ಮೂರು ವರ್ಷಗಳ ಬಳಿಕ ಮೊದಲ ಬಾರಿ ಸಿಕ್ಸರ್ ಬಿಟ್ಟುಕೊಟ್ಟ ಬುಮ್ರಾ

Update: 2024-12-26 21:32 IST
Bumrah, Sam Constas

Bumrah, Sam Constas | PTI

  • whatsapp icon

ಮೆಲ್ಬರ್ನ್: ಆಸ್ಟ್ರೇಲಿಯದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ ಅಸಾಧಾರಣ ಇನಿಂಗ್ಸ್ ಅಡಿದ್ದು, ಇದರಲ್ಲಿ ಜಸ್‌ಪ್ರಿತ್ ಬುಮ್ರಾ ವಿರುದ್ಧ ಸಿಕ್ಸರ್ ಕೂಡ ಸೇರಿದೆ. ಸರಣಿಯಲ್ಲಿ ಸದ್ಯ ಶ್ರೇಷ್ಠ ಫಾರ್ಮ್‌ನಲ್ಲಿರುವ ಬುಮ್ರಾ ಅವರು 3 ವರ್ಷಗಳ ನಂತರ ಮೊದಲ ಬಾರಿ ಎದುರಾಳಿ ಬ್ಯಾಟರ್‌ಗೆ ಸಿಕ್ಸರ್ ಬಿಟ್ಟುಕೊಟ್ಟರು.

ಭಾರತ ವಿರುದ್ಧ ಎಂಸಿಜಿಯಲ್ಲಿ ಗುರುವಾರ ಆರಂಭವಾದ 4ನೇ ಟೆಸ್ಟ್ ಪಂದ್ಯದ 7ನೇ ಓವರ್‌ನಲ್ಲಿ ಕಾನ್‌ಸ್ಟಾಸ್ ಅವರು ಬುಮ್ರಾ ಓವರ್‌ನಲ್ಲಿ ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ ಸಿಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಪಂದ್ಯಕ್ಕಿಂತ ಮೊದಲು 2021ರ ಜ.7ರಂದು ಸಿಡ್ನಿಯಲ್ಲಿ ಕ್ಯಾಮರೂನ್ ಗ್ರೀನ್ ಅವರು ಬುಮ್ರಾ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರು.

19ರ ಹರೆಯದ ಕಾನ್‌ಸ್ಟಾಸ್ ಅವರು 65 ಎಸೆತಗಳಲ್ಲಿ 60 ರನ್ ಗಳಿಸಿದ್ದು, ಇದರಲ್ಲಿ ಎರಡು ಸಿಕ್ಸರ್ ಇದ್ದವು. ಈ ಎರಡೂ ಸಿಕ್ಸರ್ ಅನ್ನು ಬುಮ್ರಾ ಬೌಲಿಂಗ್‌ನಲ್ಲಿ ಸಿಡಿಸಿದ್ದು ವಿಶೇಷ. ಕಾನ್‌ಸ್ಟಾಸ್ ಅವರು ಅರ್ಧಶತಕ ಗಳಿಸಿದ ಆಸ್ಟ್ರೇಲಿಯದ 2ನೇ ಕಿರಿಯ ವಯಸ್ಸಿನ ಬ್ಯಾಟರ್ ಎನಿಸಿಕೊಂಡರು. 1953ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ತನ್ನ 17ನೇ ವಯಸ್ಸಿನಲ್ಲಿ ಇಯಾನ್ ಕ್ರೆಗ್ ಅರ್ಧಶತಕ ಸಿಡಿಸಿದ್ದರು.

ಕಾನ್‌ಸ್ಟಾಸ್ ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾನೆದುರಿಸಿದ 11ನೇ ಎಸೆತದಲ್ಲಿ ಬುಮ್ರಾ ಬೌಲಿಂಗ್‌ನಲ್ಲಿ ರಿವರ್ಸ್ ಸ್ಕೂಪ್ ಮಾಡಲು ಯತ್ನಿಸಿದರು. ಮುಂದಿನ ಓವರ್‌ನಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರು. ತನ್ನ 3ನೇ ಪ್ರಯತ್ನದಲ್ಲಿ ಸಿಕ್ಸರ್ ಸಿಡಿಸುವಲ್ಲಿ ಯಶಸ್ವಿಯಾದರು.

ಬುಮ್ರಾ ವಿರುದ್ದ ಆಡಿರುವ 33 ಎಸೆತಗಳಲ್ಲಿ ಕಾನ್‌ಸ್ಟಾಸ್ ಅವರು 34 ರನ್ ಗಳಿಸಿದರು. ವಿಶ್ವದ ಅಗ್ರ ರ್ಯಾಂಕಿನ ಟೆಸ್ಟ್ ಬೌಲರ್ ಬುಮ್ರಾ ವಿರುದ್ಧ 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News