ಮಾದರಿಯಾಗಬೇಕಾದ ‘ಕಾಶ್ಮೀರಿಯತ್’

Update: 2025-04-25 08:30 IST
ಮಾದರಿಯಾಗಬೇಕಾದ ‘ಕಾಶ್ಮೀರಿಯತ್’

ಸೈಯದ್ ಆದಿಲ್ ಹುಸೇನ್ ಶಾ PC: NDTV | ನಝಾಕತ್ ಅಲಿ X.com

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವನ್ನು ತೆಗೆದುಕೊಳ್ಳುವ ಕುರಿತಂತೆ ಭಾರತ ಸರಕಾರ ಗಟ್ಟಿ ಹೆಜ್ಜೆಗಳನ್ನು ಮುಂದಿಡುತ್ತಿರುವುದು ಶ್ಲಾಘನಾರ್ಹವಾಗಿದೆ. ಕೃತ್ಯ ನಡೆದ ಬೆನ್ನಿಗೇ ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ಉನ್ನತ ಮಟ್ಟದ ಸಭೆ ನಡೆದಿದ್ದು, ಅದರಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡಗಳಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವುದರಿಂದ, ಪಾಕ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಭಾರತ ಕಡಿದುಕೊಂಡಿದೆ. ಮಾತ್ರವಲ್ಲ, ಸಿಂಧೂ ನದಿ ನೀರು ಒಪ್ಪಂದಕ್ಕೆ ತಡೆ ನೀಡಿದೆ. ಹಾಗೆಯೇ ಪಾಕಿಸ್ತಾನದ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿರಿ ಎಂದು ತುರ್ತು ಆದೇಶ ನೀಡಿದೆ. ನಾಳೆ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಪಾಕಿಸ್ತಾನ ಪ್ರತಿ ಕ್ರಮಗಳನ್ನು ಘೋಷಿಸಿದೆ ಮಾತ್ರವಲ್ಲ, ಶಿಮ್ಲಾ ಒಪ್ಪಂದ ಸೇರಿದಂತೆ ಎಲ್ಲ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನು ನೀಡಿದೆ. ಇದು ಅನಿರೀಕ್ಷಿತವೇನೂ ಅಲ್ಲ. ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಇಂತಹದೊಂದು ಪ್ರತಿಕ್ರಿಯೆ ಪಾಕಿಸ್ತಾನದಿಂದ ಬರುವ ಬಗ್ಗೆ ಭಾರತಕ್ಕೂ ಅರಿವಿತ್ತು. ಆದುದರಿಂದಲೇ, ಇಂತಹ ರಾಜತಾಂತ್ರಿಕ ನಿರ್ಧಾರಗಳಿಂದ ದೀರ್ಘ ಕಾಲ ಒಂದು ದೇಶವನ್ನು ಬೆದರಿಸಲು ಬರುವುದಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆಗಳು ಬರುವಾಗ ಉಭಯ ದೇಶಗಳೂ ಪರಸ್ಪರ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಭಾರತದ ಸದ್ಯದ ನಿರ್ಧಾರವನ್ನು ಕಾಶ್ಮೀರದಲ್ಲಿ ನಡೆದಿರುವ ಹಿಂಸಾಚಾರದಿಂದ ರೊಚ್ಚಿಗೆದ್ದಿರುವ ನಾಗರಿಕರನ್ನು ತಕ್ಷಣಕ್ಕೆ ಶಾಂತಗೊಳಿಸುವ ಉಪಕ್ರಮದ ಭಾಗವೆಂದು ಭಾವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಪ್ರತಿಕಾರವನ್ನಷ್ಟೇ ಅಲ್ಲ, ಕಾಶ್ಮೀರವನ್ನು ಭವಿಷ್ಯದಲ್ಲಿ ಭಯೋತ್ಪಾದಕರಿಂದ ಸಂಪೂರ್ಣ ಮುಕ್ತಗೊಳಿಸುವ ದಾರಿಯೊಂದನ್ನು ಸರಕಾರ ಇನ್ನಾದರೂ ಕಂಡುಕೊಳ್ಳಲು ಮುಂದಾಗಬೇಕಾಗಿದೆ. ಮಂಗಳವಾರ ನಡೆದಿರುವುದು ಕೇವಲ ಭಾರತದ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲ, ಒಟ್ಟು ‘ಕಾಶ್ಮೀರಿಯತ್’ನ ಮೇಲೆ ನಡೆದ ದಾಳಿಯೆಂದು ಬಗೆದು ನಾವು ಮುನ್ನಡಿಯಿಡಬೇಕು. ಈ ಉಗ್ರರ ಹಿಂಸಾಚಾರದ ವಿರುದ್ಧ ಕಾಶ್ಮೀರಿಗಳನ್ನು ಸಂಘಟಿಸುವುದು ಇಂದಿನ ಅಗತ್ಯವಾಗಿದೆ. ಪಾಕಿಸ್ತಾನವನ್ನು ಸೋಲಿಸುವುದೆಂದರೆ ಕಾಶ್ಮೀರವನ್ನು ಉಗ್ರರಿಂದ ಸಂಪೂರ್ಣ ಮುಕ್ತವಾಗಿಸಿ, ಅದನ್ನು ಭಾರತಕ್ಕೆ ಇನ್ನಷ್ಟು ಹತ್ತಿರವಾಗಿಸುವುದು. ಈ ನಿಟ್ಟಿನಲ್ಲಿ, ಕಾಶ್ಮೀರಿಗಳು ಭಾರತದೊಂದಿಗೆ ಗುರುತಿಸಿಕೊಳ್ಳಲು ಹೆಮ್ಮೆ ಪಡುವಂತಹ ಹೆಜ್ಜೆಗಳನ್ನು ಭಾರತ ಸರಕಾರ ಇಡಬೇಕಾಗಿದೆ.

ಮಂಗಳವಾರ ನಡೆದ ಭೀಕರ ದಾಳಿಯ ಸಂದರ್ಭದಲ್ಲಿ, ಕಾಶ್ಮೀರಿಗಳು ಯಾರ ಜೊತೆಗಿದ್ದರು ಎನ್ನುವುದನ್ನು ಈ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಉಗ್ರರು ತಮ್ಮನ್ನು ತಾವು ‘ಕಾಶ್ಮೀರದ ರಕ್ಷಕರು’ ಎಂದು ಹೇಳುತ್ತಲೇ ಕಾಶ್ಮೀರದ ವಿರುದ್ಧ ದಾಳಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಬುಧವಾರ ಅವರು ದಾಳಿ ನಡೆಸಿದಾಗ, ಸ್ಥಳೀಯ ಕಾಶ್ಮೀರಿಗಳು ಯಾವ ಕಾರಣಕ್ಕೂ ಉಗ್ರರ ಜೊತೆಗೆ ನಿಲ್ಲಲಿಲ್ಲ. ಕನಿಷ್ಠ ಅಲ್ಲಿಂದ ಪರಾರಿಯಾಗಿ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳುವ ಪ್ರಯತ್ನವನ್ನು ಅವರು ಮಾಡಬಹುದಾಗಿತ್ತು. ಆದರೆ ಅವರು ಭಯೋತ್ಪಾದಕರಿಗೆ ತಿರುಗಿ ನಿಂತು, ‘ನೀವು ನಮ್ಮವರಲ್ಲ’ ಎನ್ನುವುದನ್ನು ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲ, ಉಗ್ರರಿಂದ ಪ್ರವಾಸಿಗರನ್ನು ರಕ್ಷಿಸಲು ಅವರು ಗರಿಷ್ಠ ಹೋರಾಟಗಳನ್ನು ನಡೆಸಿದರು. ಹಲವರ ಜೀವಗಳನ್ನು ಅವರು ಕಾಪಾಡಿದರು. ಯಾವುದೇ ವಾಹನಗಳು ಹೋಗಲು ಸಾಧ್ಯವಿಲ್ಲದ ಆ ಪ್ರದೇಶದಲ್ಲಿ ಪ್ರವಾಸಿಗರನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. 500ಕ್ಕೂ ಅಧಿಕ ಪ್ರವಾಸಿಗರು ಅಲ್ಲಿದ್ದರೂ ಅವರ ರಕ್ಷಣೆಗೆ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯನ್ನು ಸರಕಾರ ನೇಮಿಸಿರಲಿಲ್ಲ. ಹಾಗೆಂದು ಸ್ಥಳೀಯ ಕಾಶ್ಮೀರಿಗಳು ಯಾವುದೇ ಯೋಧರನ್ನು ಕಾಯುತ್ತಾ ಕೂರಲಿಲ್ಲ. ಪ್ರವಾಸಿಗರನ್ನು ರಕ್ಷಿಸಲು ತಮ್ಮಿಂದಾಗುವ ಪ್ರಯತ್ನವನ್ನು ಅವರು ನಡೆಸಿದರು.

ಭಯೋತ್ಪಾದಕರ ವಿರುದ್ಧ ಹೋರಾಟ ಮಾಡುತ್ತಾ ಹುತಾತ್ಮರಾದವರಲ್ಲಿ ಸೈಯದ್ ಆದಿಲ್ ಹುಸೇನ್ ಶಾ ಕೂಡ ಒಬ್ಬ. ಆತ ಪ್ರವಾಸಿಗರನ್ನು ಅತ್ತಿಂದಿತ್ತ ಸಾಗಿಸುತ್ತಿದ್ದ ಕುದುರೆ ಸವಾರನಾಗಿದ್ದ. ದಾಳಿ ಮಾಡುತ್ತಿದ್ದ ಭಯೋತ್ಪಾದಕನ ಕೈಯಿಂದ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಆತ ಗುಂಡಿಗೆ ಬಲಿಯಾದ. ಕುಟುಂಬದ ಏಕೈಕ ಆಶ್ರಯವಾಗಿದ್ದ ಆದಿಲ್ ಶಾ ಇಲ್ಲದೆ ಆತನ ಪತ್ನಿ ಮತ್ತು ಮಕ್ಕಳು ಈಗ ಅನಾಥವಾಗಿದ್ದಾರೆ. ದಾಳಿಯ ಸಂದರ್ಭದಲ್ಲಿ ಹೀರೋ ಆಗಿ ಹೋರಾಟ ನಡೆಸಿದ ಇನ್ನೊಬ್ಬ ಕಾಶ್ಮೀರಿಯ ಹೆಸರು ನಝಾಕತ್ ಅಲಿ. ಒಂದೆಡೆ ಪ್ರಾಕೃತಿಕ ವಿಕೋಪದಿಂದ ರಸ್ತೆಗಳೆಲ್ಲ ಮುಚ್ಚಿ ಹೋಗಿತ್ತು. ಇಂತಹ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ‘‘ಈ ಸಂದರ್ಭದಲ್ಲಿ ನನ್ನ ಸ್ನೇಹಿತರು ಮತ್ತು ಅವರ ಕುಟುಂಬಸ್ಥರು ಭಯದಿಂದ ಕಂಪಿಸುತ್ತಿದ್ದರು. ಆದರೆ, ನಮ್ಮ ಜೊತೆಗಿದ್ದ ನಝಕತ್ ಅಲಿ ಬೆದರಲಿಲ್ಲ. ಅವರು ಒಬ್ಬ ಹುಡುಗನನ್ನು ಹೆಗಲಲ್ಲಿ ಹಾಕಿಕೊಂಡು, ಮತ್ತೊಂದು ಮಗುವನ್ನು ತೋಳಲ್ಲಿ ಎತ್ತಿಕೊಂಡು ಸುಮಾರು 11 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು’’ ಹೀಗೆಂದು ಹೇಳಿಕೆ ನೀಡಿರುವುದು ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯ ಅರವಿಂದ ಅಗರ್ವಾಲ್. ಇವರು, ಬಿಜೆಪಿಯ ಕೌನ್ಸಿಲರ್ ಪೂರ್ವಾ ಸ್ತಫಕ್ ಅವರ ಪತಿ. ಉಗ್ರರ ದಾಳಿಯಲ್ಲಿ ಮೃತಪಟ್ಟ ಆದಿಲ್ ಹುಸೇನ್ ಶಾ ಅವರು ಈ ನಝಾಕತ್ ಅಲಿ ಅವರ ಚಿಕ್ಕಪ್ಪ. ಆದರೂ ಅವರು ಆ ಸಂದರ್ಭದಲ್ಲಿ ಕಂಗೆಟ್ಟು ತನ್ನ ಪ್ರಾಣದ ಬಗ್ಗೆ ಚಿಂತಿಸಿ ಅಲ್ಲಿಂದ ಓಡಿಹೋಗಲಿಲ್ಲ. ‘‘ದಾಳಿ ನಡೆಸಿದಾಗ ತಮ್ಮ ಪ್ರಾಣ ಒತ್ತೆಯಿಟ್ಟು ಅಲ್ಲಿಂದ ನಮ್ಮನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದು ಸ್ಥಳೀಯ ಕಾಶ್ಮೀರಿಗಳು. ದಾಳಿ ನಡೆದಾಗ ಮೂವರು ಮುಸ್ಲಿಮ್ ಸಹೋದರರು ನಮ್ಮನ್ನು ಸುತ್ತುವರಿದರು. ‘ಬಿಸ್ಮಿಲ್ಲಾ ಬಿಸ್ಮಿಲ್ಲಾ’ ಎಂದು ಜಪಿಸುತ್ತಾ ಅವರು ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅಣ್ಣಂದಿರಂತೆ ನಮ್ಮನ್ನು ಕಾಪಾಡಿದರು’’ ಹೀಗೆಂದು ವಿವರ ನೀಡಿದವರು ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ಅವರ ಪತ್ನಿ ಪಲ್ಲವಿ. ಸ್ಥಳೀಯ ವ್ಯಾಪಾರಿಗಳು ಪ್ರವಾಸಿಗರ ಜೊತೆ ನಿಂತು ಅವರಿಗೆ ಸಕಲ ನೆರವನ್ನು ನೀಡಿದರು. ಇಂದು ಭಾರತದೊಳಗಿರುವ ಕೆಲವು ಪತ್ರಕರ್ತರು ಮತ್ತು ನೀಚ ರಾಜಕಾರಣಿಗಳು ಹೇಳುವಂತೆ ಧರ್ಮದ ಆಧಾರದಲ್ಲಿ ನಡೆದ ದಾಳಿಯೇ ಇದಾಗಿದ್ದರೆ, ಸ್ಥಳೀಯ ಕಾಶ್ಮೀರಿಗಳು ಪ್ರವಾಸಿಗರ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಟ ನಡೆಸುವ ಅಗತ್ಯವಿತ್ತೆ?

ಇಂದು ಸರಕಾರಕ್ಕೆ, ಯಾರು ನಮ್ಮವರು, ಯಾರು ನಮ್ಮವರಲ್ಲ ಎನ್ನುವುದರ ಬಗ್ಗೆ ಸ್ಪಷ್ಟತೆ ಇರಬೇಕಾಗಿದೆ. ಮೊತ್ತ ಮೊದಲಾಗಿ ಈ ದಾಳಿಯಲ್ಲಿ ತನ್ನ ಭದ್ರತಾ ವೈಫಲ್ಯವನ್ನು ಸರಕಾರ ಒಪ್ಪಿಕೊಳ್ಳಬೇಕು. ಇದೇ ಸಂದರ್ಭದಲ್ಲಿ, ಜೀವವನ್ನು ಒತ್ತೆಯಿಟ್ಟು ಪ್ರವಾಸಿಗರನ್ನು ಕಾಪಾಡಿದ ಸ್ಥಳೀಯ ಕಾಶ್ಮೀರಿಗಳನ್ನು ಗುರುತಿಸಿ ಅವರನ್ನು ಗೌರವಿಸಬೇಕು.ಉಗ್ರರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಆದಿಲ್ ಹುಸೇನ್‌ಗೆ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡುವುದು ಮಾತ್ರವಲ್ಲ, ಅವರ ಕುಟುಂಬಕ್ಕೆ ದೊಡ್ಡ ಪ್ರಮಾಣದ ಪರಿಹಾರವನ್ನು ನೀಡಬೇಕು. ಈ ಮೂಲಕ, ಕಾಶ್ಮೀರಿಗಳನ್ನು ಸರಕಾರ ಇನ್ನಷ್ಟು ಹತ್ತಿರವಾಗಿಸಬೇಕು. ಕಾಶ್ಮೀರ ಕಾಶ್ಮೀರಿಗಳದ್ದು. ಹೊರಗಿನ ಮತ್ತು ಒಳಗಿನ ಉಗ್ರರಿಂದ ಕಾಶ್ಮೀರವನ್ನು ರಕ್ಷಿಸಿ, ಉಳಿಸಬೇಕಾದವರು ಕಾಶ್ಮೀರಿಗಳೇ ಆಗಿದ್ದಾರೆ. ಪ್ರವಾಸಿಗರ ಜೀವ ಕಾಪಾಡಿದ ಸ್ಥಳೀಯ ಕಾಶ್ಮೀರಿಗಳು ಭಾರತದ ಪಾಲಿನ ನಿಜವಾದ ಯೋಧರಾಗಿದ್ದಾರೆ. ಭವಿಷ್ಯದಲ್ಲಿ ಕಾಶ್ಮೀರವನ್ನು ಕಾಪಾಡಬೇಕಾದವರೂ ಇವರೇ. ‘ಕಾಶ್ಮೀರಿಯತ್’ನ ಹಿರಿಮೆಯನ್ನು ಹಿಂದಿನ ಹಲವು ರಾಜಕೀಯ ನಾಯಕರು ತಮ್ಮ ಭಾಷಣಗಳಲ್ಲಿ ಎತ್ತಿ ಹಿಡಿದಿದ್ದಾರೆ. ಅದೇ ಕಾಶ್ಮೀರಿಯತ್ ಇಂದು ಉಗ್ರರಿಂದ ಕಾಶ್ಮೀರವನ್ನು ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಕಾಶ್ಮೀರಿಗಳನ್ನು ನಮ್ಮವರನ್ನಾಗಿಸುವ ಮೂಲಕ ಕಾಶ್ಮೀರವನ್ನು ನಮ್ಮದಾಗಿಸುವ ಪ್ರಯತ್ನ ಇನ್ನಷ್ಟು ಗಟ್ಟಿಯಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News