ಭಾರತದ ಸ್ಪಿನ್ ದಂತಕತೆ ಬಿಷನ್ ಸಿಂಗ್ ಬೇಡಿ ದಾಖಲೆ ಸರಿಗಟ್ಟಿದ ಬುಮ್ರಾ
ಸಿಡ್ನಿ : ಆಸ್ಟ್ರೇಲಿಯ ತಂಡದ ವಿರುದ್ಧ ಈಗ ನಡೆಯುತ್ತಿರುಗವ ಬಾರ್ಡರ್-ಗವಾಸ್ಕರ್ ಟ್ರೋಫಿ(ಬಿಜಿಟಿ)ಸರಣಿಯಲ್ಲಿ ಜಸ್‌ಪ್ರಿತ್ ಬುಮ್ರಾ 31ನೇ ವಿಕೆಟನ್ನು ಪಡೆದರು. ಈ ಮೂಲಕ ವಿದೇಶಿ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿರುವ ಭಾರತೀಯ ಬೌಲರ್, ಸ್ಪಿನ್ ಬೌಲಿಂಗ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಸರಿಗಟ್ಟಿದರು.
ಬುಮ್ರಾ ಅವರು ಐದು ಪಂದ್ಯಗಳ ಬಿಜಿಟಿ ಸರಣಿಯಲ್ಲಿ ಭಾರತದ ಪರ ಏಕಾಂಗಿ ಹೋರಾಟ ನೀಡಿದ್ದು, ಪ್ರವಾಸಿ ತಂಡ ಭಾರತವು ಸಿಡ್ನಿಯಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಸದ್ಯ 2-1 ಮುನ್ನಡೆಯಲ್ಲಿರುವ ಆಸ್ಟ್ರೇಲಿಯ ತಂಡಕ್ಕೆ 10 ವರ್ಷಗಳ ನಂತರ ಟ್ರೋಫಿಯನ್ನು ಗೆಲ್ಲಲು ಗೆಲುವು ಇಲ್ಲವೇ ಡ್ರಾ ಸಾಧಿಸುವ ಅಗತ್ಯವಿದೆ. ಈ ಹಿಂದಿನ ಆವೃತ್ತಿಯ ವಿನ್ನರ್ ಆಗಿರುವ ಭಾರತಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಪಂದ್ಯವನ್ನು ಜಯಿಸಿ 2-2ರಿಂದ ಡ್ರಾ ಸಾಧಿಸಬೇಕಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನದ ಮೊದಲ ದಿನದ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ(2 ರನ್)ವಿಕೆಟನ್ನು ಪಡೆದಿರುವ ಬುಮ್ರಾ ಅವರು ಬೇಡಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಬೇಡಿ ದಾಖಲೆಯನ್ನು ಮುರಿಯಲು ಬುಮ್ರಾಗೆ ಈಗ ಕೇವಲ ಒಂದು ವಿಕೆಟ್ ಬೇಕಾಗಿದೆ. ಬೇಡಿ ಅವರು 1977-78ರ ಭಾರತ ತಂಡದ ಆಸ್ಟ್ರೇಲಿಯ ಪ್ರವಾಸದ ವೇಳೆ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಟ್ಟು 31 ವಿಕೆಟ್‌ಗಳನ್ನು ಕಬಳಿಸಿದ್ದರು.
ಭಾರತದ ಪ್ರಮುಖ ವೇಗದ ಬೌಲರ್ ಬುಮ್ರಾ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ. ಈ ದಾಖಲೆಯು ಸದ್ಯ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೆಸರಲ್ಲಿದೆ.
ಹರ್ಭಜನ್ ಸಿಂಗ್ ಅವರು 2001ರಲ್ಲಿ ಭಾರತ ತಂಡವು ಆಸ್ಟ್ರೇಲಿಯ ಪ್ರವಾಸ ಕೈಗೊಂಡಾಗ ಬಿಜಿಟಿ ಸರಣಿಯಲ್ಲಿ ಕೇವಲ 3 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 32 ವಿಕೆಟ್‌ಗಳನ್ನು ಉರುಳಿಸಿದ್ದರು.
ಬುಮ್ರಾ ಅವರು ಸ್ವದೇಶ ಹಾಗೂ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ. ಬಿ. ಚಂದ್ರಶೇಖರ್ ದಾಖಲೆಯನ್ನು ಮುರಿಯಲು ಬುಮ್ರಾಗೆ ಇನ್ನು ಕೇವಲ 5 ವಿಕೆಟ್‌ಗಳು ಬೇಕಾಗಿದೆ. ಚಂದ್ರಶೇಖರ್ ಅವರು 1972-73ರ ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ 35 ವಿಕೆಟ್‌ಗಳನ್ನು ಪಡೆದಿದ್ದರು.
ಪ್ರಸಕ್ತ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ಅವರು 12.64ರ ಸರಾಸರಿಯಲ್ಲಿ, 27.74ರ ಸ್ಟ್ರೈಕ್‌ರೇಟ್‌ನಲ್ಲಿ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಮೂರು, 5 ವಿಕೆಟ್ ಗೊಂಚಲು ಇದೆ. 76ಕ್ಕೆ 6 ಶ್ರೇಷ್ಠ ಬೌಲಿಂಗ್ ಆಗಿದೆ.
*ವಿದೇಶಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ಭಾರತದ ಅಗ್ರ ಐವರು ಬೌಲರ್‌ಗಳ ಪಟ್ಟಿ
1. ಜಸ್‌ಪ್ರಿತ್ ಬುಮ್ರಾ: 31 ವಿಕೆಟ್‌ಗಳು(ಆಸ್ಟ್ರೇಲಿಯದ ವಿರುದ್ಧ, 2024-25)
2. ಬಿಷನ್ ಸಿಂಗ್ ಬೇಡಿ: 31 ವಿಕೆಟ್‌ಗಳು(ಆಸ್ಟ್ರೇಲಿಯದ ವಿರುದ್ಧ 1977-78)
3. ಬಿ.ಚಂದ್ರಶೇಖರ್: 28(ಆಸ್ಟ್ರೇಲಿಯದ ವಿರುದ್ಧ 1977-78)
4. ಸುಭಾಶ್ ಗುಪ್ತೆ: 26 ವಿಕೆಟ್‌ಗಳು(ವೆಸ್ಟ್‌ಇಂಡೀಸ್ ವಿರುದ್ಧ, 1952-53)
5.ಕಪಿಲ್‌ದೇವ್: 25 ವಿಕೆಟ್‌ಗಳು(ಆಸ್ಟ್ರೇಲಿಯದ ವಿರುದ್ಧ, 1991-92)