ಬೆಂಗಳೂರು ಜಾವೆಲಿನ್ ಥ್ರೋ ಕೂಟಕ್ಕೆ ಅರ್ಷದ್ ನದೀಂಗೆ ಆಹ್ವಾನ: ನೀರಜ್ ಚೋಪ್ರಾ

PC: x.com/ShirazHassan
ಬೆಂಗಳೂರು: ಮುಂದಿನ ತಿಂಗಳು ನಗರದಲ್ಲಿ ನಡೆಯುವ ಒಂದು ದಿನದ ಜಾವೆಲಿನ್ ಥ್ರೋ ಕೂಟಕ್ಕೆ ಭಾರತದ ಹೆಮ್ಮೆಯ ಅಥ್ಲೀಟ್, ಒಲಿಂಪಿಕ್ ಹೀರೊ ನೀರಜ್ ಚೋಪ್ರಾ ಸಜ್ಜಾಗಿದ್ದಾರೆ. ಜೆಎಸ್ ಡಬ್ಲ್ಯೂ ಸ್ಪೋರ್ಟ್ಸ್ ಆಯೋಜಿಸಿರುವ ಕೂಟಕ್ಕೆ ವಿಶ್ವದ ಅತ್ಯುತ್ತಮ ಅಥ್ಲೀಟ್ ಗಳನ್ನು ಆಹ್ವಾನಿಸಲಾಗಿದೆ. ಪಾಕಿಸ್ತಾನದ ಅರ್ಷದ್ ನದೀಮ್ ಸೇರಿದಂತೆ ವಿಶ್ವದ ಅತ್ಯುತ್ತಮ ಅಥ್ಲೀಟ್ ಗಳನ್ನು ಆಹ್ವಾನಿಸಿರುವ ಅಂಶವನ್ನು ಸುದ್ದಿಗಾರರೊಂದಿಗೆ ಮಾತನಾಡಿದ ನೀರಜ್ ದೃಢಪಡಿಸಿದ್ದಾರೆ.
ಜಾವೆಲಿನ್ ಜಗತ್ತಿನ ಬದ್ಧ ಪ್ರತಿಸ್ಪರ್ಧಿಗಳಾಗಿರುವ ಈ ಇಬ್ಬರ ಅಥ್ಲೀಟ್ ಗಳು ಒಳ್ಳೆಯ ಸ್ನೇಹಿತರೂ ಆಗಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕೂಟದಲ್ಲಿ ಅರ್ಷದ್ ಪಾಳ್ಗೊಳ್ಳುವುದು ಕೆಲ ಸಂಕೀರ್ಣತೆಗೆ ಕಾರಣವಾಗಲಿದೆ. ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಎಂಬ ಬಗ್ಗೆ ಅರ್ಷದ್ ಇನ್ನೂ ದೃಢಪಡಿಸಿಲ್ಲ. "ಕೋಚ್ ಜತೆ ಚರ್ಚಿಸಿ ದೃಢಪಡಿಸುವುದಾಗಿ ಅವರು ಹೇಳಿದ್ದಾರೆ. ಆದರೆ ಸದ್ಯಕ್ಕೆ ಇನ್ನೂ ದೃಢಪಡಿಸಿಲ್ಲ. ಅಂತಿಮ ಪಟ್ಟಿಯನ್ನು ಸದ್ಯದಲ್ಲೇ ಹಂಚಿಕೊಳ್ಳುತ್ತೇನೆ. ಎಲ್ಲ ಅಗ್ರಗಣ್ಯ ಅಥ್ಲೀಟ್ ಗಳನ್ನು ಆಹ್ವಾನಿಸಲಾಗಿದೆ. ಅವರು ಭಾಗವಹಿಸುವುದಾದರೆ ಸರ್ಕಾರವೂ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದೂ ದೃಢಪಟ್ಟ ಬಳಿಕ ಅಂತಿಮ ಪಟ್ಟಿ ತಿಳಿಯಲಿದೆ" ಎಂದು ಸ್ಪಷ್ಟಪಡಿಸಿದರು.
ಕಳೆದ ಒಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ಗೆದ್ದಿದ್ದ ನೀರಜ್ ಜತೆಗೆ ರೋಹಿತ್ ಯಾದವ್ ಸೇರಿದಂತೆ 3-4 ಭಾರತೀಯ ಅಥ್ಲೀಟ್ ಗಳು ಪಾಲ್ಗೊಳ್ಳುವಿಕೆ ದೃಢಪಡಿಸಿದ್ದಾರೆ. ಎರಡು ಬಾರಿಯ ವಿಶ್ವಚಾಂಪಿಯನ್ ಮತ್ತು ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆಂಡರ್ಸನ್ ಪೀಟರ್ಸ್, ಮಾಜಿ ಒಲಿಂಪಿಕ್ ಚಾಂಪಿಯನ್ ಥಾಮಸ್ ರೋಹ್ಲರ್, ಮಾಜಿ ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ ಪದಕ ವಿಜೇತ ಕರ್ಟಿಸ್ ಥಾಪ್ಸನ್ ಮತ್ತಿತರರು ಈಗಾಗಲೇ ಭಾಗವಹಿಸುವಿಕೆ ದೃಢಪಡಿಸಿದ್ದಾರೆ. ಯೂರೋಪ್ನ ಅಗ್ರಗಣ್ಯ ಅಥ್ಲೀಟ್ ಗಳು ಕೂಡಾ ಒಂದು ದಿನದ ಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಹರ್ಯಾಣದ ಪಂಚ ಕುಲದಲ್ಲಿ ನಡೆಸಲು ಉದ್ದೇಶಿಸಿದ್ದ ಕೂಟವನ್ನು ಬೆಂಗಳೂರಿಗೆ ಸ್ಥಳಾಂತರಿಸಿರುವುದು ಈ ಭಾಗದ ಅಥ್ಲೆಟಿಕ್ ರಂಗದಲ್ಲಿ ಸಂಚಲನಕ್ಕೆ ಕಾರಣವಾಗಲಿದೆ.