ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ, ಉಗ್ರರು ʼಮೋದಿಗೆ ಹೋಗಿ ಹೇಳಿʼ ಎಂದಿದ್ದು ಸತ್ಯ: ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಪತ್ನಿ ಪಲ್ಲವಿ

Photo credit: newindianexpress.com
ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನನ್ನ ಪತಿಯನ್ನು ಕೊಂದಾಗ, ನಮ್ಮನ್ನೂ ಸಾಯಿಸಿ ಎಂದು ನಾನು ಮತ್ತು ನನ್ನ ಮಗ ಭಯೋತ್ಪಾದಕರಿಗೆ ಹೇಳಿದ್ದು ಹೌದು. ಆಗ ಆ ಭಯೋತ್ಪಾದಕರು "ಮೋದಿಗೆ ಹೋಗಿ ಹೇಳಿ" ಎಂದಿದ್ದೂ ಹೌದು. ಆದರೆ, ನಾನು ಈ ಮಾತುಗಳನ್ನು ಹೇಳಿದ್ದಕ್ಕೆ ಅನೇಕ ಕೆಟ್ಟ ಕಾಮೆಂಟ್ ಬರುತ್ತಿದೆ. ನಾನು ಈ ಮಾತುಗಳನ್ನೆಲ್ಲಾ ವಿಡಿಯೋ ಮಾಡಿಟ್ಟುಕೊಳ್ಳಬೇಕಿತ್ತೇನು? ಎಂದು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಸನ್ನಿವೇಶದಲ್ಲಿ ನಡೆಯುವ ಘಟನೆಗಳನ್ನು ಯಾರಾದರೂ ವಿಡಿಯೋ ಮಾಡಿ ಇಟ್ಟುಕೊಳ್ಳಲು ಸಾಧ್ಯವೇ?. ಇಂತಹ ನೆಗೆಟಿವ್ ಕಾಮೆಂಟ್ ಗಳಿಂದ ನನಗೆ ತೀರಾ ಬೇಸರವಾಗುತ್ತಿದೆ. ಆದರೆ, ಇಂತಹ ಕಾಮೆಂಟ್ ಗಳಿಗೆ ನಾವು ಏನು ಮಾಡಲು ಸಾಧ್ಯ ಎಂದು ಮರು ಪ್ರಶ್ನಿಸಿದರು.
ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ. ಬಹುಶಃ ನನ್ನ ಪತಿಗೆ ದೂರದಿಂದಲೇ ಗುಂಡು ಹಾರಿಸಿದ್ದರಿಂದ ಈ ಮಾತನ್ನು ಕೇಳಿಲ್ಲ ಎಂದೆನಿಸುತ್ತದೆ. ಆದರೆ, ಉಳಿದವರಿಗೆ ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದು ಅಲ್ಲಿದ್ದ ಅನೇಕರು ಹೇಳಿದ್ದು ನಿಜ ಎಂದು ಪಲ್ಲವಿ ತಿಳಿಸಿದರು.
ದಾಳಿ ನಡೆದ ದಿನ ಮಧ್ಯಾಹ್ನ 12.30ಕ್ಕೆ ನಾವು ಪಹಲ್ಗಾಮ್ ತಲುಪಿದ್ದೇವು. ಗುಡ್ಡದ ಮೇಲ್ಬಾಗಕ್ಕೆ ತಲುಪುವಷ್ಟರಲ್ಲಿ ಮಧ್ಯಾಹ್ನ 1.30 ಆಗಿತ್ತು. ನಾವು ಕುದುರೆಯಿಂದ ಇಳಿದ 5 ನಿಮಿಷದಲ್ಲಿ ಈ ದಾಳಿ ನಡೆಯಿತು. ಸ್ವಲ್ಪ ದೂರದಿಂದಲೇ ನನ್ನ ಪತಿ ಮೇಲೆ ನೇರವಾಗಿ ಗುಂಡು ಹಾರಿಸಿದರು. ಒಂದೇ ಹೊಡೆತಕ್ಕೆ ನನ್ನ ಪತಿ ಮೃತಪಟ್ಟು ಕೆಳಗೆ ಬಿದ್ದರು. ಇವರ ಹತ್ತಿರವೇ ಇದ್ದ ಲೆಫ್ಟಿನೆಂಟ್ ಅವರ ಮೇಲೂ ಗುಂಡು ಹಾರಿಸಿದರು. ಅವರು ಕೆಳಗೆ ಬಿದ್ದಾಗ ಅವರ ಪತ್ನಿ ಸ್ವಲ್ಪ ಉಸಿರಿದೆ, ಸಹಾಯ ಮಾಡಿ, ಕುದುರೆಯ ಸಹಾಯದಿಂದ ಕೆಳಗೆ ಕರೆದುಕೊಂಡು ಹೋಗೋಣ ಎಂದು ಕೇಳಿಕೊಳ್ಳುತ್ತಿದ್ದರು.
ನಾನು ಅವರ ಕಡೆ ಹೋದೆ. ಆಗ ಅವರಿಗೆ ಸ್ವಲ್ಪ ಉಸಿರಿತ್ತು. ಆದರೆ, ಆಗಿನ ಸ್ಥಿತಿಯಲ್ಲಿ ಅವರನ್ನು ಕುದುರೆ ಮೇಲೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇರಲಿಲ್ಲ. ಐದೇ ನಿಮಿಷದಲ್ಲಿ ಅವರ ಜೀವ ಹೋಯಿತು. ಲೆಫ್ಟಿನೆಂಟ್ ಅವರ ಪತ್ನಿ ಚಿಕ್ಕ ವಯಸ್ಸಿನವಳಾಗಿದ್ದು, ಈ ಸಾವನ್ನು ಸ್ವೀಕರಿಸುವ ಮನಃಸ್ಥಿತಿಯಲ್ಲಿ ಅವರಲ್ಲಿ ಇರಲಿಲ್ಲ. ಹೀಗಾಗಿ ನಾನು ಏನೂ ಹೇಳಲಿಲ್ಲ ಎಂದು ಪಲ್ಲವಿ ತಿಳಿಸಿದರು.
ಈ ಬಗ್ಗೆ ಜಾಸ್ತಿ ಏನನ್ನೂ ಕೇಳಬೇಡಿ. ನನಗೆ ಇದನ್ನು ವಿವರಿಸಿ ಹೇಳಲು ಮನಸ್ಸು ಇಲ್ಲ, ದಯವಿಟ್ಟು ನಮ್ಮನ್ನು ಅರ್ಥಮಾಡಿಕೊಳ್ಳಿ ಎಂದು ಮಂಜುನಾಥ್ ರಾವ್ ಪತ್ನಿ ಪಲ್ಲವಿ ಮನವಿ ಮಾಡಿದರು.