ಯಶಸ್ವಿ ಜೈಸ್ವಾಲ್ ಯಶಸ್ಸಿನ ಶ್ರೇಯಸ್ಸು ನಮಗೂ ಸಲ್ಲಬೇಕು ಎಂದ ಬೆನ್ ಡಕೆಟ್: ನಾಸಿರ್ ಹುಸೇನ್ ಆಕ್ರೋಶ

Update: 2024-02-20 16:03 GMT

ಜೈಸ್ವಾಲ್ | Photo : PTI

ಹೊಸದಿಲ್ಲಿ: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಯಶಸ್ವಿ ಜೈಸ್ವಾಲ್ ಸಾಕಷ್ಟು ರನ್ ಕಲೆ ಹಾಕಿದ್ದಾರೆ. ಸತತ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಂಡು ಮಿಂಚುತ್ತಿರುವ ಜೈಸ್ವಾಲ್ ಯಶಸ್ಸಿನ ಶ್ರೇಯಸ್ಸನ್ನು ಸ್ವಲ್ಪಮಟ್ಟಿಗೆ ಪಡೆಯಲು ಇಂಗ್ಲೆಂಡ್ಗೆ ಅರ್ಹತೆ ಇದೆ ಎಂದು ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಹೇಳಿದ್ದಾರೆ.

ಬೆನ್ ಡಕೆಟ್ ಹೇಳಿಕೆಯು ಇಂಗ್ಲೆಂಡ್ನ ಮಾಜಿ ನಾಯಕ ನಾಸಿರ್ ಹುಸೇನ್ ಸೇರಿದಂತೆ ಹಲವರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಮೂರನೇ ದಿನದಾಟದ ನಂತರ ಜೈಸ್ವಾಲ್ ಬ್ಯಾಟಿಂಗ್ ಸಾಹಸದ ಕುರಿತು ಮಾತನಾಡುತ್ತಿದ್ದ ಡಕೆಟ್, ಎದುರಾಳಿ ತಂಡದ ಆಟಗಾರರು ಆಡುತ್ತಿರುವ ರೀತಿಯನ್ನು ನೋಡಿದಾಗ ಅದರಿಂದ ನಾವು ಸ್ವಲ್ಪ ಮಟ್ಟಿನ ಶ್ರೇಯಸ್ಸು ಪಡೆಯಬೇಕೆನಿಸುತ್ತದೆ. ಅವರು ಇತರರು ಟೆಸ್ಟ್ ಕ್ರಿಕೆಟ್ ಆಡುವುದಕ್ಕಿಂತ ವಿಭಿನ್ನವಾಗಿ ಆಡುತ್ತಿದ್ದಾರೆ ಎಂದರು.

ಇಂಗ್ಲೆಂಡ್ನ ಮಾಜಿ ನಾಯಕ ಹುಸೇನ್ಗೆ ಡಕೆಟ್ ಅಭಿಪ್ರಾಯ ಇಷ್ಟವಾಗಿಲ್ಲ, ಡಕೆಟ್ ಹೇಳಿಕೆಯನ್ನು ಖಂಡಿಸಿದ ಅವರು, ಬಾಝ್ಬಾಲ್ ತಂತ್ರ ಸಮರ್ಥಿಸುವಾಗ ಇಂಗ್ಲೆಂಡ್ ಆಟಗಾರರು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಅವರು(ಜೈಸ್ವಾಲ್)ನಿಮ್ಮಿಂದ ಪಾಠ ಕಲಿತಿಲ್ಲ. ಅವರು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಎಲ್ಲ ಆಟಗಾರರು ಅವರನ್ನು ನೋಡಿ ಕಲಿಯಿರಿ. ಸ್ವಲ್ಪಮಟ್ಟಿನ ಆತ್ಮಾವಲೋಕನ ನಡೆಯುತ್ತಿದೆ ಎಂದು ನಾವು ಭಾವಿಸುತ್ತೇನೆ ಎಂದು ಸ್ಕೈ ಸ್ಪೋರ್ಟ್ಸ್ನೊಂದಿಗೆ ಮಾತನಾಡುತ್ತಾ ಹುಸೇನ್ ಹೇಳಿದ್ದಾರೆ.

ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಮುಂಬೈನ ಯುವ ಬ್ಯಾಟರ್ ಜೈಸ್ವಾಲ್ ಎರಡು ದ್ವಿಶತಕ ಸಹಿತ ಆರು ಇನಿಂಗ್ಸ್ಗಳಲ್ಲಿ 109ರ ಸರಾಸರಿಯಲ್ಲಿ ಒಟ್ಟು 545 ರನ್ ಗಳಿಸಿದ್ದಾರೆ.

22ರ ಹರೆಯದ ಎಡಗೈ ಬ್ಯಾಟರ್ ಜೈಸ್ವಾಲ್ ರಾಜ್ಕೋಟ್ ಟೆಸ್ಟ್ನಲ್ಲಿ 214 ರನ್ ಗಳಿಸಿ ಭಾರತ ತಂಡವು ಇಂಗ್ಲೆಂಡ್ಗೆ ಗೆಲ್ಲಲು 557 ರನ್ ಕಠಿಣ ಗುರಿ ನಿಗದಿಪಡಿಸಲು ನೆರವಾಗಿದ್ದರು. ಆದರೆ ಪ್ರವಾಸಿ ತಂಡ ರವೀಂದ್ರ ಜಡೇಜರ(5-41)ಸ್ಪಿನ್ ಮೋಡಿಗೆ ತತ್ತರಿಸಿ 434 ರನ್ನಿಂದ ಹೀನಾಯವಾಗಿ ಸೋತಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News