ಶಿವಮೊಗ್ಗ | ಅರಣ್ಯ ಇಲಾಖೆಯಿಂದ ರೈತರಿಗೆ ನೋಟಿಸ್‌ ; ಕೆಡಿಪಿ ಸಭೆಯಲ್ಲಿ ಪಕ್ಷಭೇದಮರೆತು ಜನಪ್ರತಿನಿಧಿಗಳಿಂದ ಖಂಡನೆ

Update: 2025-04-29 23:30 IST
ಶಿವಮೊಗ್ಗ | ಅರಣ್ಯ ಇಲಾಖೆಯಿಂದ ರೈತರಿಗೆ ನೋಟಿಸ್‌ ; ಕೆಡಿಪಿ ಸಭೆಯಲ್ಲಿ ಪಕ್ಷಭೇದಮರೆತು ಜನಪ್ರತಿನಿಧಿಗಳಿಂದ ಖಂಡನೆ
  • whatsapp icon

ಶಿವಮೊಗ್ಗ : ಸರಕಾರದ ಆದೇಶದ ಹೊರತಾಗಿಯೂ ಅರಣ್ಯ ಇಲಾಖೆಯವರು ಜಿಲ್ಲೆಯಲ್ಲಿ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ಪಕ್ಷಭೇದ ಮರೆತು ಜನಪ್ರತಿನಿಧಿಗಳು ಖಂಡಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.

ಶಾಸಕಿ ಶಾರದಾ ಪೂರ್ಯ ನಾಯ್ಕ್‌ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಒತ್ತುವರಿ ತೆರವುಗೊಳಿಸದಂತೆ, ಯಾವುದೇ ರೈತರಿಗೂ ನೋಟಿಸ್ ನೀಡದಂತೆ ಹಿಂದಿನ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಿರ್ಣಯವನ್ನು ಮೀರಿ ರೈತರಿಗೆ ನೋಟಿಸ್ ನೀಡಲಾಗಿದೆ. ಹಾಗಾದರೆ ಕೆಡಿಪಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆ ಇಲ್ಲವಾ, ಸಚಿವರು ಮತ್ತು ಸರಕಾರದ ಆದೇಶಕ್ಕೆ ಬೆಲೆ ಇಲ್ಲವಾ ಎಂದು ಪ್ರಶ್ನಿಸಿದರು.

ಡಿಸಿಎಫ್ ಶಿವಶಂಕ‌ರ್ ಪ್ರತಿಕ್ರಿಯಿಸಿ, ಸರಕಾರ ಹಾಗೂ ಸಚಿವರ ಸೂಚನೆ ಅನ್ವಯ ಹೊಸದಾಗಿ ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ, ನ್ಯಾಯಾಲಯದಿಂದ ಆದೇಶವಾದ ಪ್ರಕರಣಗಳಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ಸಮಜಾಯಿಸಿ ನೀಡಿದರು.

ಇದಕ್ಕೆ ಕೆರಳಿದ ಶಾಸಕಿ ಶಾರದಾ ಪೂರ್ಯ ನಾಯ್ಕ್‌, ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ 2 ಸಾವಿರ ಜನ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. 60-70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ಭೂಮಿ ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. ಸರಕಾರದ ಆದೇಶ ಹಾಗೂ ಕೆಡಿಪಿ ಸಭೆ ನಿರ್ಣಯ ಉಲ್ಲಂಘಿಸಿ ನೋಟಿಸ್ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ನ್ಯಾಯಾಲಯದಲ್ಲಿ ಆದೇಶವಾದ ಪ್ರಕರಣಗಳನ್ನು ತೆರವುಗೊಳಿಸುವುದು ಅನಿವಾರ್ಯ. ಆದರೆ ಸಚಿವರು ಹಾಗೂ ಸರಕಾರದ ಆದೇಶ ಉಲ್ಲಂಘಿಸಿ ಹೊಸದಾಗಿ ಜಮೀನು ತೆರವುಗೊಳಿಸುವಂತೆ ರೈತರಿಗೆ ನೋಟಿಸ್ ನೀಡಿದ್ದರೆ ಅಂತಹ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಶರಾವತಿ ಮತ್ತು ಬಗರ್ ಹುಕುಂ ರೈತರ ಸಮಸ್ಯೆ ಬಗೆಹರಿಸುವ ಕುರಿತು ಬೆಂಗಳೂರಿನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಶಾಸಕ ಚನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ದೇವಾಲಯಗಳ ಸರ್ವೇ ನಡೆಯುತ್ತಿದೆ. ಆದರೆ ಅದೇ ವೇಗದಲ್ಲಿ ವಕ್ಫ್‌ ಆಸ್ತಿ ಬಗ್ಗೆ ಸರ್ವೇ ನಡೆಯುತ್ತಿಲ್ಲ. ದೇವಸ್ಥಾನವನ್ನೇ ಗುರಿಯಾಗಿರಿಸಿರುವುದು ಯಾಕೆ? ತಾರತಮ್ಯ ಯಾಕೆ? ದೇವಾಲಯಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಹಣ ಬಿಡುಗಡೆ ಆಗುತ್ತಿಲ್ಲ. ಬೇರೆ ಸಮುದಾಯದ ಮಂದಿರಗಳಿಗೆ ಆಗುತ್ತಿದೆ. ವಿಶೇಷ ಪ್ರಯತ್ನವು ಸಾಗುತ್ತಿದೆ. ಇದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ರಾಜ್ಯ ಸರಕಾರದ ಮುಜರಾಯಿ ಇಲಾಖೆ ನಿರ್ದೇಶನಗಳ ಮೇರೆಗೆ ಎಲ್ಲ ದೇವಾಲಯಗಳ ಸರ್ವೇ ಮಾಡಿ ವರದಿ ನೀಡಬೇಕಿದ್ದು, ಶೇ.70ರಷ್ಟು ಕಾರ್ಯ ಮುಗಿದಿದೆ. ತಾರತಮ್ಯದ ಪ್ರಶ್ನೆ ಬರುವುದಿಲ್ಲ. ಸರಕಾರಿ ಆದೇಶ ಪಾಲಿಸುತ್ತಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಬಲ್ಮೀಸ್ ಬಾನು, ಡಿ.ಎಸ್.ಅರುಣ್, ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಪಂ ಸಿಇಒ ಹೇಮಂತ್, ಎಸ್ಪಿ ಮಿಥುನ್ ಕುಮಾರ್ ಜಿ.ಕೆ., ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News