ವಿಶ್ವಕಪ್ ಗೆ ಹಾರ್ದಿಕ್ ಪಾಂಡ್ಯ ಅಲಭ್ಯತೆಗೆ ಕಾರಣ ಬಹಿರಂಗಪಡಿಸಿದ ಬಿಸಿಸಿಐ

Update: 2023-11-05 04:53 GMT

Photo: twitter


ಮುಂಬೈ: ವಿಶ್ವಕಪ್ ಅಜೇಯ ಅಭಿಯಾನದಲ್ಲಿ ಸತತ ಏಳು ಪಂದ್ಯಗಳನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡಕ್ಕೆ ಮುಂದಿನ ಪಂದ್ಯಗಳಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇವೆ ಅಲಭ್ಯ. ಅಕ್ಟೋಬರ್ 19ರಂದು ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿದ್ದ ಹಾರ್ದಿಕ್ ಅವರಿಗೆ ಚಿಕಿತ್ಸೆ ನೀಡಿದ ಬಳಿಕವೂ ಸಂಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಅವರು ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

ಅವರ ಬದಲಿಗೆ 17 ಏಕದಿನ ಪಂದ್ಯಗಳನ್ನು ಆಡಿರುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಬದಲಾವಣೆಯನ್ನು ಐಸಿಸಿ ತಾಂತ್ರಿಕ ಸಮಿತಿ ಒಪ್ಪಿಕೊಂಡಿದೆ. ಗಾಯಕ್ಕೆ ಮುನ್ನ ಪಾಂಡ್ಯ ಕೇವಲ ನಾಲ್ಕು ಪಂದ್ಯಗಳನ್ನು ಈ ಟೂರ್ನಿಯಲ್ಲಿ ಆಡಿದ್ದರು.

"ನಾನು ವಿಶ್ವಕಪ್ ನ ಉಳಿದ ಪಂದ್ಯಗಳಿಂದ ಹೊರಗುಳಿಯುತ್ತಿದ್ದೇನೆ ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಾನು ಪ್ರತಿ ಎಸೆತದಲ್ಲಿ ತಂಡಕ್ಕೆ ಸ್ಫೂರ್ತಿ ತುಂಬಲು, ಪ್ರೇರಣೆ ನೀಡಲು ಪ್ರತಿ ಪಂದ್ಯದಲ್ಲೂ ತಂಡದ ಜತೆಗೆ ಇರುತ್ತೇನೆ. ಎಲ್ಲರ ನಂಬಲಸಾಧ್ಯ ಹಾರೈಕೆ, ಪ್ರೀತಿ, ಬೆಂಬಲಕ್ಕೆ ಕೃತಜ್ಞತೆಗಳು. ಈ ತಂಡ ವಿಶೇಷ ಹಾಗೂ ನಾವು ಎಲ್ಲರೂ ಹೆಮ್ಮೆಪಡುವಂಥ ಸಾಧನೆ ಮಾಡುತ್ತೇವೆ ಎಂಬ ಖಾತರಿ ಇದೆ" ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಸೆಮಿಫೈನಲ್ ಗೆ ತೇರ್ಗಡೆ ಹೊಂದಿರುವ ಭಾರತದ ನಾಕೌಟ್ ಪಂದ್ಯಗಳಿಗೆ ಈ ಆಲ್ರೌಂಡರ್ ಲಭ್ಯರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ತರಬೇತಿಗೂ ಹಾಜರಾಗುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ಈ ಮುನ್ನ ಹೇಳಿದ್ದವು. ಆದರೆ ಗುರುವಾರ ಅವರ ಕಣಕಾಲಿನಲ್ಲಿ ಮತ್ತೆ ಊತ ಕಾಣಿಸಿಕೊಂಡಿದೆ. ಇದರಿಂದ ಸದ್ಯಕ್ಕೆ ಅವರು ಬೌಲಿಂಗ್ ಮಾಡುವುದು ಅಸಾಧ್ಯ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News