ಶಿವಮೊಗ್ಗ | ಸರಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ ರಾವ್ ಅಂತ್ಯಕ್ರಿಯೆ

Update: 2025-04-24 17:59 IST
ಶಿವಮೊಗ್ಗ | ಸರಕಾರಿ ಗೌರವದೊಂದಿಗೆ ನೆರವೇರಿದ ಮಂಜುನಾಥ ರಾವ್ ಅಂತ್ಯಕ್ರಿಯೆ
  • whatsapp icon

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ ಮೃತರಾದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರ ಅಂತ್ಯಕ್ರಿಯೆಯನ್ನು ರೋಟರಿ ಚಿತಗಾರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಪುತ್ರ ಅಭಿಜಯ್ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಮಂಜುನಾಥ್ ರಾವ್ ಅವರ ಮೃತದೇಹವನ್ನು ಗುರುವಾರ ಬೆಳಗಿನ ಜಾವ ವಿಮಾನದ ಮೂಲಕ ಬೆಂಗಳೂರಿಗೆ ತರಲಾಯಿತು. ಅಲ್ಲಿನ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಬಳಿಕ ಅಂಬ್ಯುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ತರಲಾಯಿತು. ಅವರ ದೇಹ ಬರುತ್ತಿರುವ ಸುದ್ದಿ ಕೇಳಿದ ಜನರು ರಸ್ತೆಗಳಲ್ಲಿ ನೆರೆದು ಅಂತಿಮ ನಮನ ಸಲ್ಲಿಸಿದರು. ಶಿವಮೊಗ್ಗದ ಬೆಕ್ಕಿನಕಲ್ಮಠದಿಂದ ಬೈಕ್ ರ್‍ಯಾಲಿ ಮೂಲಕ ಪಾರ್ಥಿವ ಶರೀರವನ್ನು ನಗರದ ವಿಜಯನಗರದಲ್ಲಿರುವ ನಿವಾಸಕ್ಕೆ ತರಲಾಯಿತು.

ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಅಮರ್ ರಹೇ ಅಮರ್ ರಹೇ ಮಂಜುನಾಥ್ ಎಂದು ಘೋಷಣೆ ಕೂಗಿದರು.

ಮನೆ ಮುಂಭಾಗ ಮಂಜುನಾಥ ರಾವ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಆರುಣ್, ಡಾ.ಧನಂಜಯ ಸರ್ಜಿ, ಬಲ್ಕೀಶ್ ಭಾನು, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು.

ನಾನು ತಿರುಗಿ ನೋಡುವುದರೊಳಗೆ ನನ್ನ ಗಂಡನ ಹಣೆಗೆ ಹೊಡೆದಿದ್ದರು: ಪಲ್ಲವಿ

ಮೂರು ದಿನಗಳ ಕಾಲ ಪ್ರವಾಸ ಚೆನ್ನಾಗಿತ್ತು. ಮಗನಿಗೆ ಸ್ನಾಕ್ಸ್ ತೆಗೆದುಕೊಳ್ಳಲು ಹೋಟೆಲ್ ಬಳಿ ಇಳಿದೆವು. ಅವರು ಆರ್ಡರ್‌ ಮಾಡುತ್ತಿದ್ದರು. ನಾನು ಮಗನನ್ನು ಕರೆದುಕೊಂಡು ಬರಲು ಹೋದಾಗ ಜೋರಾಗಿ ಗುಂಡಿನ ಸದ್ದು ಕೇಳಿತು .ನಾನು ಇಬ್ಬರು ಉಗ್ರರನ್ನು ನೋಡಿದೆ. ನಾನು ತಿರುಗಿ ನೋಡುವುದರೊಳಗೆ ನನ್ನ ಗಂಡನ ಹಣೆಗೆ ಹೊಡೆದಿದ್ದರು ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಹೇಳಿದರು.

ಗಂಡಸರನ್ನು ಟಾರ್ಗೆಟ್ ಮಾಡಿ ಹಣೆಗೆ ಹೊಡೆದಿದ್ದಾರೆ. ಘಟನೆ ನಡೆದ ವೇಳೆ ಸೆಕ್ಯೂರಿಟಿ ಇರಲಿಲ್ಲ. ಇತಂಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದ ಅವರು, ಘಟನಾ ನಡೆದ ಸ್ಥಳ ಸುಲಭದ ದಾರಿಯಾಗಿರಲಿಲ್ಲ. ಸ್ಥಳೀಯರು ನಮ್ಮ ರಕ್ಷಣೆಗೆ ಬಂದರು. ಒಬ್ಬರು ನನ್ನ ಮಗನನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದರು. ಇನ್ನೊಬ್ಬರು ನನ್ನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು. ನಮ್ಮ ರಕ್ಷಣೆಗೆ ದಾವಿಸಿದವರನ್ನು ಯಾವತ್ತೂ ಮರೆಯಲ್ಲ, ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ಪಲ್ಲವಿ ಹೇಳಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News