ಕ್ರೀಡಾಂಗಣದ ಸ್ಟ್ಯಾಂಡ್ ನಿಂದ ತನ್ನ ಹೆಸರು ತೆಗೆಯುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಅಝರುದ್ದೀನ್ ನಿರ್ಧಾರ
Photo | PTI
ಹೊಸದಿಲ್ಲಿ: ರಾಜೀವ್ ಗಾಂಧಿ ಅಂತರ್ರಾಷ್ಟ್ರೀಯ ಕ್ರೀಡಾಂಗಣದ ನಾರ್ತ್ ಸ್ಟ್ಯಾಂಡ್ ನಿಂದ ತನ್ನ ಹೆಸರನ್ನು ತೆಗೆದುಹಾಕುವಂತೆ ನಿರ್ದೇಶಿಸಿದ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ(ಎಚ್ಸಿಎ)ಒಂಬುಡ್ಸ್ಮನ್ ಆದೇಶವನ್ನು ಪ್ರಶ್ನಿಸಿ ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ತೆಲಂಗಾಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಎಚ್ಸಿಎ ಸದಸ್ಯ ಘಟಕವಾದ ಲಾರ್ಡ್ಸ್ ಕ್ರಿಕೆಟ್ ಕ್ಲಬ್ ಸಲ್ಲಿಸಿದ ಅರ್ಜಿಯನ್ನು ಆಧರಿಸಿ ಎಚ್ಸಿಎಯ ಎಥಿಕ್ಸ್ ಅಧಿಕಾರಿಯೂ ಆಗಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ(ನಿವೃತ್ತ)ವಿ.ಈಶ್ವರಯ್ಯ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಝರುದ್ದೀನ್ ಎಚ್ಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಸೆಂಬರ್ 2019ರಲ್ಲಿ ಸಾಮಾನ್ಯ ಸಭೆಯ ಸರಿಯಾದ ಅನುಮೋದನೆಯಿಲ್ಲದೆ ಸ್ಟ್ಯಾಂಡ್ ಗೆ ತಮ್ಮ ಹೆಸರಿಡಲು ಒತ್ತಾಯಿಸುವ ಮೂಲಕ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
‘‘ನಾನು ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಈ ಆದೇಶವನ್ನು ತಡೆ ಹಿಡಿಯಲು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಭಾರತ ತಂಡದ ನಾಯಕನ ಹೆಸರನ್ನು ತೆಗೆದುಹಾಕಲು ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಂಬುಡ್ಸ್ಮನ್ ಅಧಿಕಾರಾವಧಿ ಫೆಬ್ರವರಿ 2025ರಲ್ಲಿ ಕೊನೆಗೊಂಡಿದೆ. ಆ ದಿನಾಂಕವನ್ನು ಮೀರಿ ಹೊರಡಿಸಲಾದ ಯಾವುದೇ ಆದೇಶವು ಅಮಾನ್ಯವಾಗಿದೆ ’’ ಎಂದು ಅಝರುದ್ದೀನ್ ಪಿಟಿಐಗೆ ತಿಳಿಸಿದರು.