ಭದ್ರಾವತಿ | ಭೂಮಿ ತೆರವಿಗೆ ಸಾಗುವಳಿದಾರರಿಗೆ ಅರಣ್ಯ ಇಲಾಖೆ ನೋಟಿಸ್

ಶಿವಮೊಗ್ಗ : ಉಳುವವನೇ ಭೂಮಿ ಒಡೆಯ ಕಾಯ್ದೆಯಡಿ ಮಂಜೂರು ಮಾಡಿರುವ ಜಮೀನಿಗೂ ಅರಣ್ಯ ಇಲಾಖೆ ತೆರವು ಮಾಡುವಂತೆ ನೋಟಿಸ್ ನೀಡಿದೆ. ಇದರಿಂದ ರೈತರು ಭೂಮಿ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಿಗೆನಹಳ್ಳಿ ರೈತರು ಕಳೆದ ಆರೇಳು ದಶಕಗಳಿಂದ ಜೀವನೋಪಾಯಕ್ಕೆ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು ತೆರವು ಮಾಡುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
ಮಲ್ಲಿಗೆನಹಳ್ಳಿ ರೈತರು ಕಳೆದ 60-70 ವರ್ಷಗಳಿಂದ ಹೊಳೆಹೊನ್ನೂರು ಹೋಬಳಿಯ ಮಲ್ಲಿಗೆನಹಳ್ಳಿ ಸರ್ವೇ ನಂ 21 ಹಾಗೂ 31ರಲ್ಲಿ ನೂರಾರು ಎಕರೆ ಜಾಗದಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಈ ಭೂಮಿಗೆ 1965ರ ಸಾಲಿನಲ್ಲಿ ಸಾಗುವಳಿ ಚೀಟಿಯನ್ನು ಸಹ ಸರಕಾರದಿಂದ ನೀಡಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಬಂದು ರೈತರಿಗೆ ನೋಟಿಸ್ ನೀಡಿ ಸಾಗುವಳಿ ಮಾಡಿಕೊಂಡು ಬಂದ ಜಾಗವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡು ಬಂದ ರೈತರು ದಿಕ್ಕು ಕಾಣದೆ ಕಂಗಾಲಾಗಿದ್ದು ಸರಕಾರ ಅರಣ್ಯ ಇಲಾಖೆಗೆ ಸೂಚನೆ ನೀಡುವ ಮೂಲಕ ನೆರವಿಗೆ ಧಾವಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ 2015ರ ಒಳಗೆ ಸಾಗುವಳಿ ಮಾಡಿದ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ, ರೈತರ ಪರವಾಗಿ ನಮ್ಮ ಸರಕಾರ ಎಂದಿಗೂ ಇದೆ ಎಂದು ಅನೇಕ ಸರಕಾರಿ ಕಾರ್ಯಕ್ರಮಗಳು ಸೇರಿದಂತೆ ರಾಜಕೀಯ ಸಮಾರಂಭಗಳಲ್ಲಿ ಆಶ್ವಾಸನೆ ನೀಡಿದೆ. ಆದರೆ ಸರಕಾರವೇ ಹೇಳಿದ ಮಾತನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪಾಲಿಸುತ್ತಿಲ್ಲ. ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದ ಕೃಷಿ ಭೂಮಿಯನ್ನು ನಂಬಿ ಕೆಲವರು ಜಮೀನಿನ ಮೇಲೆ ಸಾಲ ಸೂಲ ಮಾಡಿ ಅಡಿಕೆ ತೋಟ ಮಾಡಿದ್ದರೆ, ಇನ್ನೂ ಕೆಲವರು ಇರುವ ಜಮೀನಿನಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಸರಕಾರ ರೈತರ ಮೇಲಿನ ಅರಣ್ಯ ಇಲಾಖೆಯ ಅಧಿಕಾರಿಗಳ ದಬ್ಬಾಳಿಕೆ ತಡೆದು ಸಾಗುವಳಿ ಮಾಡಿಕೊಂಡು ಬಂದ ಜಮೀನನ್ನು ಮುಂದುವರಿಸಿಕೊಂಡು ಹೋಗುವಂತೆ ಅನುವು ಮಾಡಿಕೊಡಬೇಕು ಎಂಬುದು ರೈತರ ಆಗ್ರಹವಾಗಿದೆ.
1966-67ನೇ ಸಾಲಿನಿಂದಲೂ ಉಳುಮೆ ಮಾಡುತ್ತಿದ್ದೇವೆ. ಉಳುವವನೇ ಭೂಮಿ ಒಡೆಯ ಕಾಯ್ದೆಯಡಿ ನಮಗೆ 1.5 ಎಕರೆ ಜಮೀನು ಮಂಜೂರಾಗಿದೆ. ಈಗ ಅರಣ್ಯ ಇಲಾಖೆ ಜಾಗ ನಮ್ಮದು ಅಂತ ಏಕಾಏಕಿ ತೆರವು ಮಾಡುವಂತೆ ನೋಟಿಸ್ ನೀಡಿದೆ. ಅರಣ್ಯ ಇಲಾಖೆ ದಬ್ಬಾಳಿಕೆ ನಡೆಸುತ್ತಿದೆ. ನಮಗೆ ಭೂಮಿ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
-ಗಿರೀಶ್,ಮಲ್ಲಿಗೆನಹಳ್ಳಿ
ಎಸಿಗೆ ಅರಣ್ಯ ಇಲಾಖೆ ಮೇಲ್ಮನವಿ :
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯ ಮಲ್ಲಿಗೆನಹಳ್ಳಿ ಗ್ರಾಮದ ಸ.ನಂ 31 ರಲ್ಲಿ 237 ಜನ ಒತ್ತುವರಿದಾರರಿಗೆ ಜಮೀನು ಮಂಜೂರು ಮಾಡಿರುವುದರ ವಿರುದ್ಧ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1966 ರ ನಿಯಮ 108(ಕೆ) ರದ್ದುಪಡಿಸುವಂತೆ ಮಾವಿನಕಟ್ಟೆ ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳು ಶಿವಮೊಗ್ಗ ಉಪವಿಭಾಗ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಉಪವಿಭಾಗ ಅಧಿಕಾರಿಯವರು ಭದ್ರಾವತಿ ತಹಶೀಲ್ದಾರ್ ಮೂಲಕ 237 ಜನ ರೈತರಿಗೆ ನೋಟೀಸ್ ಜಾರಿ ಮಾಡಿದ್ದಾರೆ.