ಬೇರೆ ಪಕ್ಷದ ಒಳ ಜಗಳ ಇಟ್ಟುಕೊಂಡು ರಾಜಕಾರಣ ಮಾಡಲ್ಲ: ಡಿ.ಕೆ.ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Photo:X/@DKShivakumar)
ಶಿವಮೊಗ್ಗ: ನಾವು ಬೇರೆ ಪಕ್ಷದ ಒಳ ಜಗಳ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗುವುದೇ ನಮ್ಮ ರಾಜಕಾರಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರ ಒಳ ಜಗಳವನ್ನು ಮುಚ್ಚಿಕೊಳ್ಳಲು ನಮ್ಮ ಸರ್ಕಾರದ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಅವರದು ಯಾವಾಗಲೂ ಇದ್ದದ್ದೇ, ಜನ ಅವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಕೆಲಸ ಕೊಟ್ಟಿದ್ದಾರೆ. ಅವರಿಗೆ ಅಧಿಕಾರ ಕೊಟ್ಟಾಗ ಆಡಳಿತ ನಡೆಸುವ ಅನುಭವ ಕೂಡ ಇರಲಿಲ್ಲ ಎಂದರು.
ಇನ್ನು ಕಾಂಗ್ರೆಸ್ ನಿಂದ ಹೋದವರಿಗೆ ಅಲ್ಲಿ ಯಾವ ಸ್ಥಾನಮಾನವೂ ಇಲ್ಲ, ಅಲ್ಲಿ ಅವರನ್ನು ಯೂಸ್ ಆ್ಯಂಡ್ ಥ್ರೋ ಮಾಡಿದ್ದಾರೆ. ಇದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಯೂಸ್ ಆ್ಯಂಡ್ ಥ್ರೋ ಮಾಡಿದವರ ಹೆಸರು ನಮ್ಮ ಬಳಿ ಇದೆ. ಆದರೆ ಅದನ್ನು ನಾವು ಹೇಳಲು ಹೋಗುವುದಿಲ್ಲ, ರಾಜಕೀಯವಾಗಿ ಒಬ್ಬೊಬ್ಬರು ಒಂದೊಂದು ಸಿದ್ಧಾಂತದ ಮೇಲೆ ಬೆಳೆದಿರುತ್ತಾರೆ. ಅಂತವರು ಬೇರೆ ಕಡೆಗೆ ಹೋದಾಗ ಅಲ್ಲಿನ ಪರಿಸ್ಥಿತಿ ಅವರಿಗೆ ಒಗ್ಗುವುದಿಲ್ಲ. ಅವರ ಪಾರ್ಟಿಯಲ್ಲಿ ಏನಾದರೂ ಮಾಡಿಕೊಳ್ಳಲಿ, ನಮಗೆ ಅದರಲ್ಲಿ ಮಧ್ಯಪ್ರವೇಶಿಸಲು ಇಷ್ಟವಿಲ್ಲ. ಅದರ ಲಾಭ ಪಡೆಯುವ ಉದ್ದೇಶವೂ ನಮಗಿಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದರು.
ಇನ್ನು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ನೋವು ಹಾಗೂ ಸಮಸ್ಯೆಯನ್ನು ಅವರು ಹೇಳಿಕೊಳ್ಳುತ್ತಿದ್ದಾರೆ, ಈಗಾಗಲೇ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿದೆ. ಕೆಲವೊಂದು ಘೋಷಣೆಗಳನ್ನು ಕೂಡ ಮಾಡಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.