ರಾಜ್ಯ ಸರಕಾರದ ಮುಖಕ್ಕೆ ಕಂಬಳದ ಕೆಸರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರಾವಳಿಯ ಜಾನಪದ ಕ್ರೀಡೆ ಎಂದು ಗುರುತಿಸಿಕೊಂಡು ಬಂದಿರುವ ಕಂಬಳ ಕೆಲವು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿ, ಚರ್ಚೆಯಲ್ಲಿದೆ. ಕರಾವಳಿಯ ಭೂಮಾಲಕ ವರ್ಗ ಕಂಬಳವನ್ನು ತಲೆತಲಾಂತರಗಳಿಂದ ಪೋಷಿಸಿಕೊಂಡು ಬರುತ್ತಿದೆ ಮತ್ತು ಈ ಕಂಬಳದ ಹೆಸರಿನಲ್ಲಿ ಜಾತಿ ಶ್ರೇಣೀಕರಣವನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎನ್ನುವ ಆರೋಪವನ್ನು ದಶಕಗಳ ಹಿಂದೆಯೇ ಹಲವು ವೈಚಾರಿಕ ಚಿಂತಕರು, ವಿದ್ವಾಂಸರು ಮಾಡಿದ್ದಾರೆ. ಮೊತ್ತ ಮೊದಲು ಕಂಬಳದ ಹೆಸರಿನಲ್ಲಿ ಪೋಷಿಸಿಕೊಂಡು ಬಂದ ಅಜಲು ಪದ್ಧತಿ ತೀವ್ರ ಚರ್ಚೆಗೆ ಒಳಗಾಯಿತು. ಕಂಬಳದ ಸಂದರ್ಭದಲ್ಲಿ ಕೊರಗರನ್ನು ಶೋಷಿಸಲಾಗುತ್ತಿದೆ ಎನ್ನುವ ಆರೋಪವನ್ನು ಹಲವರು ಮಾಡಿದಾಗ ಜಿಲ್ಲಾಡಳಿತವೂ ಮಧ್ಯ ಪ್ರವೇಶಿಸಬೇಕಾಯಿತು. ಕಂಬಳದ ಹಿಂದಿನ ದಿನ ಕೊರಗರು ರಾತ್ರಿಯಿಡೀ ಡೋಲು ಬಾರಿಸುವುದು, ‘ಪನಿ ಕುಲ್ಲುನು’ ಹೆಸರಿನಲ್ಲಿ ರಾತ್ರಿಯಿಡೀ ಕಂಬಳ ಗದ್ದೆಯನ್ನು ಕಾಯುವುದು, ಕೋಣ ಓಡಿಸುವ ಮೊದಲು ಕಂಬಳ ಕರೆಯಲ್ಲಿ ಕೊರಗರನ್ನು ಓಡಿಸುವುದು ಇವೆಲ್ಲ ಪದ್ಧತಿಗಳು ಅಜಲು ಪದ್ಧತಿಯ ಬೇರೆ ಬೇರೆ ಮುಖಗಳೇ ಆಗಿವೆ. ಜನರು ಜಾಗೃತರಾಗಿರುವ ಕಾರಣದಿಂದ, ಕೊರಗರನ್ನು ಈ ಕೆಲಸಗಳಿಗೆ ದುರ್ಬಳಕೆ ಮಾಡುವುದನ್ನು ಭಾಗಶಃ ನಿಲ್ಲಿಸಲಾಗಿದೆಯಾದರೂ, ಸಂಸ್ಕೃತಿಯ ಹೆಸರಿನಲ್ಲಿ ಗುಟ್ಟಾಗಿ ಅಥವಾ ಪರೋಕ್ಷವಾಗಿ ಕೊರಗರನ್ನು ಕಂಬಳಕ್ಕೆ ಈಗಲೂ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವಿದೆ. ಕೊರಗ ಸಂಘಟನೆಗಳು ಕೂಡ ಈ ಬಗ್ಗೆ ಧ್ವನಿಯೆತ್ತುತ್ತಲೇ ಬಂದಿವೆ.
ಇದೇ ಸಂದರ್ಭದಲ್ಲಿ, ಕಂಬಳದ ವಿರುದ್ಧ ಪ್ರಾಣಿದಯಾ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಮನರಂಜನೆಗಾಗಿ ಕೋಣಗಳಿಗೆ ನೀಡುವ ಹಿಂಸೆಯನ್ನು ಮುಂದಿಟ್ಟು ಕೆಲವರು ಕಂಬಳವನ್ನು ಪ್ರಶ್ನಿಸಿದ್ದರು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧವಾದಾಗ, ಅದು ಕಂಬಳಕ್ಕೂ ಅನ್ವಯವಾಯಿತು. ರಾಜ್ಯದಲ್ಲಿ ಮನುಷ್ಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಹೋಲಿಸಿದರೆ, ದಲಿತರಿಗೆ ಆಗುವ ಅವಮಾನಗಳಿಗೆ, ಮಹಿಳೆಯರ ಮೇಲೆ ನಡೆಯುವ ಹಲ್ಲೆಗಳಿಗೆ ಹೋಲಿಸಿದರೆ ಕ್ರೀಡೆಯ ಹೆಸರಿನಲ್ಲಿ ನಡೆಯುವ ಕಂಬಳದಲ್ಲಿ ಪ್ರಾಣಿ ದಯಾ ಸಂಘಗಳು ಊಹಿಸುವಷ್ಟು ದೊಡ್ಡ ಹಿಂಸೆಯೇನೂ ನಡೆಯುತ್ತಿಲ್ಲ. ಜಲ್ಲಿಕಟ್ಟಿನಲ್ಲಿ ಸಂಭವಿಸುವ ಪ್ರಾಣಾಪಾಯಗಳು, ಹಿಂಸೆಗಳು ಕಂಬಳದಲ್ಲಿ ತೀರಾ ಕಡಿಮೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಜನಸಾಮಾನ್ಯರ ಪಾಲಿನ ಸಾಹಸ ಕ್ರೀಡೆಯಾಗಿದ್ದು, ಇದನ್ನು ನಿಷೇಧಿಸಿದರೆ ಅಲ್ಲಿನ ತಳಸ್ತರದ ಬಹುಸಂಖ್ಯಾತರ ಜನರ ವಿರೋಧವನ್ನು ಸ್ಥಳೀಯ ಸರಕಾರ ಕಟ್ಟಿಕೊಳ್ಳಬೇಕಾಗಿತ್ತು. ಕರಾವಳಿಯಲ್ಲಿ ‘ಕೋಳಿ ಅಂಕ’ ಇದ್ದ ಹಾಗೆ ಕಂಬಳ ತಳಸ್ತರದ ಜನರ ಕ್ರೀಡೆಯಾಗಿ ಜನಪ್ರಿಯವಾಗಿಲ್ಲ. ಇದು ಉಳ್ಳವರ ದುಬಾರಿ ಮತ್ತು ಪ್ರತಿಷ್ಠೆಯ ಕ್ರೀಡೆ. ಆದುದರಿಂದ, ಕರಾವಳಿಯಲ್ಲಿ ಈ ಉಳ್ಳವರ ವಿರೋಧ ಕಟ್ಟಿಕೊಳ್ಳುವುದು ಸ್ಥಳೀಯ ರಾಜಕಾರಣಿಗಳಿಗೂ ಇಷ್ಟವಿದ್ದಂತಿರಲಿಲ್ಲ. ರಾಜಕೀಯ ಒತ್ತಡಗಳು ಬಿದ್ದ ಕಾರಣದಿಂದಲೇ ಇರಬೇಕು, ಕಳೆದ ಮೇ ತಿಂಗಳಲ್ಲಿ ಜಲ್ಲಿಕಟ್ಟು ಮತ್ತು ಕಂಬಳಗಳ ಮೇಲಿನ ನಿಷೇಧ ವಜಾಗೊಂಡಿತು. ‘‘ಪರಂಪರೆಯ ಭಾಗವೆಂದು ಶಾಸಕಾಂಗವು ಘೋಷಿಸಿರುವಾಗ ನ್ಯಾಯಾಂಗ ವಿಭಿನ್ನ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’’ ಎಂದು ನ್ಯಾಯಾಲಯ ತನ್ನ ಅಸಹಾಯಕತೆ ವ್ಯಕ್ತಪಡಿಸಿತು.
ಇದೀಗ ಕರ್ನಾಟಕದಲ್ಲಿ ಕಂಬಳ ಬೇರೆಯೇ ಕಾರಣಕ್ಕೆ ಸುದ್ದಿಯಲ್ಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವ ಅಧ್ಯಕ್ಷರಾಗಿರುವ, ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷರಾಗಿರುವ ಬೆಂಗಳೂರು ಕಂಬಳ ಸಮಿತಿಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಕಂಬಳ ಕಾರ್ಯಕ್ರಮವು ಅದರ ಅತಿಥಿಗಳ ಕಾರಣಕ್ಕಾಗಿ ವಿವಾದಕ್ಕೊಳಗಾಗಿದೆ. ಕಂಬಳದ ಮುಖ್ಯಅತಿಥಿಯಾಗಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅಂತರ್‌ರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಕಾರಣಕ್ಕಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರೀಡಾ ಕ್ಷೇತ್ರಕ್ಕೆ ಮಸಿ ಬಳಿದಿರುವ, ಈ ದೇಶದ ಹೆಮ್ಮೆಯ ಕ್ರೀಡಾಪಟುಗಳು ಬೀದಿಗೆ ಬೀಳುವಂತೆ ಮಾಡಿದ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷನನ್ನು ಕರ್ನಾಟಕಕ್ಕೆ ಕರೆ ತಂದಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಇಡೀ ಆಹ್ವಾನ ಪತ್ರಿಕೆ ಬಿಜೆಪಿಯ ಮುಖವಾಹಿನಿಯಂತಿರುವುದು ಒಂದಾದರೆ, ಈಗಾಗಲೇ ಮಹಿಳಾ ಕ್ರೀಡಾ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕ್ರೀಡಾ ಕ್ಷೇತ್ರಕ್ಕೆ ಕೆಸರೆರಚಿದ ಸಂಸದನನ್ನು ಬೆಂಗಳೂರಿಗೆ ಆಹ್ವಾನಿಸುವ ಮೂಲಕ ಯಾವ ಸಂಸ್ಕೃತಿಯನ್ನು ಮೆರೆಸುವುದಕ್ಕೆ ಕಂಬಳ ಸಮಿತಿ ಹೊರಟಿದೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಕಂಬಳ ಸಮಿತಿಯನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದ್ದು, ತನ್ನನ್ನು ತಾನು ಒಂದು ನಿರ್ದಿಷ್ಟ ಜಾತಿಯ ಶಾಸಕನೆಂದು ಘೋಷಿಸಲು ಹೊರಟಿದ್ದಾರೆಯೇ ಎಂದು ಕರಾವಳಿಯ ಜನರು ಪ್ರಶ್ನಿಸುತ್ತಿದ್ದಾರೆ.
ಸಿದ್ದಿ ಸಮುದಾಯದ ಕುಸ್ತಿಪಟುಗಳಿಗೆ ತರಬೇತಿ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಬ್ರಿಜ್ ಭೂಷಣ್‌ನನ್ನು ಆಹ್ವಾನಿಸಿದ್ದೇವೆ ಎಂದು ಸಮಿತಿ ಅಧ್ಯಕ್ಷರು ಸ್ಪಷ್ಟೀಕರಣ ನೀಡಿದ್ದಾರೆ. ಅವರು ಯಾರಿಗೆ ಯಾವ ತರಬೇತಿ ನೀಡಿದ್ದಾರೆ ಎನ್ನುವುದು ಆನಂತರದ ಮಾತು. ಅವರು ಅಂತರ್‌ರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮಾತ್ರವಲ್ಲ , ಅವರ ಕ್ರೀಡಾ ಬದುಕನ್ನೇ ಕತ್ತಲಿಗೆ ತಳ್ಳಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇಂದು ಆತ ಚರ್ಚೆಯಲ್ಲಿರುವುದು ಇದೇ ಕಾರಣಕ್ಕಾಗಿ. ಇದು ಕಂಬಳ ಸಮಿತಿಯ ಅಧ್ಯಕ್ಷರಿಗೆ ಯಾಕೆ ಗೊತ್ತಾಗಲಿಲ್ಲ? ಈ ಸಂಘಪರಿವಾರದ ಹಿನ್ನೆಲೆಯ ಸಂಸದನನ್ನು ಆಹ್ವಾನಿಸಿರುವ ಮಾಹಿತಿಯನ್ನು ಸಮಿತಿಯ ಗೌರವಾಧ್ಯಕ್ಷರಾಗಿರುವ ಡಿ. ಕೆ. ಶಿವಕುಮಾರ್ ಅವರಿಗೆ ಮುಚ್ಚಿಡಲಾಗಿದೆಯೆ? ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಂಘಪರಿವಾರದ ಜೊತೆಗೆ ಒಳ ಮೈತ್ರಿಯನ್ನು ಮಾಡಿಕೊಂಡಿದೆಯೆ? ಎನ್ನುವ ಬಗೆ ಬಗೆಯ ಪ್ರಶ್ನೆಗಳು ತಲೆಯೆತ್ತುತ್ತಿವೆ. ಲೈಂಗಿಕ ದೌರ್ಜನ್ಯ, ಅಶ್ಲೀಲ ಸಿಡಿಗಳೆಲ್ಲವೂ ಬಿಜೆಪಿಯ ಸಂಸ್ಕೃತಿ ಎಂದು ಟೀಕಿಸುವ ಕಾಂಗ್ರೆಸ್ ಸರಕಾರವೇ, ಆ ಸಂಸ್ಕೃತಿಗೆ ಮಣೆ ಹಾಕಲು ಹೊರಟಿರುವುದು ಎಷ್ಟು ಸರಿ? ಈಗಾಗಲೇ ಲೈಂಗಿಕ ದೌರ್ಜನ್ಯದ ಕೆಸರನ್ನು ಮೆತ್ತಿಕೊಂಡಿರುವ ಸಂಸದ ಬ್ರಿಜ್‌ಭೂಷಣ್‌ರನ್ನು ಬೆಂಗಳೂರಿನ ಕಂಬಳ ಗದ್ದೆಯ ಕೆಸರು ನೀರಿನಲ್ಲಿ ಶುಚಿಗೊಳಿಸಲು ಹೊರಟಿದ್ದಾರೆಯೇ ಮಾಜಿ ಸಂಘಪರಿವಾರ ನಾಯಕರಾಗಿರುವ ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ? ಅವರು ಎರಚಿದ ಕಂಬಳದ ಕೆಸರು ಸರಕಾರದ ಮುಖಕ್ಕೇ ಬಿದ್ದಿದೆ. ಇದೀಗ ‘‘ಸಂಸದ ಬ್ರಿಜ್ ಭೂಷಣ್ ಕಾರ್ಯಕ್ರಮಕ್ಕೆ ಬರುವುದಿಲ್ಲ’’ ಎನ್ನುವ ಸ್ಪಷ್ಟೀಕರಣವನ್ನು ಸಮಿತಿಯ ಅಧ್ಯಕ್ಷರು ನೀಡಿದ್ದಾರಾದರೂ, ಜನರ ವಿರೋಧಕ್ಕೆ ಮಣಿದು ಆತನನ್ನು ಸಮಾರಂಭದಿಂದ ಕೈ ಬಿಟ್ಟಿರುವುದಲ್ಲ. ‘ಬೇರೆ ಕಾರಣಗಳಿಂದಾಗಿ ಅಂದು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಸಂಸದ ಹೇಳಿರುವುದರಿಂದ’ ಆತ ಕಂಬಳದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಕಂಬಳಕ್ಕೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಒಂದು ವೇಳೆ ಬೃಹತ್ ಕಂಬಳ ಏರ್ಪಡಿಸುವುದಿದ್ದರೆ ಕೃಷಿ ಭೂಮಿಯೂ, ಕಂಬಳದ ತವರೂ ಆಗಿರುವ ಕರಾವಳಿಯಲ್ಲೇ ಅದನ್ನು ಏರ್ಪಡಿಸಬಹುದಿತ್ತು. ಕೃಷಿಯೊಂದಿಗೆ ಯಾವ ಸಂಬಂಧವೂ ಹೊಂದಿಲ್ಲದ ಬೆಂಗಳೂರಿನಲ್ಲಿ ಕಂಬಳ ಏರ್ಪಡಿಸುವ ಔಚಿತ್ಯ ಏನಿತ್ತು ಎನ್ನುವ ಪ್ರಶ್ನೆಯೂ ಎದ್ದಿದೆ. ಒಂದೆಡೆ ಕೃಷಿಕರು ಮಳೆ ಸರಿಯಾಗಿ ಬಾರದೆ ಸಂಕಷ್ಟದಲ್ಲಿರುವಾಗ ಕಂಬಳದಂತಹ ಶೋಕಿಗೆ ಸರಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿರುವುದು ಎಷ್ಟು ಸರಿ? ಗದ್ದೆಗಳು ಉಳಿದರೆ ಕಂಬಳ ಉಳಿಯುತ್ತದೆ. ಗದ್ದೆಗಳು ಇಲ್ಲದೇ ಇದ್ದರೆ ಕೋಣವೂ ಇಲ್ಲ, ಕಂಬಳವೂ ಇಲ್ಲ. ಬರಪರಿಹಾರಕ್ಕೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಒಂದೆಡೆ ಗೋಳಾಡುತ್ತಾ ಬೆಂಗಳೂರಿನಲ್ಲಿ ಕಂಬಳಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡಿರುವುದು ಎಷ್ಟು ಸರಿ? ಎಂದು ನಾಡಿನ ರೈತರು ಸರಕಾರವನ್ನು ಕೇಳುತ್ತಿದ್ದಾರೆ. ಈ ಬ್ರಿಜ್ ಭೂಷಣ್ ಎಂಬ ದಿಲ್ಲಿಯ ಮೂಗುದಾರವಿಲ್ಲದ ಗೂಳಿಯನ್ನು ಕರ್ನಾಟಕದ ಕಂಬಳ ಕರೆಯಲ್ಲಿ ಕಟ್ಟಿ ಓಡಿಸುವುದಕ್ಕೋಸ್ಕರ ಜನಸಾಮಾನ್ಯರ ಒಂದು ಕೋಟಿ ರೂ.ಯನ್ನು ವ್ಯಯಿಸಬೇಕೆ ಎನ್ನುವ ಜನಸಾಮಾನ್ಯರ ಪ್ರಶ್ನೆಗೆ ಸರಕಾರ ಉತ್ತರಿಸಲೇ ಬೇಕು.