ನನಗೆ ಮನವಿ ಮಾಡಿಕೊಳ್ಳುವ ಬದಲು ನಿಮ್ಮ ಅಣ್ಣನಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಹೇಳಿ : ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು

Update: 2024-04-07 19:30 IST
ನನಗೆ ಮನವಿ ಮಾಡಿಕೊಳ್ಳುವ ಬದಲು ನಿಮ್ಮ ಅಣ್ಣನಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಹೇಳಿ : ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು

ಬಿ.ವೈ.ವಿಜಯೇಂದ್ರ / ಕೆ.ಎಸ್.ಈಶ್ವರಪ್ಪ

  • whatsapp icon

ಶಿವಮೊಗ್ಗ: ನಿಮ್ಮನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ಏನಾದರೂ ನೋವಾಗಿದ್ದರೆ ದಯವಿಟ್ಟು ಮರೆತು ಪಕ್ಷಕ್ಕೆ ಸಹಕಾರ ನೀಡಿ ಎಂದ ಬಿ.ವೈ.ವಿಜಯೇಂದ್ರಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, "ನನಗೆ ಮನವಿ ಮಾಡಿಕೊಳ್ಳುವ ಬದಲು ನಿಮ್ಮ ಅಣ್ಣನಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹಿಂದೆ ಸರಿಯಲು ಹೇಳಿ. ನಿಮಗೆ ಧೈರ್ಯವಿದ್ದರೆ ವಾಪಸ್ ತೆಗೆಸಿ ಎಂದು ತಿರುಗೇಟು ನೀಡಿದರು.

ರವಿವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಈಶ್ವರಪ್ಪ ಗೆಲ್ಲಲಿ ಬಿಡು. ನೀನು ಸ್ಪರ್ಧೆ ಮಾಡಬೇಡ ಎಂದು ನಿಮ್ಮಣ್ಣ ರಾಘವೇಂದ್ರಗೆ ಹೇಳು. ನೀನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು" ಎಂದು ಒತ್ತಾಯಿಸಿದರು.

"ನಿಮ್ಮ ಅಣ್ಣ ಸೋಲುತ್ತಾನೆ ಎಂಬ ಭಯವೇ? ಏನು ನೀವೇ ಗೂಟ ಹೊಡ್ಕೊಂಡು ಇರಬೇಕಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ನಾನು ಈಗಲೂ ಬಿಜೆಪಿಯವನು ಆದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು? ಪಕ್ಷದಿಂದ ಉಚ್ಚಾಟನೆ ಮಾಡಬಹುದು ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ. ನಾನೇನು ಪಕ್ಷ ಬಿಟ್ಟು ಹೋಗಿದ್ದೇನೆಯೇ? ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿರಲಿಲ್ಲವೇ?" ಎಂದು ಪ್ರಶ್ನಿಸಿದರು.

"ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತಾಡುತ್ತಾರೆ ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವನು ಯಾರು. ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಇರಬೇಕೇ? ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀನು ಬಿಟ್ಟು‌ಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡ. ಎಲ್ಲರ ನೋವು ಪರಿಹಾರ ಆಗುತ್ತದೆ" ಎಂದು ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿ ಮತ್ತೆ ಪಕ್ಷಕ್ಕೆ ವಾಪಸ್ ಬಂದು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ನಾನು ಹಾಗೆ ಮಾಡಿದ್ದೇನೆಯೇ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News