ನೇರಳೆ ಟೋಪಿಯನ್ನು ಕಿರಿಯ ಅಭಿಮಾನಿಗೆ ಉಡುಗೊರೆಯಾಗಿ ನೀಡಿದ ಬುಮ್ರಾ
ಲಕ್ನೋ: ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬುಧವಾರ ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಕಿರಿಯ ಅಭಿಮಾನಿಯೊಬ್ಬನಿಗೆ ತನ್ನ ನೇರಳೆ ಟೋಪಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದ ಬಳಿಕ ಅವರು ಈ ಉಡುಗೊರೆ ನೀಡಿ ಕಿರಿಯ ಅಭಿಮಾನಿಯನ್ನು ರೋಮಾಂಚನಗೊಳಿಸಿದರು. ಈ ಪಂದ್ಯವನ್ನು ಲಕ್ನೋ ಸೂಪರ್ ಜಯಂಟ್ಸ್ ನಾಲ್ಕು ವಿಕೆಟ್ಗಳಿಂದ ಗೆದ್ದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗರಿಷ್ಠ ವಿಕೆಟ್ ಗಳಿಕೆಗಾಗಿ ನೀಡಲಾಗುವ ಪ್ರತಿಷ್ಠಿತ ನೇರಳೆ ಟೋಪಿಯನ್ನು ಬುಮ್ರಾ ಎಳೆಯ ಅಭಿಮಾನಿಯೊಬ್ಬರಿಗೆ ನೀಡಿದರು ಎಂದು ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದ ಎಕ್ಸ್ ನಲ್ಲಿ ಹೇಳಿದೆ. ಅಷ್ಟೇ ಅಲ್ಲ, ಆ ಅಭಿಮಾನಿಗೆ ಬುಮ್ರಾ ಆಟೊಗ್ರಾಫ್ ಕೂಡ ನೀಡಿದರು ಎಂದು ಅದು ಹೇಳಿದೆ.
ಬುಮ್ರಾರಿಂದ ನೇರಳೆ ಟೋಪಿ ಮತ್ತು ಹಸ್ತಾಕ್ಷರ ಪಡೆದ ಆ ಕಿರಿಯ ಅಭಿಮಾನಿ ರೋಮಾಂಚನಗೊಂಡು ಸ್ಟೇಡಿಯಮ್ನಲ್ಲಿ ಅತ್ತಿತ್ತ ಓಡುವುದನ್ನು ವೀಡಿಯೊ ತೋರಿಸುತ್ತದೆ.
“ಈಗ ಆ ಬಾಲಕ ಜೀವಮಾನಕ್ಕಾಗುವಷ್ಟು ನೆನಪುಗಳನ್ನು ಹೊಂದಿದ್ದಾನೆ'' ಎಂದು ಮುಂಬೈ ಇಂಡಿಯನ್ ಟ್ವೀಟ್ ಮಾಡಿದೆ.
ಪ್ರಸಕ್ತ ಐಪಿಎಲ್ನಲ್ಲಿ ಬುಮ್ರಾ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದಾರೆ. ಅವರು ಈವರೆಗೆ 10 ಪಂದ್ಯಗಳಿಂದ 18.28ರ ಸರಾಸರಿಯಲ್ಲಿ 14 ವಿಕೆಟ್ಗಳನ್ನು ಗಳಿಸಿದ್ದಾರೆ. 21 ರನ್ಗಳನ್ನು ನೀಡಿ 5 ವಿಕೆಟ್ ಗಳಿಸಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. ಆದರೆ, ಅವರ ಶ್ರೇಷ್ಠ ಬೌಲಿಂಗ್ ಸಾಧನೆಯ ಹೊರತಾಗಿಯೂ ಅವರ ತಂಡ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅದು 10 ಪಂದ್ಯಗಳನ್ನು ಆಡಿ ಮೂರು ಜಯಗಳನ್ನು ಗಳಿಸಿದೆ ಮತ್ತು 7ರಲ್ಲಿ ಸೋತಿದೆ.