ಪ್ರಜ್ವಲ್ ಲೈಂಗಿಕ ಹಗರಣ: ದೇವೇಗೌಡರನ್ನು ಯಾಕೆ ಎಳೆದು ತರಬಾರದು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜೆಡಿಎಸ್ ಯುವ ನಾಯಕನ ಲೈಂಗಿಕ ಹಗರಣವೊಂದು ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ಅಶ್ಲೀಲ ವೀಡಿಯೊಗೆ ಸಂಬಂಧಿಸಿ ತಕ್ಷಣ ವರದಿಯನ್ನು ಸಲ್ಲಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ. ರಾಜ್ಯ ಸರಕಾರ ಸಿಟ್ ತನಿಖೆಗೆ ಆದೇಶ ನೀಡಿದ್ದು, ಹಲವು ಸಂತ್ರಸ್ತೆಯರು ತನಿಖಾ ತಂಡದ ಮುಂದೆ ತಮ್ಮ ನೋವುಗಳನ್ನು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಆರೋಪಿಯಾಗಿರುವ ಪ್ರಜ್ವಲ್ ಗೌಡನನ್ನು ಕಾನೂನಿಗೆ ಒಪ್ಪಿಸಿ ತನಿಖೆಗೆ ಸಹಕರಿಸುವ ಕನಿಷ್ಠ ಹೊಣೆಗಾರಿಕೆಯನ್ನು ದೇವೇಗೌಡರ ಕುಟುಂಬ ನಿರ್ವಹಿಸಬೇಕಾಗಿತ್ತ್ತು. ಈ ದೇಶದ ಮಾಜಿ ಪ್ರಧಾನಿಯೂ ಆಗಿರುವ ದೇವೇಗೌಡರ ವರ್ಚಸ್ಸಿಗೆ ಈ ಪ್ರಕರಣ ಭಾರೀ ಧಕ್ಕೆ ತಂದಿರುವುದರಿಂದ, ಪ್ರಜ್ವಲ್ ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ತವ್ಯವಾಗಿತ್ತು. ವಿಪರ್ಯಾಸವೆಂದರೆ, ಲೈಂಗಿಕ ದೌರ್ಜನ್ಯದ ಅಶ್ಲೀಲ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಂತೆಯೇ ಆರೋಪಿಯನ್ನು ವಿದೇಶಕ್ಕೆ ರವಾನಿಸಿ, ಇದೀಗ ಅವರನ್ನು ಅಮಾನತುಗೊಳಿಸುವ ಪ್ರಹಸನವನ್ನು ಜೆಡಿಎಸ್ ನಾಯಕರು ನಡೆಸಿದ್ದಾರೆ. ನಿಜಕ್ಕೂ ಈ ಪ್ರಕರಣದ ನೈತಿಕ ಹೊಣೆ ಹೊತ್ತು ಜೆಡಿಎಸ್‌ನ ಹಿರಿಯ ನಾಯಕರಾಗಿರುವ ರೇವಣ್ಣ ಮತ್ತು ಕುಮಾರಸ್ವಾಮಿ ಶಾಶ್ವತವಾಗಿ ರಾಜಕೀಯ ನಿವೃತ್ತಿಯನ್ನು ಘೋಷಿಸಬೇಕಾಗಿತ್ತು. ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವುದು ಯಾವನೋ ಒಬ್ಬ ಸಾಮಾನ್ಯ ಜೆಡಿಎಸ್ ಮುಖಂಡನಲ್ಲ. ದೇವೇಗೌಡರ ಕುಟುಂಬ ಸದಸ್ಯನೆಂದು ಗುರುತಿಸಲ್ಪಡುತ್ತಿರುವವನೇ ಈ ವಿಕೃತ ಕೃತ್ಯಗಳನ್ನು ಮೆರೆದಿದ್ದಾನೆ. ಈ ಮೂಲಕ ನಾಡಿನ ಮಾನವನ್ನೂ, ದೇವೇಗೌಡರ ಕುಟುಂಬದ ಮಾನವನ್ನು ಏಕಕಾಲದಲ್ಲಿ ಹರಾಜಿಗಿಟ್ಟಿದ್ದಾನೆ. ದೇವೇಗೌಡರ ಕುಟುಂಬದ ಕುಡಿ ಎನ್ನುವ ಒಂದೇ ಅರ್ಹತೆಯಿಂದ ಜೆಡಿಎಸ್‌ನ ನಾಯಕನಾಗಿ ಪ್ರಜ್ವಲ್ ಗುರುತಿಸಲ್ಪಡುತ್ತಾನೆ ಎಂದಾದರೆ ಅವನು ಮಾಡಿದ ಈ ನೀಚ ಕೃತ್ಯಕ್ಕಾಗಿ ದೇವೇಗೌಡರ ಕುಟುಂಬವನ್ನು ಯಾಕೆ ಹೊಣೆ ಮಾಡಬಾರದು? ಎಂದು ಜನರು ಕೇಳುತ್ತಿದ್ದಾರೆ.
‘‘ಸಂಸದ ಪ್ರಜ್ವಲ್‌ನ ಲೈಂಗಿಕ ಹಗರಣದಲ್ಲಿ ನನ್ನನ್ನು ಮತ್ತು ದೇವೇಗೌಡರನ್ನು ದಯವಿಟ್ಟು ಎಳೆದು ತರಬೇಡಿ’’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಆದರೆ ಅದಕ್ಕಾಗಿ ನನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಅಪಚಾರ ಮಾಡಬೇಡಿ’’ ಎಂದು ಅವರು ಕೋರಿದ್ದಾರೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯ ಪ್ರೇಮ ಪ್ರಕರಣವೊಂದರಲ್ಲಿ ಯುವಕನೊಬ್ಬ ಮಹಿಳೆಯನ್ನು ಹತ್ಯೆ ಮಾಡಿದ. ಈ ಕೃತ್ಯವನ್ನು ಒಂದು ಸಮುದಾಯದ ತಲೆಗೆ ಕಟ್ಟಿ ಜೆಡಿಎಸ್ ಮಿತ್ರ ಪಕ್ಷವಾಗಿರುವ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಿ, ಹತ್ಯೆಗೆ ಒಂದು ಸಮುದಾಯವನ್ನು ಹೊಣೆ ಮಾಡಿತು. ಇಂತಹ ಸಂದರ್ಭದಲ್ಲಿ ‘‘ದಯವಿಟ್ಟು ಆತನ ಕೃತ್ಯವನ್ನು ಇಡೀ ಸಮುದಾಯದ ತಲೆಗೆ ಕಟ್ಟಬೇಡಿ. ಆತನ ಕೃತ್ಯಕ್ಕೂ ಆ ಸಮುದಾಯಕ್ಕೂ ಯಾವ ಸಂಬಂಧವೂ ಇಲ್ಲ’’ ಎನ್ನುವ ಹೇಳಿಕೆಯನ್ನು ಈವರೆಗೆ ಕುಮಾರಸ್ವಾ ಮಿಯವರು ನೀಡಿಲ್ಲ. ಯಾವನೋ ಒಬ್ಬ ಶ್ರೀಸಾಮಾನ್ಯ ತಪ್ಪು ಮಾಡಿದರೆ ಅದನ್ನು ಆತ ಪ್ರತಿನಿಧಿಸುವ ಇಡೀ ಸಮುದಾಯ ಹೊಣೆ ಹೊತ್ತುಕೊಳ್ಳಬೇಕು ಎಂದಾದರೆ ಆ ನಿಯಮ ಕುಮಾರ ಸ್ವಾಮಿ ಕುಟುಂಬಕ್ಕೂ ಅನ್ವಯವಾಗಬೇಡವೆ? ದೇವೇಗೌಡ ಕುಟುಂಬದ ಹಿರಿಯ ಸದಸ್ಯನೊಬ್ಬ ನಡೆಸಿದ ವಿಕೃತ ಲೈಂಗಿಕ ದೌರ್ಜನ್ಯಗಳ ಹೊಣೆಯನ್ನ್ನು ಇಡೀ ಸಮುದಾಯ ಹೊತ್ತುಕೊಳ್ಳಬೇಕು ಎಂದು ಜನತೆ ನಿರೀಕ್ಷಿಸುತ್ತಿಲ್ಲ, ಕನಿಷ್ಠ ಅವರ ಕುಟುಂಬವಾದರೂ ಅದನ್ನು ಹೊತ್ತುಕೊಳ್ಳಲೇ ಬೇಕಲ್ಲವೆ?
ವಿಪರ್ಯಾಸವೆಂದರೆ, ರೇವಣ್ಣ ಕುಟುಂಬಕ್ಕೂ ತನ್ನ ಕುಟುಂಬಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವಂತಹ ಹೇಳಿಕೆಗಳನ್ನು ಕುಮಾರಸ್ವಾಮಿಯವರು ನೀಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ನಾಯಕನಾಗಲು ಇರುವ ಒಂದೇ ಒಂದು ಅರ್ಹತೆಯೆಂದರೆ ಜೆಡಿಎಸ್‌ನ ಕುಟುಂಬದ ಸದಸ್ಯನಾಗಿರುವುದು. ಪ್ರಜ್ವಲ್ ಸಂಸದನಾಗಿ ಆಯ್ಕೆಯಾಗಿರುವುದು, ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ದೇವೇಗೌಡರ ಮೊಮ್ಮಗ ಎನ್ನುವ ಒಂದೇ ಒಂದು ‘ಅರ್ಹತೆ’ಯೊಂದಿಗೆ. ಅದಕ್ಕೆ ಹೊರತಾದ ಯಾವುದೇ ಯೋಗ್ಯತೆಯೂ ಪ್ರಜ್ವಲ್‌ಗೆ ಇಲ್ಲ ಎನ್ನುವುದು ನಾಡಿಗೇ ಗೊತ್ತಿದೆ. ಈ ಹಿಂದಿನ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಜ್ವಲ್ ಪರವಾಗಿ ಮತ ಯಾಚಿಸಿದ್ದಾರೆ. ‘‘ಪ್ರಜ್ವಲ್ ರೇವಣ್ಣನ ಮಗ ಅಲ್ಲ. ನನ್ನ ಮಗ ಎಂದು ಭಾವಿಸಿ ಮತ ನೀಡಿ’’ ಎಂದು ಮತದಾರರಲ್ಲಿ ಕೇಳಿಕೊಂಡಿದ್ದರು. ಜನಸಾಮಾನ್ಯರು ‘ದೇವೇಗೌಡರ ಮೊಮ್ಮಗ, ರೇವಣ್ಣರ ಮಗ, ಕುಮಾರಸ್ವಾಮಿಯ ಅಣ್ಣನ ಮಗ’ ಎನ್ನುವ ನಂಬಿಕೆಯಿಂದ ಆತನಿಗೆ ಮತ ಹಾಕಿದ್ದರು. ಕಳೆದ ವರ್ಷ ಇದೇ ಪ್ರಜ್ವಲ್ ‘‘ದೇವೇಗೌಡರಿಗಾಗಿ ಹಾಸನದ ಕ್ಷೇತ್ರವನ್ನು ತ್ಯಾಗ ಮಾಡಲು ಸಿದ್ಧ’’ ಎಂಬ ಹೇಳಿಕೆ ನೀಡಿ, ಮಾಧ್ಯಮಗಳಲ್ಲಿ ಮಿಂಚಿದ್ದರು. ಪ್ರಜ್ವಲ್ ಮತ್ತು ಆತನ ಕುಟುಂಬದ ನಡುವಿನ ಸೌಹಾರ್ದ ಸಂಬಂಧವನ್ನು ಇದು ಹೇಳುತ್ತದೆ. ಪ್ರಜ್ವಲ್ ರಾಜಕೀಯಕ್ಕೆ ಕಾಲಿಡುವ ಸಂದರ್ಭದಲ್ಲಿ ದೇವೇಗೌಡರು ಮಾಧ್ಯಮಗಳ ಮುಂದೆ ಆತನ ಪರವಾಗಿ ಹೇಳಿಕೆಯನ್ನು ನೀಡಿದ್ದರು. ‘‘ಪ್ರಜ್ವಲ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯ ಕೂಡಿ ಬಂದಿದೆ. ನನ್ನ ಜೊತೆಗೆ ಹತ್ತು ದಿನ ಸುತ್ತಾಡಿದರೆ ಅವನನ್ನು ರೆಡಿ ಮಾಡುತ್ತೇನೆ’’ ಎಂದು ಅವರು ಜನತೆಗೆ ಭರವಸೆ ನೀಡಿದ್ದರು. ದೇವೇಗೌಡರು ತಯಾರು ಮಾಡಿದ ಕುಡಿ ಎಂಬ ಕಾರಣಕ್ಕಾಗಿಯೇ ಜನತೆ ಪ್ರಜ್ವಲ್‌ನನ್ನು ನಾಯಕನೆಂದು ಒಪ್ಪಿಕೊಂಡಿದ್ದರು. ಇದೀಗ ಅವನನ್ನು ದೇವೇಗೌಡ ಕುಟುಂಬ ಯಾವ ರೀತಿಯಲ್ಲಿ ಸಿದ್ಧಪಡಿಸಿದೆ ಎನ್ನುವುದು ಜಗಜ್ಜಾಹೀರಾಗಿದೆ. ಪ್ರಜ್ವಲ್ ತನ್ನ ಕೃತ್ಯದ ಮೂಲಕ ಇಡೀ ಕುಟುಂಬದ ಮಾನವನ್ನು ಹರಾಜಿಗಿಟ್ಟ ಬೆನ್ನಿಗೇ, ಆತನ ಜೊತೆಗೆ ಸಂಬಂಧವೇ ಇಲ್ಲ ಎನ್ನುವಂತಹ ಮಾತುಗಳನ್ನು ಕುಮಾರಸ್ವಾಮಿ ಆಡುತ್ತಿದ್ದಾರೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ. ಕುಮಾರಸ್ವಾಮಿ ಈ ಮೂಲಕ ಜನಸಾಮಾನ್ಯರಿಗೆ ವಂಚಿಸಿದ್ದಾರೆ. ‘ಕುಮಾರಸ್ವಾಮಿಯ ಮಗ’ ಎಂದು ನಂಬಿ ಮತ ನೀಡಿದ ಜನರು ಮೋಸ ಹೋಗಿದ್ದಾರೆ.
ದೇವೇಗೌಡರ ಸಕಲ ವರ್ಚಸ್ಸಿನ ಪಾಲನ್ನು ಅವರ ಕುಡಿಗಳು ಅನುಭವಿಸ ಬಹುದಾದರೆ, ಅವರ ಕುಡಿಗಳ ಕಳಂಕದ ಪಾಲನ್ನು ದೇವೇಗೌಡರು ಮತ್ತು ಅವರ ಪುತ್ರರೂ ತಮ್ಮದಾಗಿಸಿಕೊಳ್ಳುವುದು ಅನಿವಾರ್ಯ. ಆದುದರಿಂದ, ಸದ್ಯಕ್ಕೆ ಪ್ರಜ್ವಲ್ ಅವರು ತಲೆಮರೆಸಿಕೊಂಡು ವಿದೇಶದಲ್ಲಿ ಅಡಗಿ ಕೊಂಡಿರುವುದಕ್ಕೆ ದೇವೇಗೌಡರನ್ನು ಮತ್ತು ಕುಮಾರಸ್ವಾಮಿಯನ್ನು ಹೊಣೆ ಮಾಡಬೇಕಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಆರೋಪಿಯನ್ನು ತನಿಖಾ ತಂಡಕ್ಕೆ ಒಪ್ಪಿಸಿ ವಿಚಾರಣೆಯನ್ನು ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದರೆ, ಕುಮಾರ ಸ್ವಾಮಿಯ ಮಾತುಗಳನ್ನು ನಾವು ವಿಶ್ವಾಸಾರ್ಹವೆಂದು ಪರಿಗಣಿಸಬಹುದಿತ್ತು. ಆರೋಪಿಯನ್ನು ವಿದೇಶಕ್ಕೆ ಪರಾರಿಯಾಗಲು ಬಿಟ್ಟು, ಇದೀಗ ಅಮಾನತು ಪ್ರಹಸನವನ್ನು ನಡೆಸಿ ತನ್ನ ಮಾನವನ್ನು ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಯತ್ನಿಸುತ್ತಿದ್ದಾರೆ. ಕನಿಷ್ಠ ಆತನನ್ನು ಪಕ್ಷದಿಂದ ಸಂಪೂರ್ಣ ವಜಾ ಮಾಡುವ ನಿರ್ಧಾರವನ್ನೂ ಜೆಡಿಎಸ್ ಮುಖಂಡರು ತೆಗೆದುಕೊಂಡಿಲ್ಲ. ಈ ಪ್ರಕರಣದಲ್ಲಿ ಜೆಡಿಎಸ್ ನಾಯಕರನ್ನು ಮಾತ್ರವಲ್ಲ, ಜೆಡಿಎಸ್‌ನೊಂದಿಗೆ ಮೈತ್ರಿಯನ್ನು ಮಾಡಿಕೊಂಡಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಕೂಡ ಎಳೆದು ತರಬೇಕಾಗಿದೆ. ‘ಪ್ರಜ್ವಲ್‌ನ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುವ ಕಾರಣಕ್ಕಾಗಿ’ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ. ಆದರೆ ಪ್ರಜ್ವಲ್‌ನ ಲೈಂಗಿಕ ಹಗರಣ ಇಂದು ನಿನ್ನೆಯದೇನೂ ಅಲ್ಲ. ಇದು ಅತ್ಯಂತ ಹಳೆಯ ಪ್ರಕರಣ. ಇದರ ವಿರುದ್ಧ ಸುದ್ದಿಗಳನ್ನು ಪ್ರಕಟಿಸದಂತೆ ಈಹಿಂದೆ ಪ್ರಜ್ವಲ್ ತಡೆಯಾಜ್ಞೆಯನ್ನೂ ತಂದಿದ್ದರು. ಇಷ್ಟು ಗೊತ್ತಿದ್ದೂ ಜೆಡಿಎಸ್ ಜೊತೆಗೆ ಬಿಜೆಪಿ ರಾಜ್ಯದಲ್ಲಿ ಮೈತ್ರಿಯನ್ನು ಮಾಡಿಕೊಂಡಿದೆ ಎಂದಾದರೆ, ಹಗರಣದಲ್ಲಿ ತನ್ನ ಪಾಲನ್ನು ಬಿಜೆಪಿ ಸ್ವತಃ ಕೇಳಿ ಪಡೆದುಕೊಂಡಿದೆ. ಬಿಜೆಪಿಗೆ ಅಶ್ಲೀಲ ಸೀಡಿಗಳು ಹೊಸತಲ್ಲ. ಆದರೆ ಪ್ರಜ್ವಲ್ ಹಗರಣ ಎಷ್ಟು ವಿಕೃತಗಳಿಂದ ಕೂಡಿವೆ ಎಂದರೆ, ಈ ಪೆನ್‌ಡ್ರೈವ್‌ನಿಂದ ತನ್ನ ಮಾನ ಉಳಿಸಿಕೊಳ್ಳುವುದಕ್ಕಾಗಿಯೇ ಜೆಡಿಎಸ್ ಪಕ್ಷವು ರಾತ್ರೋರಾತ್ರಿ ಬಿಜೆಪಿಯೊಂದಿಗೆ ಸಂಬಂಧ ಬೆಳೆಸಿತು ಎನ್ನುವ ಆರೋಪಗಳಿವೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅನೈತಿಕ ಮೈತ್ರಿಯ ಹಿಂದೆ ಈ ಅನೈತಿಕ ಪೆನ್‌ಡ್ರೈವ್ ಪಾತ್ರವೆಷ್ಟು ಎನ್ನುವುದು ಕೂಡ ತನಿಖೆಯಿಂದ ಹೊರ ಬರಬೇಕಾಗಿದೆ.
ಈ ವರೆಗೆ ಕುಟುಂಬ ರಾಜಕೀಯಕ್ಕಾಗಿ ಜೆಡಿಎಸ್ ಟೀಕೆಗೊಳಗಾಗಿತ್ತು. ಇನ್ನು ಮುಂದೆ ತೆನೆ ಹೊತ್ತ ಮಹಿಳೆ, ತೆನೆಯನ್ನು ಕೆಳಗಿಟ್ಟು, ಕುಟುಂಬದ ಲೈಂಗಿಕ ಕಳಂಕವನ್ನೂ ಹೊತ್ತುಕೊಂಡು ತಿರುಗಬೇಕಾಗಿದೆ. ಈ ಕಳಂಕದಿಂದ ಜೆಡಿಎಸ್ ಮುಕ್ತವಾಗಬೇಕಾದರೆ, ನೈತಿಕ ಹೊಣೆ ಹೊತ್ತು ದೇವೇಗೌಡ ಕುಟುಂಬ ರಾಜಕೀಯ ನಿವೃತ್ತಿಯನ್ನು ಘೋಷಿಸಬೇಕು. ಆಮೂಲಕ ರಾಜ್ಯದಲ್ಲಿ ಹೊಸ ಜೆಡಿಎಸ್‌ನ್ನು ಕಟ್ಟುವುದಕ್ಕೆ ದಾರಿಯನ್ನು ತೆರೆದುಕೊಡಬೇಕಾಗಿದೆ.