ʼಅಮಾನತುಗೊಂಡ ಶಾಸಕರು ಕೆಡಿಪಿ ಸಭೆಯಲ್ಲಿ ಭಾಗವಹಿಸಬಹುದೇʼ : ಆಡಳಿತ-ವಿಪಕ್ಷ ಶಾಸಕರ ವಾಕ್ಸಮರ

ಶಿವಮೊಗ್ಗ: ವಿಧಾನ ಸಭೆಯಲ್ಲಿ ಅಮಾನತುಗೊಂಡ ಶಾಸಕರು ಕೆಡಿಪಿ ಸಭೆಯಲ್ಲಿ ಭಾಗವಹಿಸಬಹುದೇ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಎತ್ತಿದ ಪ್ರಶ್ನೆ ವಿವಾದಕ್ಕೆ ಕಾರಣವಾಯಿತು. ಇದರಿಂದ ಸಭೆ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.
ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಅವರು, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚೆನ್ನಬಸಪ್ಪ ಅವರು ವಿಧಾನ ಸಭೆ ಕಲಾಪದ ವೇಳೆ ಅಮಾನತುಗೊಂಡಿದ್ದಾರೆ. ಇವರು ಕೆಡಿಪಿ ಸಭೆಯಲ್ಲಿ ಭಾಗವಹಿಸಬಹುದೇ ಎಂದು ಅಧ್ಯಕ್ಷರನ್ನು ಕೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಎತ್ತಿದ ಪ್ರಶ್ನೆ ಶಾಸಕ ಚೆನ್ನಬಸಪ್ಪ ಅವರನ್ನು ಕೆರಳಿಸಿತು. ಇದರಿಂದ ಕುಪಿತರಾದ ಚನ್ನಬಸಪ್ಪ ನನಗೆ ಮೀಟಿಂಗ್ ನೋಟಿಸ್ ಕಳಿಸಿರುವ ಕಾರಣಕ್ಕೆ ಸಭೆಗೆ ಬಂದಿದ್ದೇನೆ. ಇದನ್ನು ಪ್ರಶ್ನಿಸಲು ನೀವ್ಯಾರು ಎಂದು ವಾಗ್ವಾದ ನಡೆಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಧ್ಯ ಪ್ರವೇಶಿಸಿ, ಮಹಿಳೆಯರ ಬಗ್ಗೆ ಅಗೌರವ ಸಲ್ಲದು. ಏಕ ವಚನ ಬಳಸುವುದು ಸರಿಯಲ್ಲ, ನೀವು ಅಮಾನತು ಆಗಿದ್ದಕ್ಕೆ ಕೇಳಿದ್ದಾರೆ ಎಂದು ತಿಳಿಸಿದರು.
ನನಗೆ ಅಪಮಾನವಾಗಿದೆ ಎಂದು ಶಾಸಕ ಚನ್ನಬಸಪ್ಪ ಸಭೆಯನ್ನು ಬಹಿಷ್ಕರಿಸಿ ಹೊರಡಲು ಮುಂದಾದರು. ಈ ವೇಳೆ ಸಚಿವ ಮಧು ಬಂಗಾರಪ್ಪ ಮಧ್ಯ ಪ್ರವೇಶಿಸಿ ಸಮಾಧಾನಿಸಲು ಪ್ರಯತ್ನಿಸಿದರು. ಈ ಹಂತದಲ್ಲಿ ಮತ್ತೆ ಸಚಿವ ಮಧು ಬಂಗಾರಪ್ಪ-ಶಾಸಕ ಚನ್ನಬಸಪ್ಪ ನಡುವೆ ವಾಗ್ವಾದ ನಡೆಯಿತು.