ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿ ರಾಷ್ಟ್ರೀಯ ಸೇವಾ ಯೋಜನೆ
- ಡಾ. ಮುರಲೀ ಮೋಹನ್ ಚೂಂತಾರು
ರಾಷ್ಟ್ರೀಯ ಸೇವಾಯೋಜನೆ, ಸಂಯೋಜನಾಧಿಕಾರಿಗಳು, ನಿಟ್ಟೆ ವಿಶ್ವವಿದ್ಯಾನಿಲಯ
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಸಮಾಜ ಸೇವೆಯನ್ನೇ ಕಾಯಕವಾಗಿ ಮಾಡಿಕೊಂಡು ಅದನ್ನು ಧರ್ಮದಂತೆ ಆಚರಿಸುತ್ತಿದ್ದರು. ಅವರ ಗೌರವಾರ್ಥವಾಗಿ ‘ರಾಷ್ಟ್ರೀಯ ಸೇವಾ ಯೋಜನೆ’(ಎನ್ಎಸ್ಎಸ್)ಯನ್ನು ಅವರ ಜನ್ಮ ಶತಮಾನೋತ್ಸವದ ವರ್ಷವಾದ 1969ರ ಸೆಪ್ಟಂಬರ್ 24ರಂದು, ದೇಶಾದ್ಯಂತ ವಿವಿಧ ರಾಜ್ಯಗಳ 37 ವಿಶ್ವವಿದ್ಯಾನಿಲಯಗಳಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತೀ ವರ್ಷ ಸೆಪ್ಟಂಬರ್ 24ನ್ನು ‘ಎನ್ಎಸ್ಎಸ್ ದಿನ’ ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ.
ಎನ್ಎಸ್ಎಸ್ ನ ಬಹಳ ಪ್ರಮುಖವಾದ ಧ್ಯೇಯವೆಂದರೆ ಕಲಿಕೆಯ ಜೊತೆಗೆ ಸಮಾಜ ಸೇವೆಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಉಂಟಾಗುವಂತೆ ಮಾಡುವುದು. ಇದು ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳೇ ನಡೆಸುವ ಒಂದು ಕಾರ್ಯಕ್ರಮ ಆಗಿರುತ್ತದೆ. ಅಧ್ಯಾಪಕರು ಮತ್ತು ಶಿಕ್ಷಕರು ಕೇವಲ ನಿಮಿತ್ತ ಮಾತ್ರವಾಗಿದ್ದು ವಿದ್ಯಾರ್ಥಿಗಳಿಗೆ ಯೋಜನೆ ಅನುಷ್ಠಾನದ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಧ್ಯೇಯವೆಂದರೆ, ಮಕ್ಕಳು ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವುದರ ಜೊತೆಗೆ, ಸಮುದಾಯದ ಜನರೊಂದಿಗೆ ಬೆರೆತು, ಅವರ ನೋವು ನಲಿವು, ಸುಖ ದುಃಖ, ಕಷ್ಟ ಕಾರ್ಪಣ್ಯಗಳಲ್ಲಿ ಪಾಲ್ಗೊಳ್ಳುವುದಾಗಿದೆ.
ಆ ಮೂಲಕ ಸಮಾಜದ, ದೇಶದ ಮತ್ತು ವೈಯಕ್ತಿಕ ಬೆಳೆವಣಿಗೆಯನ್ನು ಪೂರೈಸಿಕೊಳ್ಳುವುದಾಗಿದೆ. ಪ್ರಾರಂಭದ ದಿನಗಳಲ್ಲಿ ಕೇವಲ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಎನ್ಎಸ್ಎಸ್, ಕ್ರಮೇಣ ವೈದ್ಯಕೀಯ, ತಾಂತ್ರಿಕ, ಪಾಲಿಟೆಕ್ನಿಕ್, ನರ್ಸಿಂಗ್, ಫಾರ್ಮಸಿ, ಪಿಸಿಯೋಥೆರಪಿ, ಬಿ.ಎಡ್., ಡಿ.ಎಡ್. ಮತ್ತು ಪದವಿ ಪೂರ್ವ ತರಗತಿಗಳಿಗೂ ವಿಸ್ತಾರಗೊಂಡಿದೆ. ಇಂದು ನಮ್ಮ ದೇಶಗಳಲ್ಲಿ ಎನ್ಎಸ್ಎಸ್ ಬಹಳ ವಿಸ್ತಾರವಾಗಿ ಬೆಳೆದು, ರಾಷ್ಟ್ರದ ಅತೀ ದೊಡ್ಡ ಯುವ ಸಂಘಟನೆಯಾಗಿ ಹೊರಹೊಮ್ಮಿದೆ. ಇಂದು ನಮ್ಮ ದೇಶಾದ್ಯಂತ ಸುಮಾರು 35 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರು, 35,000ಕ್ಕೂ ಮಿಕ್ಕಿ ಯೋಜನಾಧಿಕಾರಿಗಳು ತುಂಬಾ ಪರಿಣಾಮಕಾರಿಯಾಗಿ ಎನ್ಎಸ್ಎಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಎನ್ಎಸ್ಎಸ್ ನಲ್ಲಿ ಕಲಿಕೆ
ಎನ್ಎಸ್ಎಸ್ ಆರಂಭದ ದಿನಗಳಲ್ಲಿ ಸಾಕ್ಷರತೆ, ಗಿಡನೆಡುವುದು, ಶಾಲಾ ಆಟದ ಮೈದಾನ ವಿಸ್ತರಿಸುವುದು, ರಸ್ತೆ ರಿಪೇರಿ, ಶ್ರಮದಾನ ಇತ್ಯಾದಿ ಕೆಲಸಗಳಿಗೆ ಆದ್ಯತೆ ನೀಡಲಾಗಿತ್ತು. ಈಗಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದೃಷ್ಟಿಕೋನ ಬದಲಾಗಿದ್ದು, ಈ ಸಾಂಪ್ರದಾಯಿಕ ಕೆಲಸದೊಂದಿಗೆ ವ್ಯಕ್ತಿತ್ವ ವಿಕಸನ, ಸಮುದಾಯ ಚಟುವಟಿಕೆ ಮತ್ತು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ವೃದ್ಧಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದೇ ಕಾರಣಕ್ಕಾಗಿಯೇ ರಾಷ್ಟ್ರೀಯ ಸೇವಾ ಯೋಜನೆ ಕೇವಲ ಮಣ್ಣು ಹೊರುವುದಕ್ಕೆ ಸೀಮಿತವಾಗಿರದೆ ಬದಲಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಈಗಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ವಿದ್ಯಾರ್ಥಿಗಳ ಯೋಜನಾ ಕುಶಲತೆ, ತಾಂತ್ರಿಕ ಕುಶಲತೆ, ಸಂವಹನ ಕುಶಲತೆ, ಮುಂದಾಳತ್ವ ಕುಶಲತೆ, ವೌಲ್ಯಮಾಪನ ಕುಶಲತೆ, ಆತ್ಮ ವಿಶ್ವಾಸ ಮತ್ತು ಮಾನವೀಯ ಸಂಬಂಧಗಳ ಕುಶಲತೆಯನ್ನು ಸಿದ್ಧಿಸಲು ಮತ್ತು ವೃದ್ಧಿಸಲು ಅನುಕೂಲಕರವಾದ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ರಾಷ್ಟ್ರ ಭಕ್ತಿಯನ್ನು ಮೂಡಿಸಲು ಪೂರಕವಾದ ರಾಷ್ಟ್ರೀಯ ಭಾವೈಕ್ಯತೆ ಶಿಬಿರ, ಸಹಬಾಳ್ವೆ ಸಹೋದರತ್ವವನ್ನು ಸಕಾರಗೊಳಿಸಲು, ವಿಶೇಷ ತರಬೇತಿ ಶಿಬಿರಗಳು, ರಕ್ತದಾನ ಶಿಬಿರಗಳು ಮುಂತಾದವುಗಳನ್ನು ಆಯೋಜಿಸಲಾಗುತ್ತದೆ.
ಬೇರೆ ಬೇರೆ ಜಾತಿ, ಧರ್ಮದ ಊರಿನ ಸಂಸ್ಕೃತಿಯ ಮಕ್ಕಳು ಜೊತೆಗೂಡಿ ವಿಶೇಷ ಶಿಬಿರಗಳಲ್ಲಿ ಹಂಚಿಕೊಂಡು ಜೊತೆಯಲ್ಲಿ ದುಡಿದು ಬೇಯಿಸಿ ತಿನ್ನುವುದರಿಂದ ವಿದ್ಯಾರ್ಥಿಗಳಲ್ಲಿ ಸಹಬಾಳ್ವೆ, ಸಹೋದರತ್ವ ಮತ್ತು ಮಾನವೀಯ ಸಂಬಂಧಗಳು ಬೆಸೆಯುತ್ತದೆ ಮತ್ತು ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ.