ಐತಿಹಾಸಿಕ ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ 10 ಲಕ್ಷ ರೂ. ಬಹುಮಾನ ಪ್ರಕಟಿಸಿದ ಬಿಹಾರದ ಸಿಎಂ

ವೈಭವ ಸೂರ್ಯವಂಶಿ, ನಿತೀಶ್ ಕುಮಾರ್ | PTI
ಪಾಟ್ನಾ: ಟಿ-20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಕಿರಿಯ ವಯಸ್ಸಿನ ಆಟಗಾರನಾಗಿ ಇತಿಹಾಸ ನಿರ್ಮಿಸಿರುವ 14ರ ಹರೆಯದ ವೈಭವ ಸೂರ್ಯವಂಶಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ 10 ಲಕ್ಷ ರೂ. ಬಹುಮಾನ ಘೋಷಿಸಿದರು.
ಗುಜರಾತ್ ತಂಡದಲ್ಲಿ ಒಟ್ಟು 694 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವಿಗಳನ್ನು ಹೊಂದಿರುವ ಬೌಲಿಂಗ್ ಸರದಿಯ ವಿರುದ್ಧ ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ (30 ಎಸೆತ)ನಂತರ 2ನೇ ಅತ್ಯಂತ ವೇಗದ ಶತಕ ದಾಖಲಿಸಿದರು.
ಪ್ರಸಿದ್ಧ ಕೃಷ್ಣ ಅವರು ಯಾರ್ಕರ್ ಎಸೆತದ ಮೂಲಕ ಬಿಹಾರದ ಯುವ ಆಟಗಾರನ ಭವ್ಯ ಇನಿಂಗ್ಸ್‌ಗೆ ತೆರೆ ಎಳೆದರು. ವೈಭವ್ ಅವರ ಪ್ರದರ್ಶನವು ರಾಜಸ್ಥಾನದ 8 ವಿಕೆಟ್ ಗೆಲುವಿಗೆ ನೆರವಾಯಿತು.
‘‘ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಿಹಾರದ ವೈಭವ್ ಸೂರ್ಯವಂಶಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು. ತನ್ನ ಕಠಿಣ ಪರಿಶ್ರಮ, ಪ್ರತಿಭೆಯ ಫಲವಾಗಿ ಭಾರತೀಯ ಕ್ರಿಕೆಟ್‌ನ ಹೊಸ ಭರವಸೆಯಾಗಿದ್ದಾರೆ. ಎಲ್ಲರೂ ಅವರ ಹೆಮ್ಮೆ ಪಡುತ್ತಿದ್ದಾರೆ’’ಎಂದು ನಿತೀಶ್ ಕುಮಾರ್ ಎಕ್ಸ್‌ನಲ್ಲಿ ಬರೆದಿದ್ದಾರೆ.