್ಯಕ್ಕೊಳಗಾಗುವ ಎಲ್ಲ ಮಹಿಳೆಯರ ಮಾನ ಪ್ರಾಣ ರಕ್ಷಣೆಗೆ ಕಠಿಣ ಕಾನೂನು ರೂಪುಗೊಳ್ಳಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News