2028ರ ಐಪಿಎಲ್ ನಲ್ಲಿ ಒಟ್ಟು 94 ಪಂದ್ಯಗಳು: ಅರುಣ್ ಧುಮಾಲ್ ಸುಳಿವು

ಸಾಂದರ್ಭಿಕ ಚಿತ್ರ | PC : @IPL
ಹೊಸದಿಲ್ಲಿ: 2028ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 94ಕ್ಕೆ ವಿಸ್ತರಿಸಲು ಬಿಸಿಸಿಐ ಗಂಭೀರವಾಗಿ ಯೋಚಿಸುತ್ತಿದ್ದು, ಹೊಸ ಫ್ರಾಂಚೈಸಿಗಳನ್ನು ಪರಿಚಯಿಸುವ ಯೋಜನೆ ಇಲ್ಲ ಎಂದು ವರದಿಯಾಗಿದೆ.
ಗುಜರಾತ್ ಟೈಟಾನ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ಫ್ರಾಂಚೈಸಿಗಳ ಮಾರಾಟದ ನಂತರ ಲೀಗ್ ಅನ್ನು 2022ರಲ್ಲಿ 74 ಪಂದ್ಯಗಳ ಮಾದರಿಯನ್ನಾಗಿ ರೂಪಿಸಲಾಯಿತು. 2025ರಲ್ಲಿ 84 ಪಂದ್ಯಗಳಿಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
2028ರಲ್ಲಿ ಆರಂಭವಾಗಲಿರುವ ಮುಂದಿನ ಮೀಡಿಯಾ ರೈಟ್ಸ್ ವೇಳೆ 94 ಪಂದ್ಯಗಳ ಮಾದರಿಯನ್ನು ಪರಿಗಣಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ‘ಕ್ರಿಕ್ ಇನ್ ಫೋ’ಗೆ ತಿಳಿಸಿದ್ದಾರೆ.
‘‘ಖಂಡಿತ ಅಂತಹದ್ದೊಂದು ಅವಕಾಶ ಇರಬಹುದು. ನಾವು ಈ ಕುರಿತಾಗಿ ಐಸಿಸಿಯಲ್ಲಿ ಚರ್ಚಿಸುತ್ತಿದ್ದೇವೆ. ಬಿಸಿಸಿಐನಲ್ಲಿ ಆಂತರಿಕವಾಗಿ ಚರ್ಚಿಸುತ್ತಿದ್ದೇವೆ. ದ್ವಿಪಕ್ಷೀಯ ಹಾಗೂ ಐಸಿಸಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಫ್ರಾಂಚೈಸಿ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ ಗೆ ಸಂಬಂಧಿಸಿದಂತೆ ಅಭಿಮಾನಿಗಳ ಆಸಕ್ತಿ ಹೇಗೆ ಬದಲಾಗುತ್ತಿದೆ ಎಂಬುದನ್ನು ಗಮನಿಸಿದರೆ ನಾವು ಅದರ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸಬೇಕಾಗಿದೆ’’ ಎಂದು ಧುಮಾಲ್ ಹೇಳಿದ್ದಾರೆ.