ಫಿಟ್ನೆಸ್ ಸಾಬೀತು ಪಡಿಸಿ : ಶಮಿಗೆ ಬಿಸಿಸಿಐ ಸೂಚನೆ

Update: 2024-11-28 15:55 GMT

ಮುಹಮ್ಮದ್ ಶಮಿ | PC : PTI 

ಮುಂಬೈ : ಪ್ರಸಕ್ತ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯಾವಳಿಗೆ ತನ್ನನ್ನು ಆರಿಸುವಂತೆ ಆಯ್ಕೆಗಾರರಿಗೆ ಮನವರಿಕೆ ಮಾಡಿಕೊಡಲು ಭಾರತೀಯ ತಂಡದ ವೇಗಿ ಮುಹಮ್ಮದ್ ಶಮಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಒಂದು ವಾರಕ್ಕಿಂತಲೂ ಕಡಿಮೆ ಅವಕಾಶ ನಿಡಿದೆ ಎಂದು ವರದಿಯೊಂದು ತಿಳಿಸಿದೆ. ಈ ಅವಧಿಯಲ್ಲಿ ಅವರು ತನ್ನ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸಬೇಕಾಗಿದೆ.

ಗಾಯಗೊಂಡು ಸುದೀರ್ಘಾವಧಿ ತಂಡದಿಂದ ಹೊರಗಿದ್ದ ಶಮಿ ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಅವರು ಈಗ ಬಿಸಿಸಿಐ ವೈದ್ಯಕೀಯ ತಂಡದ ತೀವ್ರ ನಿಗಾದಲ್ಲಿ ಇದ್ದಾರೆ.

ಇತ್ತೀಚೆಗೆ ಬಂಗಾಳದ ಪರವಾಗಿ ಮೊದಲ ರಣಜಿ ಪಂದ್ಯವಾಡಿರುವ ಶಮಿ ಉತ್ತಮ ನಿರ್ವಹಣೆ ನೀಡಿದ್ದಾರೆ. ಅವರು ಇನ್ನು ಮುಶ್ತಾಕ್ ಅಲಿ ಟ್ರೋಫಿಯ ಕೆಲವು ಟಿ20 ಪಂದ್ಯಗಳಲ್ಲಿ ಆಡಲಿದ್ದಾರೆ. ಈ ಪಂದ್ಯಗಳಲ್ಲಿ ಅವರು ನೀಡುವ ನಿರ್ವಹಣೆಯ ಮೇಲೆ ಆಯ್ಕೆಗಾರರು ನಿಗಾ ಇಡುತ್ತಾರೆ.

ಸ್ವಲ್ಪ ತೂಕ ಕಡಿಮೆ ಮಾಡಿಕೊಂಡು ದೈಹಿಕ ಕ್ಷಮತೆಯನ್ನು ಮರಳಿ ಪಡೆಯುವುದು ಶಮಿಯ ಈಗಿನ ಆದ್ಯತೆಯಾಗಿದೆ ಎನ್ನಲಾಗಿದೆ.

‘‘ಈಗ ಶಮಿಯ ಪ್ರತಿಯೊಂದು ಹಂತದ ಬೌಲಿಂಗ್ ಬಳಿಕ ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ. ವೈದ್ಯಕೀಯ ತಂಡದ ಮೇಲಿನ ಅವಲಂಬನೆಯಿಂದ ಅವರು ಹೊರಬರುವುದನ್ನು ನಾವು ಕಾಯುತ್ತಿದ್ದೇವೆ’’ಎಂದು ಬಿಸಿಸಿಯ ಮೂಲವೊಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಅವರು ಪಂದ್ಯಗಳನ್ನು ಆಡುತ್ತಿದ್ದರೆ ಅವರ ತೂಕ ಕಡಿಮೆಯಾಗುತ್ತದೆ ಮತ್ತು ದೈಹಿಕ ಕ್ಷಮತೆ ಮರಳುತ್ತದೆ ಎಂದು ವೈದ್ಯಕೀಯ ತಂಡ ಅಭಿಪ್ರಾಯಪಟ್ಟಿದೆ.

ಶಮಿಯ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಪಂದ್ಯಗಳು ನವೆಂಬರ್ 23ರಂದು ಆರಂಭಗೊಂಡಿವೆ. ಆಗ, ತನ್ನ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸಲು ಅವರಿಗೆ 10 ದಿನಗಳ ಕಾಲಾವಕಾಶವಿತ್ತು.

ತನ್ನ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸಿದರೆ ಹಾಗೂ ಅವರ ಚೇತರಿಕೆ ಯೋಜನೆಯಂತೆ ಸಾಗಿದರೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇದೆ. ಆ ಪಂದ್ಯವು ಡಿಸೆಂಬರ್ 14ರಂದು ಆರಂಭಗೊಳ್ಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News