ಶಿವಮೊಗ್ಗ| ʼಅಲ್ಲಾಹು ಅಕ್ಬರ್ʼ ಘೋಷಣೆ ಕೂಗಿದ ಮಹಿಳೆ ಮಾನಸಿಕ ಅಸ್ವಸ್ಥೆ: ಎಸ್.ಪಿ ಸ್ಪಷ್ಟನೆ
ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸಿಹಿ ಹಂಚಿಕೆ, ಸಂಭ್ರಮಾಚರಣೆ ವೇಳೆ ಮಹಿಳೆಯೊಬ್ಬರು ʼಅಲ್ಲಾಹು ಅಕ್ಬರ್ʼ ಎಂದು ಘೋಷಣೆ ಕೂಗಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ತಕ್ಷಣ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕ ಹಾಗೂ ವಿವಿಧ ಸಂಘಟನೆಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಸಂಭ್ರಮಾಚರಣೆ ನಡೆಯಿತು.
ಸಂಭ್ರಮಾಚರಣೆ ವೇಳೆ ಶಿವಪ್ಪ ನಾಯಕ ವೃತ್ತದ ಮೂಲಕ ಸ್ಕೂಟರ್ ನಲ್ಲಿ ಮಗುವಿನೊಂದಿಗೆ ಹೊರಟಿದ್ದ ಮಹಿಳೆ ಸಂಭ್ರಮಾಚರಣೆ ಕಾರ್ಯಕ್ರಮ ನೋಡುತ್ತಾ ವಿಡಿಯೋ ಮಾಡಿಕೊಂಡು ನಿಂತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಂಚಾರ ದಟ್ಟಣೆ ತಪ್ಪಿಸಲು ಅವರನ್ನು ಅಲ್ಲಿಂದ ಕಳಿಸಲು ಮುಂದಾದರು. ಆಗ ಮಹಿಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಪ್ರತಿಭಟಿಸಿದ್ದರು ಎನ್ನಲಾಗಿದೆ.
ಇದೇ ವೇಳೆ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಆಗ ಮಹಿಳೆಯೂ ಪ್ರತಿಯಾಗಿ ʼಅಲ್ಲಾಹು ಅಕ್ಬರ್ʼ ಎಂದು ಘೋಷಣೆ ಕೂಗಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು ಎನ್ನಲಾಗಿದೆ,
ತಕ್ಷಣ ಪೊಲೀಸರು ಅಲ್ಲಿಂದ ಕಳುಹಿಸಲು ಮುಂದಾದರೂ ಮಹಿಳೆ ಘೋಷಣೆ ಕೂಗುವುದು ಮುಂದುವರೆಸಿದರು. ಅದಕ್ಕೆ ಪ್ರತಿಯಾಗಿ ಗುಂಪು ಕೂಡ ಜೈಶ್ರೀರಾಮ್ ಘೋಷಣೆ ಕೂಗತೊಡಗಿ ಮಹಿಳೆಯ ಹಿಂದೆ ತೆರಳಿದರು. ನಂತರ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಠಾಣೆಗೆ ಕರೆದೊಯ್ದರು.
ಎಸ್.ಪಿ ಸ್ಪಷ್ಟನೆ:
ಶಿವಪ್ಪ ನಾಯಕ ವೃತ್ತದಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂಭ್ರಮಾಚರಣೆ ವೇಳೆ ʼಅಲ್ಲಾಹು ಅಕ್ಬರ್ʼ ಘೋಷಣೆ ಕೂಗಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ ಎಂದು ಎಸ್.ಪಿ ಮಿಥುನ್‌ಕುಮಾರ್ ಜಿ.ಕೆ ಪ್ರತಿಕ್ರಿಯಿಸಿದರು.
ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯ ಹಿನ್ನೆಲೆ, ಪೂರ್ವಾಪರ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮಾನಸಿಕ ರೋಗಕ್ಕೆ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಹಿಳೆ ತಂದೆಯಿದ ಪೊಲೀಸರಿಗೆ ದಾಖಲೆಗಳ ಸಲ್ಲಿಕೆ ಮಾಡಲಾಗಿದ್ದು, 2018 ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಮಗಳು ಮಾನಸಿಕ ಅಸ್ವಸ್ಥೆ
ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಮಹಿಳೆಯ ತಂದೆ, “ನನ್ನ ಮಗಳು ಮೊದಲಿನಿಂದಲೂ ಸ್ವಲ್ಪ ಮಾನಸಿಕ ಅಸ್ವಸ್ಥಳಿದ್ದಾಳೆ. ಈ ಸಂಬಂಧ ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕಳೆದ 10 ತಿಂಗಳಿನಿಂದ ಗಂಡನ ಮನೆ ಬಿಟ್ಟು ನನ್ನ ಮನೆಯಲ್ಲಿಯೇ ಇದ್ದಾಳೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಘಟನೆ ಕೇಳಿ ನನಗೂ ನೋವಾಗಿದೆ. ಅವಳು ಆ ತರಹದ ಹುಡುಗಿ ಅಲ್ಲ. ಅವಳು ಜಾತಿ ಭೇದ ಮಾಡಲ್ಲ. ಎಲ್ಲರನ್ನೂ ಒಂದೇ ತರ ನೋಡುತ್ತಾಳೆ. ಉದ್ದೇಶ ಪೂರಕವಾಗಿ ಅವಳು ಘೋಷಣೆ ಕೂಗಿಲ್ಲ” ಎಂದರು.