ಶಾಸಕ ಚನ್ನಬಸಪ್ಪ ವಿರುದ್ಧ ಆಯನೂರು ಮಂಜುನಾಥ್ ಆಕ್ರೋಶ

ಶಿವಮೊಗ್ಗ : ನಾಲಿಗೆ ಮೇಲೆ ಹಿಡಿತವಿರಬೇಕು ಎನ್ನುವ ಶಾಸಕ ಚನ್ನಬಸಪ್ಪನವರೇ, ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಜರಿದ ನಾಲಿಗೆ ಯಾರದ್ದು?.ಸಿದ್ದರಾಮಯ್ಯನವರ ತಲೆ ಕಡಿತೀವಿ ಎನ್ನುವ ಕ್ರೌರ್ಯದ ಪರಾಕಾಷ್ಟೆಯ ಮಾತುಗಳನ್ನಾಡಿದ ನಾಲಿಗೆ ಯಾರದ್ದು? ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ನಾಲಿಗೆ ಮೇಲೆ ಹಿಡಿತವಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಎಚ್ಚರಿಕೆ ಕೊಡುವಷ್ಟು ಶಾಸಕ ಚನ್ನಬಸಪ್ಪ ಅವರು ನಾಗರಿಕರಾಗಿರುವುದು ತಮಗೆ ಸಂತೋಷ ತಂದಿದೆ. ಶಿಷ್ಟಚಾರ ಉಲ್ಲಂಘನೆ ಆಗುತ್ತಿದೆ ಎಂದು ಅವರು ಅಲವತ್ತುಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ ಎಂದು ವ್ಯಂಗ್ಯವಾಡಿದರು.
ಆಶ್ರಯ ಮನೆ ಹಂಚಿಕೆಗೆ ತರಾತುರಿ ಮಾಡುವ ನಿಮ್ಮ ಕಾಳಜಿಯನ್ನು ಸ್ಮಾರ್ಟ್ ಸಿಟಿ ಅವ್ಯವಹಾರದ ಕಡೆ ತೋರಿಸಿ, ನಿಮಗೆ ಧೈರ್ಯವಿದ್ದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವ್ಯವಹಾರದ ಬಗ್ಗೆ ಮಾತನಾಡಿ ಎಂದು ಆಯನೂರು ಸವಾಲು ಹಾಕಿದರು.
ಯಾವಾಗಲೂ ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಮೊದಲು ನೀವು ನೆಟ್ಟಗಿರಿ ಆಮೇಲೆ ಎಲ್ಲವೂ ಸರಿಯಾಗುತ್ತದೆ. ಆವೇಶದಲ್ಲಿ ಅಗೌರವ ಪಡೆದುಕೊಳ್ಳಬೇಡಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಷ್ಟು ನೀವು ದೊಡ್ಡವರಲ್ಲ. ನಿಮ್ಮ ವರಿಷ್ಠರು ಮಾತನಾಡುತ್ತಾರೆ. ಎಲ್ಲರೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದರು.