ವೇಗವಾಗಿ 200 ಟೆಸ್ಟ್ ವಿಕೆಟ್ ಪೂರೈಸಿದ ಭಾರತದ ಮೊದಲ ವೇಗಿ ಬುಮ್ರಾ
ಮೆಲ್ಬರ್ನ್: ಆಸ್ಟ್ರೇಲಿಯದ ವಿರುದ್ಧ 4ನೇ ಟೆಸ್ಟ್‌ನ 4ನೇ ದಿನವಾದ ರವಿವಾರ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದರು. ವೇಗವಾಗಿ ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್ ಎನಿಸಿಕೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸರಾಸರಿಯೊಂದಿಗೆ 200 ವಿಕೆಟ್ ಪೂರೈಸಿ ಹೊಸ ದಾಖಲೆ ಬರೆದರು.
ಬುಮ್ರಾ ತನ್ನ 44ನೇ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಪಡೆದು ಈ ಮೈಲಿಗಲ್ಲು ತಲುಪಿದರು. ವೇಗಿಗಳಾದ ಪ್ಯಾಟ್ ಕಮಿನ್ಸ್ ಹಾಗೂ ಕಾಗಿಸೊ ರಬಾಡ ಅವರಿದ್ದ ವಿಶೇಷ ಗುಂಪಿಗೆ ಸೇರಿದರು. ಈ ಇಬ್ಬರು ಬೌಲರ್‌ಗಳು ಕೂಡ 44 ಪಂದ್ಯಗಳಲ್ಲಿ 200 ರನ್ ಪೂರೈಸಿದ್ದರು.
ಬುಮ್ರಾ ಎರಡನೇ ಜಂಟಿ ವೇಗದಲ್ಲಿ ಈ ಸಾಧನೆ ಮಾಡಿದ ಭಾರತದ ಬೌಲರ್ ಎನಿಸಿಕೊಂಡರು. ಈ ಮೂಲಕ ಸ್ಪಿನ್ನರ್ ರವೀಂದ್ರ ಜಡೇಜರ ದಾಖಲೆ ಸರಿಗಟ್ಟಿದರು. ಭಾರತದ ಕ್ರಿಕೆಟ್ ಚರಿತ್ರೆಯಲ್ಲಿ ಆರ್.ಅಶ್ವಿನ್ ವೇಗವಾಗಿ(37 ಇನಿಂಗ್ಸ್)ಈ ಸಾಧನೆ ಮಾಡಿದ್ದಾರೆ.
ಭಾರತೀಯ ವೇಗಿಗಳ ಪೈಕಿ ಬುಮ್ರಾ ವೇಗವಾಗಿ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ. ಕಪಿಲ್ ದೇವ್ ತನ್ನ 50ನೇ ಟೆಸ್ಟ್ ಪಂದ್ಯದಲ್ಲಿ 200ನೇ ವಿಕೆಟ್ ಪಡೆದಿದ್ದಾರೆ.
200 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಶ್ರೇಷ್ಠ ಸರಾಸರಿಯೊಂದಿಗೆ( ಪ್ರತಿ ವಿಕೆಟ್‌ಗೆ 19.56) ಹೊಸ ದಾಖಲೆ ನಿರ್ಮಿಸಿದರು. ವೆಸ್ಟ್‌ಇಂಡೀಸ್‌ನ ಲೆಜೆಂಡ್ ಜೊಯೆಲ್ ಗಾರ್ನರ್ ದಾಖಲೆಯನ್ನು ಮುರಿದರು. ಮೊದಲ 200 ವಿಕೆಟ್ ಪಡೆಯಲು 4 ಸಾವಿರಕ್ಕಿಂತ ಕಡಿಮೆ ರನ್ ನೀಡಿದರು.
ಬುಮ್ರಾ ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯದಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.
ಪಾಕಿಸ್ತಾನದ ಯಾಸಿರ್ ಶಾ ವೇಗವಾಗಿ 200 ವಿಕೆಟ್ ತಲುಪಿದ ಸಾಧನೆ ಮಾಡಿದ್ದಾರೆ. ಯಾಸಿರ್ ಕೇವಲ 33 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಪೂರೈಸಿದ್ದರು.