ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌: ವಿಶ್ವದ ನಂ.7ನೇ ಆಟಗಾರನಿಗೆ ಸೋಲುಣಿಸಿದ ಕನ್ನಡಿಗ ಮಿಥುನ್ ಮಂಜುನಾಥ್

Update: 2023-08-02 15:50 GMT

ಸಿಡ್ನಿ: ಭಾರತದ ಹೊಸ ಮುಖ ಕನ್ನಡಿಗ ಮಿಥುನ್ ಮಂಜುನಾಥ್ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಹಾಗೂ ವಿಶ್ವದ ನಂ.7ನೇ ಆಟಗಾರ ಕೀನ್ ಯೀವ್ ಲೊಹ್‌ರನ್ನು ಸೋಲಿಸಿ ಶಾಕ್ ನೀಡಿದರು.

ವಿಶ್ವ ರ್ಯಾಂಕಿಂಗ್‌ನಲ್ಲಿ 50ನೇ ಸ್ಥಾನದಲ್ಲಿದ್ದರೂ ಮಂಜುನಾಥ್ ಅಮೋಘ ಕೌಶಲ್ಯ ಹಾಗೂ ದೃಢತೆಯನ್ನು ಪ್ರದರ್ಶಿಸಿ 41 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಕೀವ್ ಯೀವ್‌ರನ್ನು 21-19 ಹಾಗೂ 21-19 ಗೇಮ್‌ಗಳ ಅಂತರದಿಂದ ಮಣಿಸಿದರು.

ಇದೇ ವೇಳೆ ಅಗ್ರ ರ್ಯಾಂಕಿನ ಆಟಗಾರರಾದ ಪಿ.ವಿ. ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಪ್ರಾಬಲ್ಯ ಮೆರೆದರು. ಈ ಋತುವಿನಲ್ಲಿ ಹಲವು ಟೂರ್ನಿಗಳಲ್ಲಿ ಬೇಗನೆ ನಿರ್ಗಮಿಸಿದ್ದ 5ನೇ ಶ್ರೇಯಾಂಕದ ಸಿಂಧು ಸಹ ಆಟಗಾರ್ತಿ ಅಶ್ಮಿತಾ ಚಲಿಹಾ ವಿರುದ್ಧ ಕೇವಲ 36 ನಿಮಿಷಗಳ ಹೋರಾಟದಲ್ಲಿ 21-18, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಮತ್ತೊಂದೆಡೆ ಪುರುಷರ ಸಿಂಗಲ್ಸ್‌ನ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 19ನೇ ರ್ಯಾಂಕಿನ ಶ್ರೀಕಾಂತ್ ಅವರು ಜಪಾನಿನ ಕೆಂಟಾ ನಿಶಿಮೊಟೊರನ್ನು 21-18, 21-7 ಅಂತರದಿಂದ ಮಣಿಸಿದರು.

ಇನ್ನೊಂದೆಡೆ 6ನೇ ಶ್ರೇಯಾಂಕದ ಎಚ್.ಎಸ್. ಪ್ರಣಯ್ ಹಾಂಕಾಂಗ್‌ನ ಚೆವುಕ್ ಯೀವ್ ಲೀ ಅವರಿಂದ ಕಠಿಣ ಸವಾಲನ್ನು ಎದುರಿಸಿದರೂ ಕೂಡ 21-18, 16-21,21-15 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಯು ಜೆನ್ ಚಿ ಅವರನ್ನು ಎದುರಿಸಲಿದ್ದಾರೆ.

ಮಂಜುನಾಥ್ ಅವರು ಬಿಡಬ್ಲ್ಯುಎಫ್ ಸೂಪರ್-500 ಟೂರ್ನಮೆಂಟ್‌ನ 2ನೇ ಸುತ್ತಿನಲ್ಲಿ ಮಲೇಶ್ಯದ ಆಟಗಾರರಾದ ಲೀ ಝಿ ಜಿಯಾ ಅಥವಾ ಲೆಯೊಂಗ್ ಜುನ್ ಹಾವೊರನ್ನು ಎದುರಿಸಲಿದ್ದಾರೆ.

ಇದೇ ವೇಳೆ, ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಸಹ ಆಟಗಾರ ಕಿರಣ್ ಜಾರ್ಜ್ ವಿರುದ್ಧ ಮೊದಲ ಪಂದ್ಯದಲ್ಲಿ 0-5 ಅಂತರದಿಂದ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ನಿವೃತ್ತಿಯಾದರು. ಉದಯೋನ್ಮುಖ ಶಟ್ಲರ್ ಪ್ರಿಯಾಂಶು ರಾಜಾವತ್ ಆಸ್ಟ್ರೇಲಿಯದ ನಥಾನ್ ಟಾಂಗ್‌ರನ್ನು 21-12, 21-16 ಅಂತರದಿಂದ ಸೋಲಿಸಿ ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News