ಬಾಕ್ಸಿಂಗ್ ಡೇ ಟೆಸ್ಟ್: ಶೋಯಬ್ ಅಖ್ತರ್ ದಾಖಲೆ ಮುರಿದ ಬೂಮ್ರಾ
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್ ನಲ್ಲಿ 12 ಬಾರಿ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾ, ಪಾಕಿಸ್ತನದ ಶೋಯಬ್ ಅಖ್ತರ್ ಅವರ ದಾಖಲೆ ಪುಡಿಗಟ್ಟಿದರು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ನ ಕೊನೆಯ ದಿನ 13ನೇ ಬಾರಿ ಐದು ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾದರು.
ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 44 ಪಂದ್ಯಗಳಿಂದ 203 ವಿಕೆಟ್ ಗಳಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾದರು. ಅಖ್ತರ್ 46 ಪಂದ್ಯಗಳಲ್ಲಿ 178 ವಿಕೆಟ್ ಕಬಳಿಸಿದ್ದಾರೆ. ಈ ವಿಶಿಷ್ಟ ಮೈಲುಗಲ್ಲಿನಿಂದಾಗಿ ಭೂಮ್ರಾ ವಿಶ್ವದ ಶ್ರೇಷ್ಠ ಬೌಲರ್ಗಳ ಪೈಕಿ ಒಬ್ಬರಾಗಿ ಕ್ರಿಕೆಟ್ ಇತಿಹಾಸದಲ್ಲಿ ಸ್ಥಾನ ಪಡೆದರು. ಕ್ರಿಕೆಟ್ ಜಗತ್ತಿನ ದಂತಕಥೆಗಳೆನಿಸಿದ ಶ್ರೀಲಂಕಾದ ಚಾಮಿಂಡಾ ವಾಸ್, ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಅವರನ್ನೂ ಬೂಮ್ರಾ ಹಿಂದಿಕ್ಕಿದರು. ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ 12 ಬಾರಿ ಐದು ವಿಕೆಟ್ ಪಡೆದಿದ್ದರು.
13 ಬಾರಿ ಐದು ವಿಕೆಟ್ ಪಡೆದ ಬೂಮ್ರಾ ವಿಶ್ವದ ಸರ್ವಶ್ರೇಷ್ಠ ಬೌಲರ್ ಗಳಾದ ಮೈಕೆಲ್ ಹೋಲ್ಡಿಂಗ್ ಮತ್ತು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಅವರ ಸಾಲು ಸೇರಿದರು. ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ 13 ಬಾರಿ ಈ ಸಾಧನೆ ಮಾಡಿದ್ದರು.
ವೇಗ ಮತ್ತು ಯಾರ್ಕರ್ಗಳಿಗೆ ಹೆಸರಾದ ಬೂಮ್ರಾ ಬಾಕ್ಸಿಂಗ್ ಡೇ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ 57 ರನ್ ಗಳಿಗೆ ಐದು ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ನಲ್ಲಿ 9 ವಿಕೆಟ್ ಪಡೆದರು. ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಪಡೆದ ಅವರು ಸರಣಿಯಲ್ಲಿ 30 ವಿಕೆಟ್ ಕಬಳಿಸಿದ್ದಾರೆ. ಸದ್ಯಕ್ಕೆ ಸರಣಿ 1-1 ಸಮಬಲದಲ್ಲಿದ್ದು, ಜನವರಿ 3 ರಿಂದ ಅಂತಿಮ ಟೆಸ್ಟ್ ನಡೆಯಲಿದೆ. 27 ರನ್ ಗಳಿಗೆ 6 ವಿಕೆಟ್ ಪಡೆದಿರುವುದು ಬೂಮ್ರಾ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಪಂದ್ಯವೊಂದರಲ್ಲಿ 86 ರನ್ ಗಳಿಗೆ 9 ವಿಕೆಟ್ ಕಿತ್ತಿರುವುದು ಅವರ ಇಡೀ ಪಂದ್ಯದಲ್ಲಿ ಗಳಿಸಿದ ಗರಿಷ್ಠ ವಿಕೆಟ್ ಆಗಿರುತ್ತದೆ.