ಶಿವಮೊಗ್ಗ: 9 ಗಂಟೆ ವೇಳೆ ಶೇ.11.45ರಷ್ಟು ಮತದಾನ
ಶಿವಮೊಗ್ಗ, ಮೇ 7: ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬಿಸಿಲು ಝಳಕ್ಕೆ ಬೆದರಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ ಉತ್ಸಾಹದಿಂದ ಧಾವಿಸಿ ಮತ ಚಲಾಯಿಸುತ್ತಿದ್ದಾರೆ.
ಹತ್ತು ಗಂಟೆಯ ನಂತರ ಬಿಸಿಲು ನೆತ್ತಿ ಸುಡುವ ಕಾರಣಕ್ಕೆ ಮತದಾರರು ಬೆಳಗ್ಗೆಯೇ ಮತಗಟ್ಟೆಯಲ್ಲಿ ಕಾಣಿಸಿಕೊಂಡ ಪರಿಣಾಮ ಮತ ಕೇಂದ್ರಗಳು ರಶ್ ಆಗಿವೆ ಹಾಗೂ ಉತ್ಸಾಹ ಕಂಡುಬಂದಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬೆಳಗ್ಗೆ 9 ಗಂಟೆ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.11.45ರಷ್ಟು ಮತದಾನವಾಗಿದೆ. ಇಲ್ಲಿ ಒಟ್ಟು 17,52,885 ಮತದಾರರಿದ್ದು, 9 ಗಂಟೆ ವೇಳೆ 2,00,745 ಮತಗಳು ಚಲಾವಣೆ ಆಗಿದೆ.
ಬೈಂದೂರು 13.66 ಶೇ., ಸಾಗರ 12.66 ಶೇ., ಶಿವಮೊಗ್ಗ 11.60 ಶೇ., ಸೊರಬ 9.76 ಶೇ., ತೀರ್ಥಹಳ್ಳಿ 11.87 ಶೇ., ಭದ್ರಾವತಿ 10.37 ಶೇ., ಶಿಕಾರಿಪುರ 9.28 ಶೇ. ಮತದಾನವಾಗಿದೆ.
ಗಣ್ಯರ ಮತದಾನ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಶಿಕಾರಿಪುರದಲ್ಲಿ ಮತ ಚಲಾಯಿಸಿದ್ದಾರೆ. ಸಚಿವ ಮಧು ಬಂಗಾರಪ್ಪನವರು ಕುಬಟೂರು ಸರ್ಕಾರಿ ಶಾಲೆಯ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು.
ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸೈನ್ಸ್ ಮೈದಾನದ ಸರ್ಕಾರಿ ಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದ್ದಾರೆ.