ಈ ಬಾರಿ ಒಲಿಂಪಿಕ್ಸ್ ಪದಕ ವಿಜೇತರಿಗೆ ನಗದು ಬಹುಮಾನಗಳ ಸುಗ್ಗಿ!

Update: 2024-07-20 15:50 GMT

PC : olympics.com

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸವು ಅತ್ಲೀಟ್‌ಗಳಿಗೆ ಭರ್ಜರಿ ಪ್ರತಿಫಲ ಕಾದಿದೆ. ಚಿನ್ನ, ಬೆಳ್ಳಿ ಮತ್ತು ಕಂಚು ಮಾತ್ರವಲ್ಲ, ಈ ಬಾರಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಅತ್ಲೀಟ್‌ಗಳಿಗೆ ಅವರ ನಿರ್ವಹಣೆಯ ಆಧಾರದಲ್ಲಿ ವಿವಿಧ ನಗದು ಪುರಸ್ಕಾರಗಳನ್ನು ವಿವಿಧ ಫೆಡರೇಶನ್‌ಗಳು ಪ್ರಕಟಿಸಿವೆ.

ಸಾಂಪ್ರದಾಯಿಕವಾಗಿ, ಒಲಿಂಪಿಕ್ಸ್ ಗಳು ಸ್ಪರ್ಧಿಗಳಿಗೆ ನಗದು ಪುರಸ್ಕಾರಗಳನ್ನು ನೀಡುವುದಿಲ್ಲ. ಆದರೆ, ಈ ವರ್ಷ ಈ ಪ್ರವೃತ್ತಿ ಬದಲಾಗಿರುವಂತೆ ಕಾಣುತ್ತದೆ. ಈವರೆಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿರುವ ಅತ್ಲೀಟ್‌ಗಳಿಗೆ ಆಯಾಯ ದೇಶಗಳ ಸರಕಾರಗಳು ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಸಾಮಾನ್ಯವಾಗಿ ನಗದು ಪುರಸ್ಕಾರಗಳನ್ನು ಘೋಷಿಸುತ್ತಿದ್ದವು. ಆದರೆ, ಈ ಬಾರಿ ಅಂತರರಾಷ್ಟ್ರೀಯ ಫೆಡರೇಶನ್‌ಗಳೂ ನಗದು ಬಹುಮಾನಗಳನ್ನು ಘೋಷಿಸಿವೆ.

ಈ ಬಾರಿ, ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಚಿನ್ನ ಗೆಲ್ಲುವ ಪ್ರತಿಯೋರ್ವ ಅತ್ಲೀಟ್‌ಗೆ 50,000 ಡಾಲರ್ (ಸುಮಾರು 41.86 ಲಕ್ಷ ರೂಪಾಯಿ) ನಗದು ಪುರಸ್ಕಾರ ನೀಡುವುದಾಗಿ ವರ್ಲ್ಡ್ ಅತ್ಲೆಟಿಕ್ಸ್ ಈಗಾಗಲೇ ಘೋಷಿಸಿದೆ. ಇದನ್ನು ಅನುಸರಿಸಿ, ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ ಕೂಡ ವಿವಿಧ ವಿಭಾಗಗಳಲ್ಲಿ ಚಿನ್ನ ಗೆಲ್ಲುವ ಬಾಕ್ಸರ್‌ಗಳಿಗೆ ತಲಾ ಒಂದು ಲಕ್ಷ ಡಾಲರ್ (ಸುಮಾರು 84 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಘೋಷಿಸಿದೆ.

ಆದರೆ, ಚಿನ್ನ ಗೆಲ್ಲುವ ಅತ್ಲೀಟ್‌ಗಳಿಗೆ ನಗದು ಪುರಸ್ಕಾರ ನೀಡುವ ಕಲ್ಪನೆಯನ್ನು ಕೆಲವು ಫೆಡರೇಶನ್‌ಗಳು ವಿರೋಧಿಸಿವೆ. ನಗದು ಬಹುಮಾನವನ್ನು ನೀಡುವುದು ಒಲಿಂಪಿಕ್ ತತ್ವಕ್ಕೆ ವಿರುದ್ಧವಾಗಿದೆ ಹಾಗೂ ಕೆಲವು ಕ್ರೀಡೆಗಳ ಕ್ರೀಡಾಳುಗಳಿಗೆ ಇತರ ಕ್ರೀಡೆಗಳ ಕ್ರೀಡಾಳುಗಳಿಗಿಂತ ಅನುಚಿತ ಪ್ರಯೋಜನವನ್ನು ಕೊಟ್ಟಂತಾಗುತ್ತದೆ ಎಂದು ಈ ಫೆಡರೇಶನ್‌ಗಳು ಹೇಳುತ್ತವೆ.

ಆದರೆ, ಕ್ರೀಡಾಳುಗಳ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂದು ಇತರ ಕ್ರೀಡಾ ಸಂಸ್ಥೆಗಳು ಭಾವಿಸುತ್ತವೆ.

ಭಾರತ ಸರಕಾರವು ಈವರೆಗೆ ಒಲಿಂಪಿಕ್ ಚಿನ್ನ ವಿಜೇತರಿಗೆ 75 ಲಕ್ಷ ರೂಪಾಯಿ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಪ್ರತ್ಯೇಕವಾಗಿ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News