ಶಿವಮೊಗ್ಗ ರೈಲು ನಿಲ್ದಾಣಕ್ಕೆ ಡಾ.ರಾಮ್ ಮನೋಹರ್ ಲೋಹಿಯಾ ಹೆಸರಿಡುವಂತೆ ವಿ.ಸೋಮಣ್ಣಗೆ ಲೋಹಿಯಾ ಸಮತಾ ವಿದ್ಯಾಲಯ ಪತ್ರ

ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣ ಅಥವಾ ಸಾಗರ ರೈಲು ನಿಲ್ದಾಣಕ್ಕೆ ಸಮಾಜವಾದಿ ಚಳುವಳಿಯ ಸ್ಥಾಪಕ ಡಾ.ರಾಮ್ ಮನೋಹರ್ ಲೋಹಿಯಾ ರೈಲು ನಿಲ್ದಾಣ ಎಂದು ಹೆಸರಿಡಬೇಕೆಂದು ಡಾ.ರಾಮ್ ಮನೋಹರ ಲೋಹಿಯಾ ಸಮತಾ ವಿದ್ಯಾಲಯ ರೈಲ್ವೇ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಲೋಹಿಯಾ ಸಮತಾ ವಿದ್ಯಾಲಯದ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ. ರವಿವರ್ಮ ಕುಮಾರ್ ಈ ಕುರಿತು ರೈಲ್ವೇ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಡಾ.ರಾಮ್ ಮನೋಹರ್ ಲೋಹಿಯಾ ಅವರು ಭಾರತದಲ್ಲಿ ಸಮಾಜವಾದಿ ಚಳವಳಿಯ ಸ್ಥಾಪಕರು, ಅವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಗಾಂಧೀಜಿಯವರಿಗೆ ಆಪ್ತರಾಗಿದ್ದರು. ಭಾರತ ಸ್ವಾತಂತ್ರ್ಯ ಪಡೆದಾಗ ಕೋಮು ಗಲಭೆ ಪೀಡಿತ ದಿಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಂತಿ ನೆಲೆಸುವಂತೆ ಗಾಂಧೀಜಿಯವರ ಜೊತೆ ಅವಿಶ್ರಾಂತವಾಗಿ ಕೆಲಸ ಮಾಡಿದ್ದರು ಎಂದು ಉಲ್ಲೇಖಿಸಿದ್ದಾರೆ.
ಡಾ.ರಾಮ್ ಮನೋಹರ್ ಲೋಹಿಯಾ " ಉಳುವವನೇ ಭೂಮಿಯ ಒಡೆಯ" ಎಂಬ ಪರಿಕಲ್ಪನೆಯ ಮಹಾನ್ ಪ್ರತಿಪಾದಕರಾಗಿದ್ದರು. ಅವರು ಭೂಸುಧಾರಣೆಗೆ ಒತ್ತಾಯಿಸಿ ಪ್ರಾರಂಭಿಸಿದ ಮೊದಲ ಆಂದೋಲನ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರಿಯವಾಗಿ 'ಕಾಗೋಡು ಸತ್ಯಾಗ್ರಹ' ಎಂದು ಕರೆಯಲ್ಪಟ್ಟಿದೆ.
ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿ ಡಾ.ರಾಮ್ ಮನೋಹರ್ ಲೋಹಿಯಾ ಅವರು ಕಾಗೋಡು ಸತ್ಯಾಗ್ರಹದಲ್ಲಿ ಧುಮುಕಿದರು. ಕಾಗೋಡು ಸತ್ಯಾಗ್ರಹ ದೇಶಾದ್ಯಂತ ಭೂ ಸುಧಾರಣೆಗಳನ್ನು ಒತ್ತಾಯಿಸುವ ಆಂದೋಲನಗಳಿಗೆ ನಾಂದಿ ಹಾಡಿತು. ನಿರೀಕ್ಷೆಗೂ ಮೀರಿ, ಕರ್ನಾಟಕ ಭೂ ಸುಧಾರಣಾ ಕಾಯ್ದೆಯು ಇಲ್ಲಿಯವರೆಗೆ ಶೋಷಿತರಾದ ಹದಿನೈದು ಲಕ್ಷ ಜನರಿಗೆ ಭೂ ಮಾಲೀಕತ್ವವನ್ನು ನೀಡಿದೆ.
ಲೋಹಿಯಾ ಅವರನ್ನು 1951 ಜೂನ್ 13ರಂದು ಮಧ್ಯರಾತ್ರಿ ಶಿವಮೊಗ್ಗ ಜಿಲ್ಲೆಯ ಸಾಗರ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಡಾ. ರಾಮ್ ಮನೋಹರ್ ಲೋಹಿಯಾ ಅವರು ಅಂದಿನ ವೆಲ್ಲಿಂಗ್ಡನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಅಕಾಲಿಕ ಮರಣ ಹೊಂದಿದರು, ಈಗ ಇದನ್ನು ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಎಂದು ಕರೆಯಲಾಗುತ್ತದೆ. ಅವರು ದೇಶದ ರಾಜಕೀಯದಲ್ಲಿ ಅಗಾಧ ಬದಲಾವಣೆಯನ್ನು ತಂದಿದ್ದಾರೆ. ಆದ್ದರಿಂದ ಡಾ.ರಾಮ್ ಮನೋಹರ್ ಲೋಹಿಯಾ ಅವರ ಹೆಸರನ್ನು ಕರ್ನಾಟಕದಲ್ಲಿ ಸ್ಮರಿಸುವುದು ಅತ್ಯಂತ ಸೂಕ್ತವಾಗಿದೆ. ಆದ್ದರಿಂದ ಅವರ ಹೆಸರನ್ನು ಶಿವಮೊಗ್ಗ ರೈಲು ನಿಲ್ದಾಣ ಅಥವಾ ಸಾಗರ ರೈಲು ನಿಲ್ದಾಣಕ್ಕೆ ಇಡಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.