ಅಡಿಕೆ ಕ್ಯಾನ್ಸರ್ ಕಾರಕವಲ್ಲ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

Update: 2025-01-18 23:04 IST
ಅಡಿಕೆ ಕ್ಯಾನ್ಸರ್ ಕಾರಕವಲ್ಲ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
  • whatsapp icon

ಸಾಗರ: ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ತಪ್ಪು ಸಂದೇಶವನ್ನು ಹರಡಲಾಗಿದೆ. ಅಡಿಕೆ ಜೊತೆ ಇತರ ವಸ್ತು ಮಿಶ್ರಣ ಮಾಡಿದಾಗ ಅಡಿಕೆ ಹಾನಿಕಾರವಾಗಬಹುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಪಟ್ಟಣದ ಸಂತೆ ಮೈದಾನದಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಆಪ್ಸ್ಕೋಸ್, ತೋಟಗಾರ್ಸ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಡಿಕೆ ಔಷಧೀಯ ಗುಣ ಹೊಂದಿರುವುದು ನಿಶ್ಚಿತ. ಅಡಿಕೆ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸಿ ಸುಪ್ರೀಂ ಕೋರ್ಟ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ವರದಿಯನ್ನು ಮಂಡಿಸುವ ಮೂಲಕ ಸಂದೇಹವನ್ನು ದೂರ ಮಾಡುವ ಕೆಲಸ ಕೇಂದ್ರ ಸರಕಾರ ಮಾಡುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಎಸ್ಸಿ), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಸೆಂಟರ್ ಫಾರ್ ಸೆಲ್ಯೂಲರ್ ಆ್ಯಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ)ಯಂತಹ ರಾಷ್ಟ್ರೀಯ ಮಟ್ಟದ 17 ಸಂಶೋಧನಾ ಸಂಸ್ಥೆಗಳ ಮೂಲಕ ಪ್ರಯತ್ನ ನಡೆಯುತ್ತಿದ್ದು, ಶೀಘ್ರದಲ್ಲಿಯೆ ಸಂಶೋಧನಾ ವರದಿ ಬರುವ ನಿರೀಕ್ಷೆ ಇದೆ. ಅಡಿಕೆ ಬೆಳೆಗಾರರು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.

ಭಾರತ ಅಡಿಕೆ ಉತ್ಪಾದನೆಯ ಅತಿದೊಡ್ಡ ದೇಶವಾಗಿದ್ದು, ಜಗತ್ತಿನ ಅಡಿಕೆ ವಹಿವಾಟಿಗೆ ಶೇ.63ರಷ್ಟು ಅಡಿಕೆಯನ್ನು ಪೂರೈಸುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರಿದ್ದು, ಅವರ ಹಿತರಕ್ಷಣೆ ನಮ್ಮ ಆದ್ಯಕರ್ತವ್ಯ. ಈಗಾಗಲೆ ಅಡಿಕೆ ಆಮದು ಶುಲ್ಕವನ್ನು 352 ರೂ.ಗೆ ಹೆಚ್ಚಿಸಿದ್ದು, ಅಗತ್ಯ ಬಿದ್ದರೆ ಅದನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ ಎಂದ ಶಿವರಾಜ ಸಿಂಗ್ ಚೌಹಾಣ್, ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಬರುತ್ತಿರುವ ಅಡಿಕೆಯನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪಮಾತನಾಡಿ, ಅಡಿಕೆ ಬೆಳೆಯಲ್ಲಿ ಶಿವಮೊಗ್ಗ ಜಿಲ್ಲೆ ನಂ. 1 ಸ್ಥಾನವನ್ನು ಪಡೆದಿದೆ. ಅತಿಹೆಚ್ಚು ಅಡಿಕೆ ಬೆಳೆ ಮತ್ತು ಬೆಳೆಗಾರರನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಪ್ರಯತ್ನ ನಡೆಸಬೇಕು. ಇದಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೇಂದ್ರ ಸರಕಾರ ಅಡಿಕೆ ಬೆಳೆಗಾರರು ಮತ್ತು ಅಡಿಕೆ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಕ್ಯಾನ್ಸರ್ಕಾರಕ ಎನ್ನುವ ವರದಿಯನ್ನು ನೀಡಿದೆ. ಅದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಸಂಶೋಧನೆ ನಡೆಸುತ್ತಿದೆ. ಅಡಿಕೆ ಕುರಿತು ಸಂಶೋಧನೆಗೆ ಕೇರಳದಲ್ಲಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಪ್ರಾರಂಭಿಸಿದ್ದು, ಅಗತ್ಯ ಸಂಶೋಧನೆ ನಡೆಯುತ್ತಿದೆ. ಎಲೆಚುಕ್ಕೆ ರೋಗದಿಂದ ಹಾನಿಗೊಳಗಾದ ತೋಟಗಳಿಗೆ ಪರಿಹಾರ ನೀಡಲು ಯೋಜನೆ ರೂಪಿಸಲಾಗಿದೆ. ಅಡಿಕೆ ತೇವಾಂಶವನ್ನು ಶೇ. 10ರಿಂದ 11ಕ್ಕೆ ಹೆಚ್ಚಿಸಲು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಬಾರಿ ಸುರಿದ ಅತಿವೃಷ್ಟಿಯಿಂದ ಶೇ.60ರಷ್ಟು ಅಡಿಕೆ ಕಳೆದುಕೊಂಡಿದ್ದಾರೆ. ಬೆಳೆಗಾರರನ್ನು ರಕ್ಷಿಸುವ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರಕಾರದ್ದಾಗಿದೆ. ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ, ಬೇರುಹುಳದಂತಹ ಮಾರಕ ರೋಗಗಳಿಂದ ಬೆಳೆಗಾರ ಫಸಲು ಕಳೆದುಕೊಂಡು ಆತ್ಮಹತ್ಯೆ ದಾರಿ ತುಳಿಯುವ ದುಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಬೆಳೆಗಾರರ ನೆರವಿಗೆ ಸರಕಾರಗಳು ಬರಬೇಕಾಗಿದೆ ಎಂದರು.

ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದ ಕೆನರಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಗರೇಟ್ ಇನ್ನಿತರ ಲಾಬಿಯ ಷಡ್ಯಂತ್ರದಿಂದ ಅಡಿಕೆ ಹಾನಿಕಾರಕ ಎನ್ನುವ ಸುದ್ದಿಯನ್ನು ಹರಡಲಾಗಿದೆ. ಕೇಂದ್ರ ಸರಕಾರ ಅಡಿಕೆ ಔಷಧೀಯ ವಸ್ತುವನ್ನು ಹೊಂದಿದೆ ಎನ್ನುವುದನ್ನು ಸಾಬೀತು ಮಾಡಲು ಈಗಾಗಲೆ ಸಂಶೋಧನೆಗೆ ತಾಂತ್ರಿಕ ಸಮಿತಿಯನ್ನು ರಚಿಸಿದೆ. ವಿದೇಶದಿಂದ ಅಡಿಕೆ ಆಮದು ಆಗುತ್ತಿರುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ಯಶಸ್ವಿ ಪ್ರಯತ್ನ ನಡೆಯುತ್ತಿದೆ. ನಮ್ಮ ಅಡಿಕೆ ಜೊತೆಗೆ ಕಳಪೆ ಅಡಿಕೆ ಮಿಶ್ರಣವಾಗುವುದನ್ನು ತಡೆಗಟ್ಟಲು ಬೆಳೆಗಾರರು ಧ್ವನಿ ಎತ್ತಬೇಕೆಂದು ಕರೆ ನೀಡಿದರು.

ಇದೇ ವೇಳೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಅಡಿಕೆ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ್ ಕೊಡ್ಗಿ, ಮಾಜಿ ಸಚಿವ ಹಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ, ಆಪ್ಸ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದೇವಪ್ಪ, ಮಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಹೊರನಾಡು ದೇವಾಲಯದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ, ಶಿರಸಿ ಟಿಎಸ್ಎಸ್ ಅಧ್ಯಕ್ಷ ಬಾಲಕೃಷ್ಣ ವೈದ್ಯ, ವರ್ತಕರ ಸಂಘದ ಅಧ್ಯಕ್ಷ ಎಂ.ವಿ.ಮೋಹನ್, ವಾಪಾರಸ್ಥರ ಸಂಘದ ಅಧ್ಯಕ್ಷ ನಿರಂಜನ ಕೋರಿ ಹಾಗೂ ಇತರರು ಉಪಸ್ಥಿತರಿದ್ದರು.

ಸ್ನೇಹಸಾಗರ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಯು.ಎಚ್.ರಾಮಪ್ಪ ಸ್ವಾಗತಿಸಿದರು. ವ.ಶಂ.ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಹಕ್ರೆ ಮನವಿ ಓದಿದರು. ಚೇತನರಾಜ್ ಕಣ್ಣೂರು ಅಭಿನಂದಿಸಿದರು. ಅನಿಲ್ ಒಡೆಯರ್ ವಂದಿಸಿದರು. ಮಾಲತಿ ಸಭಾಹಿತ್, ಕೌಶಿಕ್ ಕಾನುಗೋಡು ನಿರೂಪಿಸಿದರು.

ರೋಗಬಾಧೆಯಿಂದ ಅಡಿಕೆ ಬೆಳೆ ಸಂಕಷ್ಟ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಡಿಕೆ ರೋಗಕ್ಕೆ ಕಾರಣ ಮತ್ತು ಪರಿಹಾರಕ್ಕೆ ಸಂಬಂಧಪಟ್ಟ ಸಂಶೋಧನೆಗೆ ಕೇಂದ್ರ ಸರಕಾರ ಒತ್ತು ನೀಡಿದೆ. ಈಗಾಗಲೆ ಬೇರೆ ಬೇರೆ ಹಂತದಲ್ಲಿ ಅಡಿಕೆ ಬೆಳೆಯನ್ನು ಬಾಧಿಸುತ್ತಿರುವ ರೋಗಗಳಿಗೆ ಪರಿಹಾರ ಕಂಡು ಹಿಡಿಯಲು ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ವರದಿ ಬಂದ ನಂತರ ಕೇಂದ್ರ ಸರಕಾರ ಅತಿಹೆಚ್ಚು ಅನುದಾನ ನೀಡಿ ಸಂಶೋಧನೆಗೆ ಒತ್ತು ನೀಡಲಿದೆ.

ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ

ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿಲು ಹಲವು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಆದರೆ, ಈತನಕ ಪರಿಣಾಮಕಾರಿ ಕಾರ್ಯ ಯೋಜನೆ ಕೇಂದ್ರದಿಂದ ಸಿಕ್ಕಿಲ್ಲ. ಅಡಿಕೆಗೆ ಬಾಧಿಸುತ್ತಿರುವ ಕಾಯಿಲೆ ನಿವಾರಣೆಗೆ ಅಗತ್ಯ ಸಂಶೋಧನೆ ಕೈಗೊಳ್ಳಲು ತಕ್ಷಣ ಅಡಿಕೆ ಸಂಶೋಧನಾ ಕೇಂದ್ರ ಪ್ರಾರಂಭಿಸಬೇಕು. ಸುಪ್ರೀಂ ಕೋರ್ಟ್ನಲ್ಲಿ ಅಡಿಕೆ ಹಾನಿಕಾರಕ ಎನ್ನುವ ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರ ಇದಕ್ಕೆ ಸೂಕ್ತ ಅಫಿಡವಿಟ್ ಸಲ್ಲಿಸಿ ಅಡಿಕೆ ಆಪತ್ತು ನಿವಾರಿಸಬೇಕು. ಅಡಿಕೆ ಆರೋಗ್ಯಕ್ಕೆ ಪೂರಕವೇ ವಿನಃ ಮಾರಕವಲ್ಲ. ಅಡಿಕೆ ಹಾನಿಕಾರಕವಲ್ಲ ಎಂದು ಕೇಂದ್ರ ಸರಕಾರ ಘೋಷಣೆ ಮಾಡಬೇಕು.

ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ

ವಿದೇಶದಿಂದ ಬರುವ ಅಡಿಕೆಯನ್ನು ನಿಯಂತ್ರಿಸಬೇಕು. ಗುಣಮಟ್ಟದ ಅಡಿಕೆಗೆ ಕಳಪೆ ಅಡಿಕೆ ಬೆರೆಸುವ ಕೆಲಸ ನಿಲ್ಲಬೇಕು. ಸುಪ್ರೀಂ ಕೋರ್ಟ್ನಲ್ಲಿ ಅಡಿಕೆ ಬೆಳೆಯ ಬಗ್ಗೆ ಇರುವ ಅಪವಾದ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸರಿಯಾದ ಪ್ರತಿವಾದ ಮಂಡಿಸಬೇಕು. ಸೊಪ್ಪಿನ ಬೆಟ್ಟದ ಹೆಸರಿನಲ್ಲಿ ಕಾನು ಸಂರಕ್ಷಣೆ ಮಾಡಿಕೊಂಡು ಬಂದ ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುತ್ತಿರುವುದನ್ನು ನಿಲ್ಲಿಸಬೇಕು.

ಗೋಪಾಲಕೃಷ್ಣ ಬೇಳೂರು, ಶಾಸಕ


Delete Edit


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News