ಚಾಂಪಿಯನ್ಸ್ ಟ್ರೋಫಿ-2025 ವೇಳಾಪಟ್ಟಿ ಪ್ರಕಟ

Update: 2024-12-24 15:36 GMT

PC : X 

ಹೊಸದಿಲ್ಲಿ : ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರರ ಮೈದಾನಗಳಲ್ಲಿ 2027ರ ತನಕ ಆಡುವುದಿಲ್ಲ ಎಂದು ಖಚಿತವಾದ ನಾಲ್ಕು ದಿನಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಚಾಂಪಿಯನ್ಸ್ ಟ್ರೋಫಿಗೆ ವೇಳಾಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ದುಬೈನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಫೆಬ್ರವರಿ 23, ರವಿವಾರದಂದು ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇವುಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳನ್ನಾಗಿ ವಿಭಜಿಸಲಾಗಿದೆ. ಭಾರತ ಕ್ರಿಕೆಟ್ ತಂಡ ಎ ಗುಂಪಿನಲ್ಲಿದ್ದು, ಇದರಲ್ಲಿ ಪಾಕಿಸ್ತಾನವಲ್ಲದೆ, ಬಾಂಗ್ಲಾದೇಶ ಹಾಗೂ ನ್ಯೂಝಿಲ್ಯಾಂಡ್ ತಂಡಗಳಿವೆ. ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿವೆ.

ಭಾರತ ತಂಡ ಫೆಬ್ರವರಿ 20ರಂದು ಬಾಂಗ್ಲಾದೇಶ ಹಾಗೂ ಮಾರ್ಚ್ 2ರಂದು ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಹಾಲಿ ಚಾಂಪಿಯನ್ ಹಾಗೂ ಆತಿಥೇಯ ತಂಡ ಪಾಕಿಸ್ತಾನವು ಫೆಬ್ರವರಿ 19ರಂದು ಕರಾಚಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡುವ ಮೂಲಕ ಟೂರ್ನಮೆಂಟ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಪಾಕಿಸ್ತಾನ ತಂಡವು ಬಾಂಗ್ಲಾದೇಶ ವಿರುದ್ಧ ಕೊನೆಯ ಗ್ರೂಪ್ ಪಂದ್ಯವನ್ನು ಆಡಲಿದ್ದು, ಇದು ಫೆಬ್ರವರಿ 27ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ.

ಎರಡು ಸೆಮಿ ಫೈನಲ್ ಪಂದ್ಯಗಳು ಮಾರ್ಚ್ 4 ಹಾಗೂ ಮಾ.5ರಂದು ನಡೆಯಲಿದೆ. ಫೈನಲ್ ಪಂದ್ಯವು ಮಾ.9ರಂದು ನಡೆಯಲಿದ್ದು, ಇದಕ್ಕೆ ಮೀಸಲು ದಿನ ನಿಗದಿಪಡಿಸಲಾಗಿದೆ.

ಭಾರತ ತಂಡದ ಉಪಸ್ಥಿತಿಯನ್ನು ಪರಿಗಣಿಸದೆಯೇ ಮೊದಲ ಸೆಮಿ ಫೈನಲ್ ಪಂದ್ಯವು ಯುಎಇನಲ್ಲಿ ನಡೆಯಲಿದೆ.

ಫೈನಲ್ ಪಂದ್ಯವನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಒಂದು ವೇಳೆ ಭಾರತ ತಂಡ ಫೈನಲ್‌ ಗೆ ತಲುಪಿದರೆ ಯುಎಇನಲ್ಲಿ ಫೈನಲ್ ಪಂದ್ಯ ನಡೆಸುವ ಅವಕಾಶವಿದೆ.

ಭಾರತ ಒಳಗೊಂಡಿರುವ ಪಂದ್ಯಗಳನ್ನು ಹೊರತುಪಡಿಸಿ ಎರಡೂ ಗುಂಪುಗಳ ಉಳಿದ ಪಂದ್ಯಗಳನ್ನು ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ಆಡಲಾಗುತ್ತದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಅಧ್ಯಕ್ಷ ಮುಹ್ಸಿನ್ ನಖ್ವಿ ಅವರು ಯುಎಇಯ ಹಿರಿಯ ಸಚಿವ ಹಾಗೂ ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮುಖ್ಯಸ್ಥ ಶೇಕ್ ನಹ್ಯಾನ್ ಅಲ್ ಮುಬಾರಕ್‌ ರನ್ನು ಭೇಟಿಯಾದ ನಂತರ ಭಾರತದ ಪಂದ್ಯಗಳನ್ನು ಯುಎಇನಲ್ಲಿ ಅಯೋಜಿಸಲು ನಿರ್ಧರಿಸಲಾಗಿದೆ.

ಚಾಂಪಿಯನ್ಸ್ ಟ್ರೋಫಿಗೆ ಯುಎಇಯನ್ನು ತಟಸ್ಥ ತಾಣವನ್ನಾಗಿ ಪಿಸಿಬಿ ಅಯ್ಕೆ ಮಾಡಿದೆ ಎಂದು ಪಿಸಿಬಿ ವಕ್ತಾರ ಆಮಿರ್ ಮಿರ್ ಸಭೆಯ ನಂತರ ತಿಳಿಸಿದ್ದಾರೆ.

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭದ್ರತೆಯ ಕುರಿತ ಕಳವಳದಿಂದಾಗಿ ಪಾಕಿಸ್ತಾನಕ್ಕೆ ತಾನು ಪ್ರಯಾಣಿಸುವುದಿಲ್ಲ ಎಂದು ಭಾರತ ಹೇಳಿತ್ತು. ಹೈಬ್ರಿಡ್ ಮಾದರಿಯಲ್ಲಿ ಭಾರತ ತಂಡವು ಸೆಮಿ ಫೈನಲ್, ಫೈನಲ್ ಸಹಿತ ಎಲ್ಲ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡಲಿದೆ ಎಂದು ಐಸಿಸಿ ಖಚಿತಪಡಿಸಿತ್ತು.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರರ ದೇಶಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ನಂತರ ಹೈಬ್ರಿಡ್ ಮಾದರಿಯನ್ನು ಅಂತಿಮಗೊಳಿಸಲಾಗಿದೆ. 2027ರ ತನಕ ನಡೆಯಲಿರುವ ಐಸಿಸಿ ಸ್ಪರ್ಧೆಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲು ನಿರ್ಧರಿಸಿದ ನಂತರ ಈ ಸಮಸ್ಯೆಗೆ ಪರಿಹಾರ ಲಭಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಗಿರುವ ಒಪ್ಪಂದವು ಭಾರತದಲ್ಲಿ ನಡೆಯಲಿರುವ 2025ರ ಮಹಿಳೆಯರ ಏಕದಿನ ವಿಶ್ವಕಪ್ ಹಾಗೂ 2026ರ ಪುರುಷರ ಟಿ20 ವಿಶ್ವಕಪ್‌ ಗೂ ಅನ್ವಯಿಸಲಿದೆ. 2026ರ ಟಿ20 ವಿಶ್ವಕಪ್ ಟೂರ್ನಿಯು ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. 2028ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಮಹಿಳೆಯರ ಟಿ20 ವಿಶ್ವಕಪ್‌ಗೂ ಹೈಬ್ರಿಡ್ ಮಾದರಿ ಅನ್ವಯಿಸುತ್ತದೆ.

ಚಾಂಪಿಯನ್ಸ್ ಟ್ರೋಫಿ 2025ರ ಗುಂಪುಗಳು:

ಎ ಗುಂಪು: ಪಾಕಿಸ್ತಾನ, ಬಾಂಗ್ಲಾದೇಶ, ಭಾರತ ಹಾಗೂ ನ್ಯೂಝಿಲ್ಯಾಂಡ್

ಬಿ ಗುಂಪು: ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:

ಫೆಬ್ರವರಿ 19: ಪಾಕಿಸ್ತಾನ-ನ್ಯೂಝಿಲ್ಯಾಂಡ್, ಕರಾಚಿ

ಫೆ.20: ಬಾಂಗ್ಲಾದೇಶ-ಭಾರತ, ದುಬೈ

ಫೆ.21: ಅಫ್ಘಾನಿಸ್ತಾನ-ದಕ್ಷಿಣ ಆಫ್ರಿಕ, ಕರಾಚಿ

ಫೆ.22: ಆಸ್ಟ್ರೇಲಿಯ-ಇಂಗ್ಲೆಂಡ್, ಲಾಹೋರ್

ಫೆ.23: ಪಾಕಿಸ್ತಾನ-ಭಾರತ, ದುಬೈ

ಫೆ.24: ಬಾಂಗ್ಲಾದೇಶ-ನ್ಯೂಝಿಲ್ಯಾಂಡ್, ರಾವಲ್ಪಿಂಡಿ

ಫೆ.25: ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ

ಫೆ.26: ಅಫ್ಘಾನಿಸ್ತಾನ-ಇಂಗ್ಲೆಂಡ್, ಲಾಹೋರ್

ಫೆ.27: ಪಾಕಿಸ್ತಾನ-ಬಾಂಗ್ಲಾದೇಶ, ರಾವಲ್ಪಿಂಡಿ

ಫೆ.28: ಅಫ್ಘಾನಿಸ್ತಾನ-ಆಸ್ಟ್ರೇಲಿಯ, ಲಾಹೋರ್

ಮಾರ್ಚ್ 1: ದಕ್ಷಿಣ ಆಫ್ರಿಕಾ-ಇಂಗ್ಲೆಂಡ್, ಕರಾಚಿ

ಮಾ.2: ನ್ಯೂಝಿಲ್ಯಾಂಡ್-ಭಾರತ, ದುಬೈ

ಮಾ.4: ಸೆಮಿ ಫೈನಲ್‌1, ದುಬೈ

ಮಾ.5: ಸೆಮಿ ಫೈನಲ್ 2, ಲಾಹೋರ್

ಮಾ.9: ಫೈನಲ್, ಲಾಹೋರ್ ( ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ಆಡಲಾಗುತ್ತದೆ)

ಮಾ.10: ಮೀಸಲು ದಿನ.

 ಎಲ್ಲ ಪಂದ್ಯಗಳು ಹಗಲು-ರಾತ್ರಿ ನಡೆಯಲಿವೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News