2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ
ಹೊಸದಿಲ್ಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ತಂಡಗಳು ಆತಿಥೇಯ ಪಾಕಿಸ್ತಾನದ ಜೊತೆಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಲು ಅವಕಾಶ ಪಡೆದುಕೊಳ್ಳಲಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅರ್ಹತೆಯ ಮಾನದಂಡವನ್ನು ಐಸಿಸಿ 2021ರಲ್ಲಿ ಬದಲಿಸಿತ್ತು. ಟೂರ್ನಿಯ ಪಂದ್ಯಗಳು ಹಳೆಯ ಮಾದರಿಯಂತೆಯೇ ನಡೆಯಲಿದೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಲೀಗ್ ಪಂದ್ಯಗಳನ್ನು ಆಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿ ಫೈನಲ್ ಪ್ರವೇಶಿಸಲಿವೆ.
ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ 9 ಹಾಗೂ 10ನೇ ಸ್ಥಾನಗಳಲ್ಲಿರುವ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಶ್ವಕಪ್‌ನಲ್ಲಿ ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕು.
7 ಹಾಗೂ 8ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ಹಾಗೂ ನೆದರ್‌ಲ್ಯಾಂಡ್ಸ್ ತಂಡಗಳು ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅದೇ ಸ್ಥಾನವನ್ನು ಉಳಿಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ.