ಬುಮ್ರಾಗೆ ಪೂರ್ಣಕಾಲಿಕ ನಾಯಕತ್ವವಹಿಸುವ ಮೊದಲು ಎಚ್ಚರ ವಹಿಸಿ: ಮುಹಮ್ಮದ್ ಕೈಫ್

Update: 2025-01-08 17:38 GMT

ಮುಹಮ್ಮದ್ ಕೈಫ್ , ಬುಮ್ರಾ | PTI 

ಹೊಸದಿಲ್ಲಿ: ನಾಯಕತ್ವವು ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಮೇಲೆ ಹೆಚ್ಚುವರಿ ಒತ್ತಡವುಂಟು ಮಾಡಲಿದೆ. ಪೂರ್ಣಕಾಲಿಕ ನಾಯಕತ್ವದ ಹೊಣೆವಹಿಸುವ ಮೊದಲು ಕ್ರಿಕೆಟ್ ಮಂಡಳಿಯು ಎರಡು ಬಾರಿ ಯೋಚಿಸಬೇಕು ಎಂದು ಭಾರತದ ಮಾಜಿ ಬ್ಯಾಟರ್ ಮುಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಕೊನೆಗೊಂಡಿರುವ ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವೇಗದ ಬೌಲರ್ ಬುಮ್ರಾ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವಹಿಸಿದ್ದರು. ಸರಣಿಯ ಮೊದಲ ಹಾಗೂ ಕೊನೆಯ ಪಂದ್ಯದಲ್ಲಿ ಬುಮ್ರಾ ಭಾರತದ ನಾಯಕನಾಗಿದ್ದರು. ಮೊದಲ ಪಂದ್ಯದಲ್ಲಿ ವೈಯಕ್ತಿಕ ಕಾರಣಕ್ಕೆ ಹಾಗೂ ಕೊನೆಯ ಪಂದ್ಯವನ್ನು ಕಳಪೆ ಫಾರ್ಮ್‌ನಿಂದಾಗಿ ರೋಹಿತ್ ಆಡಿರಲಿಲ್ಲ.

ಸದ್ಯ ತೀವ್ರ ರನ್ ಬರ ಎದುರಿಸುತ್ತಿರುವ ರೋಹಿತ್‌ರ ಟೆಸ್ಟ್ ಕ್ರಿಕೆಟ್ ಜೀವನ ಅನಿಶ್ಚಿತವಾಗಿದ್ದು, ಬುಮ್ರಾಗೆ ಪೂರ್ಣಾವಧಿ ನಾಯಕತ್ವವಹಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು ಬೌಲಿಂಗ್ ಮಾಡಿದ್ದ ಬುಮ್ರಾ 9 ಇನಿಂಗ್ಸ್‌ಗಳಲ್ಲಿ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದ್ದರು. ಬುಮ್ರಾ ಸರಣಿಯ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಬುಮ್ರಾ ಈ ತನಕ ತನ್ನ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ 45 ಪಂದ್ಯಗಳನ್ನು ಆಡಿದ್ದಾರೆ. 19.40ರ ಸರಾಸರಿಯಲ್ಲಿ 205 ವಿಕೆಟ್‌ಗಳನ್ನು ಪಡೆದಿದ್ದಾರೆ.

ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡವನ್ನು 3 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಒಂದರಲ್ಲಿ ಗೆಲುವು, ಎರಡರಲ್ಲಿ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News