ಬುಮ್ರಾಗೆ ಕಾಡಿದ ಬೆನ್ನುನೋವು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಕ್ಯಾನಿಂಗ್

Update: 2025-01-04 15:04 GMT

ಜಸ್‌ಪ್ರಿತ್ ಬುಮ್ರಾ | PC : X

ಸಿಡ್ನಿ, ಜ.4: ಬೆನ್ನುನೋವು ಕಾಡಿದ ನಂತರ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ದಾಖಲಾದ ಭಾರತದ ಪ್ರಮುಖ ವೇಗದ ಬೌಲರ್ ಹಾಗೂ ಉಸ್ತುವಾರಿ ನಾಯಕ ಜಸ್‌ಪ್ರಿತ್ ಬುಮ್ರಾ ಅವರು 5ನೇ ಟೆಸ್ಟ್‌ನ 2ನೇ ದಿನವಾದ ಶನಿವಾರ ಸುಮಾರು 3 ಗಂಟೆಗಳ ಕಾಲ ಸಿಡ್ನಿ ಕ್ರಿಕೆಟ್ ಮೈದಾನದಿಂದ ಹೊರಗುಳಿದರು.

ಸದ್ಯ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ರವಿವಾರ ಬುಮ್ರಾ ಅವರ ಸೇವೆ ಭಾರತಕ್ಕೆ ಅಗತ್ಯವಾಗಿ ಬೇಕಾಗಿದೆ. ಆದರೆ ಬುಮ್ರಾ ಅವರು ಬ್ಯಾಟಿಂಗ್ ಮಾಡಲು ಸಿದ್ಧರಾಗಿದ್ದಾರೆ. ಆದರೆ ಬೌಲಿಂಗ್ ಮಾಡುವ ಕುರಿತು ರವಿವಾರ ಬೆಳಗ್ಗೆ ನಿರ್ಧರಿಸಲಾಗುತ್ತದೆ ಎಂದು ವರದಿಯಾಗಿದೆ.

ಬೆನ್ನುನೋವು ಕಾಣಿಸಿಕೊಂಡ ನಂತರ ಬುಮ್ರಾ ಅವರು ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕ್ಯಾನಿಂಗ್‌ಗೆ ಒಳಗಾದರು. ಆದರೆ, ಈ ಕ್ಷಣದಲ್ಲಿ ಏನೂ ಗಂಭೀರವಾಗಿಲ್ಲ. ಅವರು ಬ್ಯಾಟಿಂಗ್ ಮಾಡಲು ಶಕ್ತರಾಗಿದ್ದಾರೆ. ಆದರೆ ರವಿವಾರ ಬೆಳಗ್ಗಿನ ವೇಳೆಗೆ ಅವರು ಹೇಗಿದ್ದಾರೆಂದು ನೋಡಿ ಬೌಲಿಂಗ್ ಮಾಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಲ್ಲ ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ.

ಬುಮ್ರಾ ಅವರು 3 ಸ್ಪೆಲ್‌ಗಳಲ್ಲಿ 9 ಓವರ್‌ಗಳ ಬೌಲಿಂಗ್ ಮಾಡಿದ್ದಾರೆ. ಭೋಜನ ವಿರಾಮದ ನಂತರ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ನಂತರ ಮೈದಾನಕ್ಕೆ ಇಳಿಯಲಿಲ್ಲ. ಬುಮ್ರಾ ಅವರು ಇಂದು ಆಸ್ಟ್ರೇಲಿಯದ 3ನೇ ಕ್ರಮಾಂಕದ ಬ್ಯಾಟರ್ ಲ್ಯಾಬುಶೇನ್ ವಿಕೆಟನ್ನು ಪಡೆದರು. ಬುಮ್ರಾ ಮೈದಾನದಿಂದ ನಿರ್ಗಮಿಸಿದ ನಂತರ ಮುಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ಅವರು ಅಮೋಘ ಬೌಲಿಂಗ್ ಸಂಘಟಿಸಿ ಆಸ್ಟ್ರೇಲಿಯ ತಂಡವನ್ನು 181 ರನ್‌ಗೆ ನಿಯಂತ್ರಿಸಿ ಭಾರತಕ್ಕೆ 4 ರನ್ ಮುನ್ನಡೆ ಒದಗಿಸಿಕೊಟ್ಟರು.

ಬುಮ್ರಾ ಅವರು ಸರಣಿಯಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದು, ಅವರ ಅನುಪಸ್ಥಿತಿಯು ನಮಗೆ ಸ್ವಲ್ಪ ಲಾಭವಾಗಲಿದೆ. ಅವರೊಬ್ಬ ಪ್ರತಿಭಾವಂತ ಬೌಲರ್. ಯಾವುದೇ ಪಿಚ್‌ನಲ್ಲಿ ಬೌಲಿಂಗ್ ಮಾಡಬಲ್ಲರು. ಬುಮ್ರಾ ಮೈದಾನಕ್ಕೆ ಇಳಿಯದಿದ್ದರೆ ಭಾರತವು ಹೊಸ ಯೋಜನೆಯೊಂದಿಗೆ ಬರಬಹುದು ಎಂದು ಆಸ್ಟ್ರೇಲಿಯದ ಕೋಚ್ ಆ್ಯಂಡ್ರೂ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News