ಏಶ್ಯನ್ ಚಾಂಪಿಯನ್ಸ್ ಟ್ರೋಫಿ-2024 | ಹಾಕಿಯಲ್ಲಿ ಮಲೇಶ್ಯ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸೆಮಿ ಫೈನಲ್‌ಗೆ ಲಗ್ಗೆ

Update: 2024-09-11 14:31 GMT

ಬೀಜಿಂಗ್ : ಯುವ ಸ್ಟ್ರೈಕರ್ ರಾಜ್ ಕುಮಾರ್ ಪಾಲ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಮಲೇಶ್ಯ ತಂಡದ ವಿರುದ್ಧ್ದದ ಹೀರೊ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತದ ಪುರುಷರ ಹಾಕಿ ತಂಡ 8-1 ಗೋಲುಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ. ಪಂದ್ಯಾವಳಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿರುವ ಭಾರತೀಯರು ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ರಾಜ್‌ಕುಮಾರ್(3ನೇ, 25ನೇ, 33ನೇ ನಿಮಿಷ)ಮೂರು ಗೋಲುಗಳನ್ನು ಗಳಿಸಿದರೆ, ಅರೈಜೀತ್ ಸಿಂಗ್(6ನೇ ಹಾಗೂ 39ನೇ ನಿಮಿಷ) ಅವಳಿ ಗೋಲು ಗಳಿಸಿದರು. ಜುಗ್ರಾಜ್ ಸಿಂಗ್(7ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್(22ನೇ ನಿಮಿಷ) ಹಾಗೂ ಉತ್ತಮ್ ಸಿಂಗ್(40ನೇ ನಿಮಿಷ)ತಲಾ ಒಂದು ಗೋಲು ಗಳಿಸಿ ಭಾರತದ ಗೆಲುವಿಗೆ ಕೊಡುಗೆ ನೀಡಿದರು.

ಮಲೇಶ್ಯದ ಪರ ಅಖಿಮುಲ್ಲಾ ಅನ್ವರ್(34ನೇ ನಿಮಿಷ)ಸಮಾಧಾನಕರ ಗೋಲು ಗಳಿಸಿದರು.

ಮೂರು ಪಂದ್ಯಗಳಲ್ಲಿ ಒಟ್ಟು 9 ಅಂಕಗಳನ್ನು ಗಳಿಸಿರುವ ಭಾರತವು ಅಂಕಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.

ಆರು ತಂಡಗಳಿರುವ ಪಂದ್ಯಾವಳಿಯನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಾಗುತ್ತದೆ. ಅಗ್ರ-4 ತಂಡಗಳು ಸೆಪ್ಟಂಬರ್ 16ರಂದು ನಡೆಯಲಿರುವ ಸೆಮಿ ಫೈನಲ್‌ಗೆ ಲಗ್ಗೆ ಇಡುತ್ತವೆ. ಸೆಪ್ಟಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ.

ಭಾರತವು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು 3-0 ಅಂತರದಿಂದ ಮಣಿಸಿತ್ತು. ಆ ನಂತರ ತನ್ನ 2ನೇ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಸೋಲಿಸಿತ್ತು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಹಾಕಿ ತಂಡವು ಗುರುವಾರ ನಡೆಯಲಿರುವ ಪಂದ್ಯದಲ್ಲಿ ಕೊರಿಯಾವನ್ನು ಎದುರಿಸಲಿದೆ. ಶನಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ತನ್ನ ಲೀಗ್ ಅಭಿಯಾನವನ್ನು ಮುಕ್ತಾಯಗೊಳಿಸಲಿದೆ.

ಭಾರತ ಹಾಗೂ ಮಲೇಶ್ಯ ತಂಡಗಳು 2023ರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆಗ ಭಾರತವು ಮೊದಲಾರ್ಧದಲ್ಲಿ 1-3 ಹಿನ್ನಡೆಯಲ್ಲಿತ್ತು. ಆ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯಿಂದ ಪುಟಿದೆದ್ದಿದ್ದ ಭಾರತವು ಅಂತಿಮವಾಗಿ 4-3 ಅಂತರದಿಂದ ಜಯ ಸಾಧಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

ಭಾರತೀಯ ಸ್ಟ್ರೈಕರ್‌ಗಳು ಪಂದ್ಯಾವಳಿಯಲ್ಲಿ ತಮ್ಮ ಶ್ರೇಷ್ಠ ಫಾರ್ಮ್ ಅನ್ನು ಮುಂದುವರಿಸಿದ್ದು, ಇಂದಿನ ಪಂದ್ಯದಲ್ಲಿ ಐದು ಫೀಲ್ಡ್ ಗೋಲುಗಳು ಹಾಗೂ ಮೂರು ಪೆನಾಲ್ಟಿ ಕಾರ್ನರ್ ಗೋಲುಗಳನ್ನು ಗಳಿಸಿದ್ದಾರೆ. ಜುಗ್ರಾಜ್, ಹರ್ಮನ್‌ಪ್ರೀತ್ ಹಾಗೂ ಉತ್ತಮ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ರಾಜ್‌ಕುಮಾರ್ ಪಾಲ್ 3ನೇ ನಿಮಿಷದಲ್ಲಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಅರೈಜೀತ್ ಸಿಂಗ್ 6ನೇ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಒಂದು ನಿಮಿಷದ ನಂತರ ಜುಗ್ರಾಜ್ ಸಿಂಗ್ ಪವರ್‌ಫುಲ್ ಡ್ರ್ಯಾಗ್‌ಫ್ಲಿಕ್ ಮೂಲಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಆಗ ಭಾರತವು ಮೊದಲ ಕ್ವಾರ್ಟರ್ ಅಂತ್ಯಕ್ಕೆ 3-0 ಮುನ್ನಡೆ ಪಡೆಯಿತು.

ಮೂರು ಗೋಲುಗಳ ಹಿನ್ನಡೆಯಲ್ಲಿದ್ದ ಮಲೇಶ್ಯ 2ನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ತಕ್ಷಣವೇ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ಪಡೆಯಿತು. ಆದರೆ ಭಾರತೀಯ ಡಿಫೆಂಡರ್‌ಗಳು ಗೋಲು ದಾಖಲಾಗದಂತೆ ನೋಡಿಕೊಂಡರು.

22ನೇ ನಿಮಿಷದಲ್ಲಿ ಭಾರತವು ಸತತವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ವಿಶ್ವದ ಓರ್ವ ಶ್ರೇಷ್ಠ ಡ್ರ್ಯಾಗ್-ಫ್ಲಿಕರ್ ಹರ್ಮನ್‌ಪ್ರೀತ್ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. 25ನೇ ನಿಮಿಷದಲ್ಲಿ ರಾಜ್‌ಕುಮಾರ್ ಅವರು ಅರೈಜೀತ್ ಹಾಗೂ ಉತ್ತಮ್ ಅವರ ನೆರವಿನಿಂದ ತನ್ನ ಎರಡನೇ ಗೋಲು ದಾಖಲಿಸಿದರು. ಆಗ ಭಾರತವು ಮೊದಲಾರ್ಧದ ಅಂತ್ಯಕ್ಕೆ ತನ್ನ ಮುನ್ನಡೆಯನ್ನು 5-0ಗೆ ವಿಸ್ತರಿಸಿಕೊಂಡಿತು.

33ನೇ ನಿಮಿಷದಲ್ಲಿ ರಾಜ್‌ಕುಮಾರ್ ಅವರು ಸೀನಿಯರ್ ಮಟ್ಟದಲ್ಲಿ ತನ್ನ ಚೊಚ್ಚಲ ಹ್ಯಾಟ್ರಿಕ್ ಗೋಲು ಬಾರಿಸಿದರು. ಇದಕ್ಕೂ ಮೊದಲು ಉಪ ನಾಯಕ ವಿವೇಕ್ ಸಾಗರ್ ಪ್ರಸಾದ್ ಅವರ ಗೋಲು ಗಳಿಸುವ ಪ್ರಯತ್ನವನ್ನು ಮಲೇಶ್ಯದ ಗೋಲ್‌ಕೀಪರ್ ವಿಫಲಗೊಳಿಸಿದರು.

ಮಲೇಶ್ಯದ ಪರ ಅನ್ವರ್ 34ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು. ನೀಲಕಂಠ ಶರ್ಮಾ ಅವರ ಪಾಸ್ ನೆರವಿನಿಂದ ಅರೈಜೀತ್ 39ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿದರು. ಉತ್ತಮ್ ಸಿಂಗ್ 40ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಭಾರತದ ಹಾಕಿ ತಂಡಕ್ಕೆ 8-1 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.

ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಜಪಾನ್ ತಂಡವನ್ನು 2-1 ಅಂತರದಿಂದ ಮಣಿಸಿ ಸೆಮಿ ಫೈನಲ್‌ಗೆ ತಲುಪುವ ತನ್ನ ಅವಕಾಶವನ್ನು ಹೆಚ್ಚಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News