ರಾಜ್ಯಪಾಲರು ಅತಿರೇಕದ ಮಾತಾಡಬಾರದು

Update: 2024-10-22 06:19 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಯಾವುದೇ ಸಂದರ್ಭದಲ್ಲೂ ರಾಜ್ಯಪಾಲರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ರಾಜ್ಯಪಾಲರು ಕೇಂದ್ರ ಸರಕಾರದ ರಾಜಕೀಯ ಪ್ರತಿನಿಧಿಗಳಲ್ಲ, ಅವರು ರಾಷ್ಟ್ರಪತಿಗಳ ಪ್ರತಿನಿಧಿ ಮಾತ್ರ ಆಗಿರುತ್ತಾರೆ. ಆದರೆ ಆತಂಕದ ಸಂಗತಿಯೆಂದರೆ ತಮಿಳುನಾಡು ಮತ್ತು ಕೇರಳದ ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿ ಮೀರಿ ರಾಜ್ಯಗಳ ಚುನಾಯಿತ ಸರಕಾರಗಳನ್ನು ಅಡ್ಡ ದಾರಿಯಲ್ಲಿ ಉರುಳಿಸಲು ಪ್ರಯತ್ನಿಸುವವರಂತೆ ವರ್ತಿಸುತ್ತಿದ್ದಾರೆ.

ತಮಿಳುನಾಡು ರಾಜ್ಯಪಾಲರು ಈಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಇತ್ತೀಚೆಗೆ ಅವರು ತಮಿಳು ದೂರದರ್ಶನದ ಸುವರ್ಣ ಮಹೋತ್ಸವ ಸಂದರ್ಭ ಆಯೋಜಿಸಿದ ಹಿಂದಿ ಮಾಸಾಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ತಮಿಳುನಾಡಿನ ನಾಡಗೀತೆಯಲ್ಲಿ ಇರುವ ‘ದ್ರಾವಿಡ’ ಪದವನ್ನು ಕೈ ಬಿಟ್ಟು ಹಾಡಲಾಗಿತ್ತು. ಅವರ ಈ ಉದ್ಧಟವರ್ತನೆಯಿಂದ ರಾಜ್ಯದಲ್ಲಿ ದ್ರಾವಿಡ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗ ಆರ್.ಎನ್. ರವಿ ವಿರುದ್ಧ ಪೋಸ್ಟ್ ಕಾರ್ಡ್ ಚಳವಳಿ ಕೂಡ ಆರಂಭವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜಭವನವನ್ನು ರಾಜಕೀಯ ಪಕ್ಷವೊಂದರ ಕಚೇರಿಯನ್ನಾಗಿ ಮಾಡುವ ಚಾಳಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಇರುವುದು ದ್ರಾವಿಡ ಸೈದ್ಧಾಂತಿಕ ಮೂಲದ ಡಿಎಂಕೆ ಪಕ್ಷದ ಸರಕಾರ. ಉತ್ತರ ಭಾರತದ ಹಿಂದಿ ಹೇರಿಕೆಯನ್ನು ಖಂಡತುಂಡವಾಗಿ ವಿರೋಧಿಸುತ್ತ ಬಂದ ಡಿಎಂಕೆಗೆ ವೈಚಾರಿಕ ಸ್ಫೂರ್ತಿಯಾದವರು ಪೆರಿಯಾರ್ ರಾಮಸ್ವಾಮಿ ನಾಯ್ಕರ್. ಇಂತಹ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರ ನೆಲೆಯೂರಲು ಯತ್ನಿಸುತ್ತಿದೆ. ಕೇಂದ್ರದಿಂದ ಹೇರಲ್ಪಟ್ಟ ರಾಜ್ಯಪಾಲರುಗಳು ಅದಕ್ಕೆ ಪೂರಕವಾಗಿ ವರ್ತಿಸುತ್ತಿದ್ದಾರೆ ಎಂಬುದು ಆತಂಕದ ವಿಷಯವಾಗಿದೆ.

ಆರ್.ಎನ್. ರವಿ ಅವರ ಅತಿರೇಕದ ವರ್ತನೆ ಇದೇ ಮೊದಲ ಬಾರಿಯಲ್ಲ.ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಒಂದಿಲ್ಲೊಂದು ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ರಾಜ್ಯ ಸಚಿವ ಸಂಪುಟ ಸಿದ್ಧಪಡಿಸಿದ ಲಿಖಿತ ಭಾಷಣದಲ್ಲಿ ಕೇಂದ್ರ ಸರಕಾರದ ಬಗ್ಗೆ ಟೀಕೆಗಳು ಇರುವ ಅಂಶಗಳನ್ನು ಓದಲು ನಿರಾಕರಿಸಿ ಸದನದಿಂದ ಹೊರ ನಡೆದಿದ್ದರು. ವಿವಾದ ಸೃಷ್ಟಿಸುವಲ್ಲಿ ತಮಿಳುನಾಡು ರಾಜ್ಯಪಾಲ ರವಿ ಮತ್ತು ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರ ನಡುವೆ ಸ್ಪರ್ಧೆ ನಡೆದಿರುವಂತೆ ಕಾಣುತ್ತದೆ. ಕೇರಳದ ರಾಜ್ಯ ವಿಧಾನಸಭೆ ವಿಧೇಯಕಗಳಿಗೆ ಅಂಕಿತ ಹಾಕಲು ನಿರಾಕರಿಸಿದಾಗ ಅಲ್ಲಿನ ಎಡರಂಗ ಸರಕಾರ ನ್ಯಾಯಾಲಯದ ಮೆಟ್ಟಲೇರಬೇಕಾಯಿತು. ಪಂಜಾಬ್ ರಾಜ್ಯಪಾಲರು ಇದೇ ರೀತಿ ವರ್ತಿಸಿದಾಗ ಸುಪ್ರೀಂಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರುಗಳು ಅವರು ಮುಂಚೆ ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಒಮ್ಮೆ ಅಧಿಕಾರ ವಹಿಸಿಕೊಂಡ ನಂತರ ಅವರ ನಿಷ್ಠೆ ಸಂವಿಧಾನಕ್ಕೆ ಇರಬೇಕು. ಬಿಜೆಪಿ ಮೂಲದಿಂದ ಬಂದವರಾಗಿದ್ದರೆ ಅವರು ತಮ್ಮ ಸೈದ್ಧಾಂತಿಕ ಮಾರ್ಗದರ್ಶಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವ್ಯಾಮೋಹದಿಂದ ದೂರವಾಗಬೇಕು. ಯಾಕೆಂದರೆ ನಮ್ಮ ಸಂವಿಧಾನಕ್ಕೂ ಸಂಘದ ಸಿದ್ಧಾಂತಕ್ಕೂ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ಅರಿತು ಕೊಳ್ಳಬೇಕು.

ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ ಹತ್ತು ವರ್ಷಗಳ ಕಾಲಾವಧಿಯಲ್ಲಿ ನೇಮಕ ಮಾಡಿದ ರಾಜ್ಯಪಾಲರುಗಳು ಅದರಲ್ಲೂ ಬಿಜೆಪಿಯೇತರ ಪಕ್ಷಗಳ ಸರಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ರಾಜ್ಯಪಾಲರುಗಳು ಅಲ್ಲಿನ ಚುನಾಯಿತ ಸರಕಾರಗಳ ಜೊತೆ ನಿರಂತರವಾಗಿ ಸಂಘರ್ಷ ನಡೆಸಿದ್ದಾರೆ. ಅಲ್ಲಿನ ಸರಕಾರಗಳನ್ನು ಮುಗಿಸಲು ಬಿಜೆಪಿಯಿಂದ ಸುಪಾರಿ ಪಡೆದವವರಂತೆ ನಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಅವರು ಬಹಿರಂಗ ಭಾಷಣ ಹಾಗೂ ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಹುದ್ದೆಯ ಘನತೆ ಮತ್ತು ಗೌರವಗಳಿಗೆ ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.

ರಾಜ್ಯಸಭಾ ಉಪಸಭಾಪತಿ ಸ್ಥಾನದಲ್ಲಿದ್ದವರು ಹಾಗೂ ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದವರು ಒಮ್ಮೆ ಅಧಿಕಾರ ವಹಿಸಿಕೊಂಡರೆ ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ತಮ್ಮ ವೈಯಕ್ತಿಕ ರಾಜಕೀಯ ಅಭಿಪ್ರಾಯ ಏನೇ ಇರಲಿ ಅವರು ನಿಷ್ಪಕ್ಷವಾಗಿ ನಡೆದುಕೊಳ್ಳಬೇಕು. ತಾವು ವಹಿಸಿಕೊಂಡ ಸ್ಥಾನಕ್ಕೆ ಎಂದೂ ಅಪಚಾರ ಮಾಡಬಾರದು. ವಿಶೇಷವಾಗಿ ರಾಜ್ಯಪಾಲರಾದವರು ಚುನಾಯಿತ ಸರಕಾರಗಳ ಜೊತೆಗೆ ಸಂಘರ್ಷಕ್ಕೆ ಇಳಿಯಬಾರದು. ಇಂತಹವರ ವರ್ತನೆಯಿಂದಾಗಿ ರಾಜ್ಯಪಾಲರ ಹುದ್ದೆಯ ಔಚಿತ್ಯದ ಬಗ್ಗೆ ಸಹಜವಾಗಿ ಪ್ರಶ್ನೆಗಳು ಮೂಡುತ್ತವೆ. ಆದ್ದರಿಂದ ಉಪಸಭಾಪತಿ ಹಾಗೂ ರಾಜ್ಯಪಾಲರುಗಳು ಮಾತನಾಡುವಾಗ ಎಚ್ಚರ ವಹಿಸಬೇಕು.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕೂಡಾ ಅನೇಕ ಬಾರಿ ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ಸಂವಿಧಾನಕ್ಕೆ ಅಪಚಾರ ಉಂಟು ಮಾಡುವವರಂತೆ ವರ್ತಿಸುತ್ತಿದ್ದಾರೆ ಎನಿಸುತ್ತದೆ. ಒಮ್ಮೆ ಅವರು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೋವಾಗುವಂತೆ ಮಾತಾಡಿದ್ದರು.

ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಾದವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾಗಿ ನಡೆದು ಕೊಳ್ಳಬಾರದು. ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ. ರಾಜ್ಯದ ಚುನಾಯಿತ ಸರಕಾರದ ದಾಖಲೆ ಹಾಗೂ ಕಾಗದ ಪತ್ರಗಳಿಗೆ ಅಂಕಿತ ಹಾಕುವುದಷ್ಟೇ ಅವರ ಕರ್ತವ್ಯ.

ಜನರಿಂದ ಚುನಾಯಿತವಾದ ಸರಕಾರ ಹಾಗೂ ರಾಜ ಭವನದ ನಡುವೆ ಯಾವುದೇ ಅನಗತ್ಯ ಸಂಘರ್ಷ ಉಂಟಾಗಬಾರದೆಂದೇ ನಮ್ಮ ಸಂವಿಧಾನ ನಿರ್ಮಾಪಕರು ಎಚ್ಚರ ವಹಿಸಿದ್ದಾರೆ. ಹಾಗಾಗಿ ರಾಜ್ಯಪಾಲರುಗಳು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News