ಮಂಗಳೂರಿನ ಮಾನ ಕಳೆದ ವಲಸೆ ಕಾರ್ಮಿಕನ ಗುಂಪು ಹತ್ಯೆ

Update: 2025-04-30 08:30 IST
ಮಂಗಳೂರಿನ ಮಾನ ಕಳೆದ ವಲಸೆ ಕಾರ್ಮಿಕನ ಗುಂಪು ಹತ್ಯೆ
  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಭಿವೃದ್ಧಿ ಕಾರಣಗಳಿಗಾಗಿ ಸುದ್ದಿಯಲ್ಲಿರಬೇಕಾದ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಅಪರಾಧ ಕಾರಣಗಳಿಗಾಗಿ ರಾಜ್ಯಮಟ್ಟದಲ್ಲಿ ಗುರುತಿಸುತ್ತಿದೆ. ಗೋರಕ್ಷಕರ ವೇಷದಲ್ಲಿ ಕ್ರಿಮಿನಲ್‌ಗಳ ಅಕ್ರಮಗಳು, ಸಂಘಪರಿವಾರದ ದಾಂಧಲೆಗಳು, ದರೋಡೆಗಳು ಇತ್ಯಾದಿಗಳ ಸಾಲಿಗೆ ಇದೀಗ ಗುಂಪು ಹತ್ಯೆಯೂ ಸೇರಿಕೊಂಡಿದೆ. ಎಲ್ಲೋ ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಇದೀಗ ಮಂಗಳೂರಿಗೂ ಕಾಲಿಟ್ಟಿದ್ದು ಸುಮಾರು 30 ಮಂದಿಯ ಗುಂಪೊಂದು ವಲಸೆ ಕಾರ್ಮಿಕ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಥಳಿಸಿ ಕೊಂದು ಹಾಕಿದೆ. ಇನ್ನೊಂದು ಮೂಲದ ಪ್ರಕಾರ ಈತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಮುಖ್ಯವಾಗಿ, ಸುಮಾರು ಎರಡು ದಿನಗಳ ಕಾಲ ಈ ಸಾವನ್ನು ಗುಂಪುಹತ್ಯೆ ಎಂದು ಒಪ್ಪಿಕೊಳ್ಳಲು ಸ್ವತಃ ಪೊಲೀಸರೇ ಸಿದ್ಧರಿರಲಿಲ್ಲ. ಪೊಲೀಸ್ ಇಲಾಖೆಯಿಂದಲೇ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯಿತು. ಮಾಧ್ಯಮಗಳು ಈ ಹತ್ಯೆಯ ವಿವರಗಳನ್ನು ಕಲೆ ಹಾಕತೊಡಗಿದಂತೆ, ಪೊಲೀಸರು ಸತ್ಯವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕಾಯಿತು.

ಮಂಗಳೂರು ನಗರದ ಹೊರವಲಯದ ಕುಡುಪು ಸಮೀಪ ಮೈದಾನವೊಂದರಲ್ಲಿ ರವಿವಾರ ವಲಸೆ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿತ್ತು. ಅಂದು ಆ ಮೈದಾನದಲ್ಲಿ ಕ್ರಿಕೆಟ್ ಪಂದ್ಯವನ್ನು ಆಯೋಚಿಸಲಾಗಿತ್ತು. ಅದೇ ದಿನ ಸಂಜೆ 5 ಗಂಟೆಗೆ ಅಲ್ಲಿ ಮೃತದೇಹ ಪತ್ತೆಯಾಗಿದೆ. ಆರಂಭದಲ್ಲಿ ಕಾರ್ಮಿಕ ಕುಡಿದು ಬಿದ್ದಿದ್ದಾನೆ ಎಂದು ಹೇಳಲಾಗಿತ್ತು. ಇದಾದ ಬಳಿಕ ಅಪಘಾತವಿರಬಹುದು ಎಂದು ವಿಷಯದ ಗಂಭೀರತೆಯನ್ನು ತಿಳಿಗೊಳಿಸುವ ಪ್ರಯತ್ನ ನಡೆಯಿತು. ಸಣ್ಣ ಪುಟ್ಟ ಗಾಯಗಳಷ್ಟೇ ಆಗಿದೆ ಎಂದು ಹೇಳುವ ಮೂಲಕ ‘ಗುಂಪು ಥಳಿತದಿಂದ ಹತ್ಯೆ ನಡೆದಿದೆ’ ಎಂಬ ವದಂತಿಯನ್ನು ಪೊಲೀಸ್ ಇಲಾಖೆಯೇ ನಿರಾಕರಿಸಿತು. ಮುಖ್ಯವಾಗಿ ಮೃತಪಟ್ಟವ ಕಾರ್ಮಿಕನಾಗಿರುವುದರಿಂದ ಮತ್ತು ಆತನಿಗೆ ಯಾವುದೇ ಹಿನ್ನೆಲೆಗಳಿಲ್ಲದೇ ಇರುವುದರಿಂದ ಪೊಲೀಸರೂ ಸಾವನ್ನು ಲಘುವಾಗಿ ತೆಗೆದುಕೊಂಡಿದ್ದರು. ಆದರೆ ಅದಾಗಲೇ ಗುಂಪು ಥಳಿತದ ಬಗ್ಗೆ ಪರಿಸರದಲ್ಲಿ ಸುದ್ದಿ ಹರಡಿತ್ತು. ಸುಮಾರು 30 ಜನರು ಒಟ್ಟು ಸೇರಿ ಆತನ ಮೇಲೆ ರಾಕ್ಷಸರಂತೆ ಎರಗಿ, ದೊಣ್ಣೆ, ಕಲ್ಲು ಇತ್ಯಾದಿಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನುವುದನ್ನು ಸ್ಥಳೀಯರು ಆಡಿಕೊಳ್ಳುತ್ತಿದ್ದರೂ, ಇದು ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಆತನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದು ಮಾತ್ರವಲ್ಲ, ದೇಹ ಹಲವು ಗಂಟೆಗಳ ಕಾಲ ಅಲ್ಲೇ ಬಿದ್ದುಕೊಂಡಿದ್ದರೂ ಯಾರೂ ಆಸ್ಪತ್ರೆಗೆ ಸೇರಿಸುವ ಔದಾರ್ಯವನ್ನು ತೋರಿಸಿರಲಿಲ್ಲ. ಆತ ಅಲ್ಲೇ ಉಸಿರು ಬಿಟ್ಟ ಎಷ್ಟೋ ಸಮಯ ಕಳೆದ ಬಳಿಕ ಯಾರೋ ದಾರಿ ಹೋಕರು ಮೃತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಬಳಿಕ ಆತನ ಕೊಲೆಯನ್ನು ‘ಗುಂಪು ಹತ್ಯೆ’ ಎಂದು ಪೊಲೀಸ್ ಆಯುಕ್ತರು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ, ಸುಮಾರು 30 ಜನರು ಸೇರಿ ಈ ಕೃತ್ಯವನ್ನು ಎಸಗಿದ್ದು, 15 ಜನರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಕಡಿಮೆ ವೇತನಕ್ಕೆ ಕಾರ್ಮಿಕರನ್ನು ತರಿಸಿಕೊಳ್ಳಲಾಗುತ್ತಿದೆ. ಇವರಿಂದಾಗಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವ ಆರೋಪಗಳೂ ಇವೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯು ಈ ವಲಸೆ ಕಾರ್ಮಿಕರು ಆಗಮಿಸುವ ಮೊದಲೂ ಅಪರಾಧ ಕೃತ್ಯಗಳಿಗಾಗಿ ಕುಖ್ಯಾತವಾಗಿತ್ತು. ಒಂದು ಕಾಲದಲ್ಲಿ ಭೂಗತ ಪಾತಕಿಗಳಿಗಾಗಿ ಗುರುತಿಸಲ್ಪಡುತ್ತಿದ್ದ ಮಂಗಳೂರು, ಈಗ ಸಂಘಪರಿವಾರದ ದುಷ್ಕರ್ಮಿಗಳಿಗಾಗಿ ಕುಖ್ಯಾತಿ ಪಡೆದಿದೆ. ಇದೀಗ ಜಿಲ್ಲೆಯಲ್ಲಿ ನಡೆಯುವ ಕಳ್ಳತನ,ದರೋಡೆ ಇತ್ಯಾದಿಗಳ ಹಿಂದೆ ವಲಸೆ ಕಾರ್ಮಿಕರ ಕೈವಾಡಗಳಿವೆ ಎಂದು ಜಿಲ್ಲೆಯ ಜನರು ಈ ಕಾರ್ಮಿಕರನ್ನು ಪೂರ್ವಾಗ್ರಹ ಪೀಡಿತರಾಗಿ ನೋಡುತ್ತಿದ್ದಾರೆ. ಅದರಲ್ಲಿ ಒಂದಿಷ್ಟು ಸತ್ಯ ಇದೆಯಾದರೂ, ಈ ಕಾರ್ಮಿಕರು ತಾವಾಗಿಯೇ ಮಂಗಳೂರನ್ನು ಹುಡುಕಿಕೊಂಡು ಬಂದಿರುವುದಲ್ಲ. ಕಡಿಮೆ ವೇತನಕ್ಕೆ ದುಡಿಯಲು ಸಿದ್ಧರಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಅಲ್ಲಿಂದ ಕರೆತರಲಾಗಿದೆ. ಕನಿಷ್ಠ ಅವರನ್ನು ಮನುಷ್ಯರಂತೆ ನೋಡುವುದು ‘ಬುದ್ಧಿವಂತರ’ ಜಿಲ್ಲೆಯ ಜನರ ಕರ್ತವ್ಯವಾಗಿದೆ. ಆದರೆ, ಇದೀಗ ಉತ್ತರ ಭಾರತದಿಂದ ವಲಸೆ ಕಾರ್ಮಿಕರನ್ನು ಆಮದು ಮಾಡಿದಂತೆಯೇ, ಅಲ್ಲಿನ ಗುಂಪು ಥಳಿತದಂತಹ ಕ್ರೌರ್ಯಗಳನ್ನು ಕೂಡ ಆಮದು ಮಾಡಿಕೊಂಡಂತಿದೆ. 30 ಜನರು ಸೇರಿ ಒಬ್ಬ ಬಡಪಾಯಿ ಕಾರ್ಮಿಕನನ್ನು ಬರ್ಬರವಾಗಿ ಥಳಿಸಿ ಕೊಂದಿರುವುದು ಮಂಗಳೂರಿನ ಪಾಲಿಗೆ ಹೊಸತಾಗಿದೆ. ಇದು ಮಂಗಳೂರು ಯಾವ ದಿಕ್ಕಿಗೆ ಸಾಗುತ್ತಿದೆ ಎನ್ನುವುದರ ಎಚ್ಚರಿಕೆಯ ಗಂಟೆಯಾಗಿದೆ.

ದುರಂತವೆಂದರೆ, ಕಾರ್ಮಿಕ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಗುಂಪು ಹಲ್ಲೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ‘ಆತ ಪಾಕಿಸ್ತಾನಕ್ಕೆ ಜಿಂದಾಬಾದ್’ಎಂದು ಘೋಷಣೆ ಕೂಗಿದ್ದಾನೆ ಎಂಬ ವದಂತಿಯನ್ನು ಹರಡಲಾಯಿತು. ಕಾರ್ಮಿಕ ಹೇಗೆ ಸತ್ತಿದ್ದಾನೆ ಎನ್ನುವುದು ಸ್ಪಷ್ಟವಾದದ್ದೇ ಎರಡು ದಿನಗಳ ಬಳಿಕ. ಹಾಗಿರುವಾಗ, ಆತ ಯಾವಾಗ? ಎಲ್ಲಿ? ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಕೂಗಿದ್ದ? ಅದನ್ನು ಕೇಳಿದವರು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದೇ ಸಂದರ್ಭದಲ್ಲಿ ಪೊಲೀಸ್ ಆಯುಕ್ತರೇ ಈ ವದಂತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ನಿರಾಕರಿಸಿದ್ದರು. ಆದರೆ ಈ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ‘‘ಮೃತನು ಸ್ಥಳೀಯವಾಗಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ ಎನ್ನಲಾಗಿದ್ದು, ಈ ಕಾರಣಕ್ಕೆ ಆತನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ’’ ಎಂದಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರೇ ಸ್ಪಷ್ಟವಾಗಿ ಇದನ್ನು ನಿರಾಕರಿಸಿರುವಾಗ, ಗೃಹ ಸಚಿವರಿಗೆ ಈ ‘ಜಿಂದಾಬಾದ್’ ಘೋಷಣೆ ಯಾವ ಮೂಲದಿಂದ ಸಿಕ್ಕಿತು? ಪೊಲೀಸ್ ಇಲಾಖೆಗೆ ಹೊರತಾಗಿ ಬೇರೆ ಮೂಲಗಳನ್ನು ಗೃಹ ಸಚಿವರು ಹೊಂದಿದ್ದಾರೆಯೆ? ತಮ್ಮದೇ ಇಲಾಖೆಯನ್ನು ನಂಬದೆ, ಅವರು ಸಂಘಪರಿವಾರದ ಬೇರೆ ಮೂಲಗಳನ್ನು ಆಧಾರವಾಗಿಟ್ಟು ಈ ಹೇಳಿಕೆಯನ್ನು ನೀಡಿದರೆ? ಎಂದು ದಕ್ಷಿಣಕನ್ನಡ ಜಿಲ್ಲೆಯ ಜನರು ಪ್ರಶ್ನಿಸುತ್ತಿದ್ದಾರೆ. ಒಂದೆಡೆ ಗುಂಪಿನಿಂದ ನಡೆದ ಕಗ್ಗೊಲೆಯನ್ನು ಒಪ್ಪಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಮೀನಮೇಷ ಎಣಿಸಿದ್ದರೆ, ಇನ್ನೊಂದೆಡೆ ಯಾವುದೇ ಆಧಾರವಿಲ್ಲದೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯನ್ನು ಗೃಹ ಸಚಿವರು ಎಳೆದು ತಂದು ತನಿಖೆಯ ದಾರಿ ತಪ್ಪಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಂತೂ ಹೆಸರಿಗಷ್ಟೇ ಉಸ್ತುವಾರಿ ಸಚಿವರಾಗಿದ್ದಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಅವರು ಕೂಡ ಘಟನೆಯ ಬಗ್ಗೆ ಅಸೂಕ್ಷ್ಮ ಹೇಳಿಕೆಯನ್ನು ನೀಡಿದ್ದಾರೆ. ಸಂತ್ರಸ್ತನನ್ನು ‘ಅನ್ಯ ಕೋಮಿನವ’ನೆಂದು ಸಚಿವರು ಗುರುತಿಸಿದ್ದು ‘ಯಾರು ಯಾರಿಗೆ ಅನ್ಯ’ ಎನ್ನುವುದನ್ನು ಅವರು ರಾಜ್ಯಕ್ಕೆ ತಿಳಿಸಬೇಕಾಗಿದೆ. ಉಸ್ತುವಾರಿ ಸಚಿವರೇ ಜನರನ್ನು ಸ್ವಂತ ಕೋಮು- ಅನ್ಯ ಕೋಮು ಎಂದು ವಿಂಗಡಿಸಿ ನೋಡುತ್ತಾರೆ ಎಂದಾದ ಮೇಲೆ ದಕ್ಷಿಣ ಕನ್ನಡದ ಭವಿಷ್ಯದ ಬಗ್ಗೆ ಹೆಚ್ಚು ಮಾತನಾಡುವುದರಲ್ಲಿ ಏನು ಅರ್ಥವಿದೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News