ಅಪಾಯಕಾರಿ ಕೈಗಾರಿಕೆಗಳು ಬೇಡ

Photo: freepik
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಎಲ್ಲರಿಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೃಷಿಯ ಜೊತೆಗೆ ಕೈಗಾರಿಕೋದ್ಯಮಗಳು ಬೇಕು ಎಂಬುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ನಮ್ಮ ನದಿ, ಕೆರೆಗಳನ್ನು ನಾಶ ಮಾಡಿ ಜನಸಾಮಾನ್ಯರನ್ನು ಅನಾರೋಗ್ಯದ ಮಡಿಲಿಗೆ ಹಾಕುವ ಕೈಗಾರಿಕೆಗಳು ಬೇಡ.
ಇಂತಹ ಅಪಾಯಕಾರಿ ಉದ್ಯಮಗಳು ಹೊರಬಿಡುವ ಧೂಳು ಮತ್ತು ಮಲಿನಗೊಂಡ ಗಾಳಿಯಿಂದಾಗಿ ನಾಡಿನ ಕೆಲವೆಡೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಇಂತಹ ಕೈಗಾರಿಕೆಗಳ ವಿರುದ್ಧ ಕಲ್ಯಾಣ ಕರ್ನಾಟಕದ ಕೊಪ್ಪಳದ ಜನರು ಕಳೆದ ಕೆಲವು ವಾರಗಳಿಂದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.ಬಳ್ಳಾರಿಯ ಗಣಿಗಾರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಈ ಪ್ರದೇಶದ ಪರಿಸರದ ಮೇಲೆ ಮತ್ತೆ ಕೈಗಾರಿಕೆಗಳ ಹಲ್ಲೆ ನಡೆಯುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಕೊಪ್ಪಳ. ಸಮೀಪದ ಬಳ್ಳಾರಿ ಮತ್ತು ಸಂಡೂರು ಗಣಿಗಾರಿಕೆಯಿಂದ ತತ್ತರಿಸಿರುವ ಕೊಪ್ಪಳ ಸುತ್ತುವರಿದ ಅಪಾಯಕಾರಿ ಉದ್ಯಮಗಳಿಂದಾಗಿ ಉಸಿರಾಡಲು ಪರದಾಡುತ್ತಿದೆ. ಕೊಪ್ಪಳ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 202 ಸಣ್ಣ, ಮಧ್ಯಮ ಹಾಗೂ ಭಾರೀ ಪ್ರಮಾಣದ ಕೈಗಾರಿಕೆಗಳಿವೆ. ಇವುಗಳಲ್ಲಿ 40ಕ್ಕೂ ಹೆಚ್ಚು ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕಗಳಿವೆ. ಈ ಪ್ರದೇಶದ ಒಟ್ಟು 33 ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಇವುಗಳಲ್ಲಿ 22 ಕೈಗಾರಿಕೆಗಳಿಂದ ವ್ಯಾಪಕವಾಗಿ ಮಾಲಿನ್ಯ ಉಂಟಾಗುತ್ತಿದೆ ಎಂದು ಈ ವರದಿಯಲ್ಲಿ ದಾಖಲಿಸಲಾಗಿದೆ.
ಈ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯವು ಸುತ್ತಮುತ್ತಲಿನ ಪ್ರದೇಶದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಕೊಪ್ಪಳ ಜಿಲ್ಲಾ ಕೇಂದ್ರದಿಂದ ಕೇವಲ ಒಂದು ಕಿ.ಮೀ. ಅಂತರದಲ್ಲಿ ಬಲ್ಡೋಟಾ ಕಂಪೆನಿ ಸಾವಿರಾರು ಎಕರೆ ಜಮೀನನ್ನು ಬಳಸಿಕೊಂಡು ಉಕ್ಕು ಹಾಗೂ ವಿದ್ಯುತ್ ಕಾರ್ಖಾನೆಯನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಇದರ ವಿರುದ್ಧ ಕೊಪ್ಪಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಪಕ್ಷಭೇದ ಮರೆತು ಚಳವಳಿಗೆ ಮುಂದಾಗಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ತಾಳಿದಾಗ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಧ್ಯ ಪ್ರವೇಶ ಮಾಡಿ ಬಲ್ಡೋಟಾ ಕಂಪೆನಿಯ ವಿಸ್ತರಣಾ ಕಾರ್ಯಕ್ಕೆ ತಡೆ ಹಾಕಿದ್ದಾರೆ. ಇದರಿಂದಾಗಿ ಕೊಂಚ ಉಸಿರಾಡಲು ಅವಕಾಶ ದೊರಕಿದೆಯಾದರೂ ಇದು ತಾತ್ಕಾಲಿಕ ಮಾತ್ರ. ಇದಕ್ಕೊಂದು ಶಾಶ್ವತ ಪರಿಹಾರದ ಅಗತ್ಯವಿದೆ.
ಈ ಅಪಾಯಕಾರಿ ಉದ್ಯಮಗಳ ಪೈಕಿ ಕೆಲವು ಉಕ್ಕು, ಸಿಮೆಂಟ್, ರಸಗೊಬ್ಬರ ಉದ್ಯಮಗಳ ಘಟಕಗಳು ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸದೆ ಹೊರಗೆ ಬಿಡಲಾಗುತ್ತದೆ ಎಂಬ ದೂರುಗಳಿವೆ. ಈ ಅಪಾಯಕಾರಿ ತ್ಯಾಜ್ಯಗಳಿಂದಾಗಿ ಆ ಭಾಗದ ರೈತರ ಫಲವತ್ತಾದ ಜಮೀನುಗಳು ಬಂಜರು ಭೂಮಿಯಾಗಿ ಬದಲಾಗುತ್ತಿವೆ. ಕೈಗಾರಿಕೆಗಳ ತ್ಯಾಜ್ಯದಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿದೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರವನ್ನು ನೀಡುವುದಾಗಿ ಸದರಿ ಕಾರ್ಖಾನೆಯ ಮಾಲಕರು ಹೇಳುತ್ತಿದ್ದಾರೆ. ಆದರೆ ಅವರು ಕೊಡುವ ಪರಿಹಾರದ ಮೊತ್ತ ಅತ್ಯಂತ ಕಡಿಮೆ ಅಷ್ಟೇ ಅಲ್ಲ, ನ್ಯಾಯ ಸಮ್ಮತವಾಗಿಲ್ಲ ಎಂಬುದು ರೈತರ ಆಕ್ಷೇಪವಾಗಿದೆ.
ಕೈಗಾರಿಕೆಗಳ ಮಾಲಕರು ಮಾಲಿನ್ಯ ತಡೆಯಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದ ಕಾರಣ ಕೈಗಾರಿಕೆಗಳ ಹಾರು ಬೂದಿ ನೇರವಾಗಿ ಜನರ ಶ್ವಾಸ ಕೋಶವನ್ನು ಸೇರುತ್ತದೆ. ಹೀಗಾಗಿ ಕೊಪ್ಪಳ ಸುತ್ತಮುತ್ತಲಿನ ಪ್ರದೇಶಗಳ ಶಾಲಾ ಮಕ್ಕಳಲ್ಲಿ ಹೆಚ್ಚಿನ ಮಟ್ಟದಲ್ಲಿ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಾಟಾಚಾರಕ್ಕೆ ಕೈಗಾರಿಕೆಗಳ ಮಾಲಕರಿಗೆ ನೋಟಿಸ್ ನೀಡುವುದನ್ನು ಬಿಟ್ಟರೆ, ನೇರವಾದ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ಕೊಪ್ಪಳ ಜಿಲ್ಲೆಯ ಜನರಲ್ಲಿ ವ್ಯಾಪಕವಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಎಂಬುದು ಇದೆಯೇ ಎಂಬ ಸಂದೇಹ ಬರುವಂತೆ ಅದು ನಡೆದುಕೊಳ್ಳುತ್ತಿದೆ. ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಜನಸಾಮಾನ್ಯರು ಸರಕಾರದ ಮೇಲೆ ಇರಿಸಿರುವ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಜನಸಾಮಾನ್ಯರ ಮೇಲೆ, ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಕ್ರಮಗಳನ್ನು ಕೈಗೊಳ್ಳುವ ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡ ಬಂಡವಾಳಗಾರರು ಮತ್ತು ಪ್ರಭಾವಿ ರಾಜಕಾರಣಿ ಗಳನ್ನು ಕಂಡರೆ ತೆಪ್ಪಗಾಗುತ್ತಿದೆ.ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಭಾವಿ ರಾಜಕಾರಣಿಗಳು ಹಾಗೂ ಮಠಾಧೀಶರ ಕೈ ಗೊಂಬೆಯಂತೆ ವರ್ತಿಸಬಾರದು. ಜನ ಸಾಮಾನ್ಯರ ಆರೋಗ್ಯ, ಜೀವನೋಪಾಯ ಸರಕಾರದ ಮುಖ್ಯ ಹೊಣೆಗಾರಿಕೆಯಾಗಿದೆ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೈಗಾರಿಕೆಗಳ ಅಭಿವೃದ್ಧಿಯೂ ಅವಶ್ಯಕ. ಅದಕ್ಕಾಗಿ ಜನರ ಆರೋಗ್ಯ ಮತ್ತು ಪರಿಸರವನ್ನು ಬಲಿಕೊಡಬಾರದು.
ಒಂದು ಮೂಲದ ಪ್ರಕಾರ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಅನಧಿಕೃತ ಕೈಗಾರಿಕೆಗಳಿದ್ದು, ರಾಜ್ಯದಲ್ಲಿ 3,000ದಷ್ಟು ಕೈಗಾರಿಕೆಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಪರವಾನಿಗೆ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ಈ ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಕಾನೂನಿನಿಂದ ಸುಲಭದಲ್ಲಿ ನುಣುಚಿಕೊಳ್ಳುತ್ತವೆ. ಇಂತಹ ಕೈಗಾರಿಕೆಗಳ ಮೇಲೆ ಕಠಿಣ ಕ್ರಮವನ್ನು ಕೈಗೊಂಡು ಅವುಗಳನ್ನು ಮಂಡಳಿಯ ವ್ಯಾಪ್ತಿಗೆ ತರಬೇಕು. ಅಥವಾ ಅವುಗಳಿಗೆ ಬೀಗ ಜಡಿಯಬೇಕು. ದೇಶದ ರಾಜಧಾನಿ ಹೊಸದಿಲ್ಲಿ ವಾಯು ಮಾಲಿನ್ಯಗಳಿಗಾಗಿ ಪ್ರತಿದಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತವೆ. ಇದೀಗ ದೇಶದ ಇತರ ನಗರಗಳು ಕೂಡ ಮಾಲಿನ್ಯಕ್ಕಾಗಿ ದಿಲ್ಲಿಯೊಂದಿಗೆ ಸ್ಪರ್ಧೆಯಲ್ಲಿವೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 2030ಕ್ಕೆ ಶೇ. 38ರಷ್ಟು ವಾಯುಮಾಲಿನ್ಯ ಹೆಚ್ಚಳವಾಗಲಿದೆ ಎಂದು ವರದಿಯೊಂದು ಹೇಳುತ್ತದೆ. ವಾಯುಮಾಲಿನ್ಯದಿಂದ ಕಂಗೆಟ್ಟಿರುವ ಬೆಂಗಳೂರನ್ನು ಯಥಾಸ್ಥಿತಿಗೆ ತರಲು 3,230 ಕೋಟಿ ರೂಪಾಯಿಯ ಅಗತ್ಯವಿದೆ ಎಂದು ಬೆಂಗಳೂರಿನ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಆಂಡ್ ಪಾಲಿ ಸಂಸ್ಥೆ(ಸಿಎಸ್‌ಟಿಇಪಿ)ಯ ವರದಿ ತಿಳಿಸುತ್ತದೆ. ವಾಯುಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ರಾಜ್ಯದ ಜಿಲ್ಲೆಗಳಿಗೆ 1,000 ಕೋಟಿ ರೂಪಾಯಿಯ ಅಗತ್ಯವಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ.
ಕೈಗಾರಿಕೆಗಳ ಮೂಲಕವೇ ಅಭಿವೃದ್ಧಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೈಗಾರಿಕೆಗಳಿಗಾಗಿ ಜನಸಾಮಾನ್ಯರು ತಮ್ಮ ಜಮೀನು, ಪರಿಸರ, ನೀರು, ಆರೋಗ್ಯ ಎಲ್ಲವನ್ನೂ ತೆರಬೇಕಾಗುತ್ತದೆ. ಪ್ರತಿಯಾಗಿ ಅವರಿಗೆ ಸಿಗುವುದೇನು? ಅಭಿವೃದ್ಧಿಯ ಹೆಸರಿನಲ್ಲಿ ನಾವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂದಾದರೆ ಆ ಅಭಿವೃದ್ಧಿಗೆ ಅರ್ಥವಾದರೂ ಏನು?