ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯ ಪರವಾಗಿ ಆಡಿದ ಮುಖ್ಯ ಆಯ್ಕೆಗಾರ, ಪ್ರಧಾನ ಕೋಚ್!

Update: 2024-05-29 16:12 GMT

PC : NDTV 

ಕ್ವೀನ್ಸ್ ಪಾರ್ಕ್ (ಟ್ರಿನಿಡಾಡ್): ಟಿ20 ವಿಶ್ವಕಪ್ ಅಭ್ಯಾಸ ಪಂದ್ಯವೊಂದರಲ್ಲಿ ಮಂಗಳವಾರ ಆಸ್ಟ್ರೇಲಿಯ ತಂಡದ ಪರವಾಗಿ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೇಲಿ ಮತ್ತು ಪ್ರಧಾನ ಕೋಚ್ ಆ್ಯಂಡ್ರೂ ಮೆಕ್ಡೊನಾಲ್ಡ್ ಆಟಗಾರರಾಗಿ ಕಣಕ್ಕಿಳಿದು ಆಡಿದರು.

ಆಸ್ಟ್ರೇಲಿಯದ 15 ಆಟಗಾರರ ಪೈಕಿ ಈಗ ಸ್ಥಳಕ್ಕೆ ತಲುಪಿರುವುದು 9 ಆಟಗಾರರು ಮಾತ್ರ. ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ಬಳಿಕ, ಅದರಲ್ಲಿ ಆಡಿರುವ ಆಸ್ಟ್ರೇಲಿಯದ ಆಟಗಾರರಾದ ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಮತ್ತುಮಾರ್ಕಸ್ ಸ್ಟೋಯಿನಿಸ್ ವಿಶ್ರಾಂತಿಯಲ್ಲಿದ್ದಾರೆ. ಅವರು ಇನ್ನಷ್ಟೇ ತಂಡವನ್ನು ಕೂಡಿಕೊಳ್ಳಬೇಕಾಗಿದೆ.

ಹಾಗಾಗಿ, ನಮೀಬಿಯ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪ್ರಧಾನ ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್, ಸಹಾಯಕ ಕೋಚ್ಗಳಾದ ಬ್ರಾಡ್ ಹಾಜ್ ಮತ್ತು ಆ್ಯಂಡ್ರಿ ಬೊರೊವೆಕ್ ಹಾಗೂ ಮುಖ್ಯ ಆಯ್ಕೆಗಾರ ಜಾರ್ಜ್ ಬೇಲಿ ಬದಲಿ ಫೀಲ್ಡರ್ ಗಳಾಗಿ ಆಡಿದರು.

ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆದ ಪಂದ್ಯವನ್ನು 2021ರ ಚಾಂಪಿಯನ್ ಆಸ್ಟ್ರೇಲಿಯ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ನಮೀಬಿಯ 20 ಓವರ್ ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 119 ರನ್ಗಳನ್ನು ಗಳಿಸಿತು. ಇದನ್ನು ಆಸ್ಟ್ರೇಲಿಯವು ಕೇವಲ 10 ಓವರ್ ಗಳಲ್ಲಿ ಬೆನ್ನತ್ತಿತು. ಡೇವಿಡ್ ವಾರ್ನರ್ (54) ಕ್ಷಿಪ್ರ ಅರ್ಧ ಶತಕ ಬಾರಿಸಿ ಅಜೇಯರಾಗಿ ಉಳಿದರು.

ವಾರ್ನರ್ ಆರು ಬೌಂಡರಿಗಳು ಮತ್ತು ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಅವರು ಕೇವಲ 21 ಎಸೆತಗಳಲ್ಲಿ 54 ರನ್ ಗಳಿಸಿದರು.

ಆಸ್ಟ್ರೇಲಿಯದ ವೇಗಿ ಜೋಶ್ ಹ್ಯಾಝಲ್ವುಡ್ ಕೇವಲ 5 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಉರುಳಿಸಿದರು. ಅವರು ತನ್ನ ಮೂರು ಓವರ್ ಗಳಲ್ಲಿ ರನ್ಗಳನ್ನೇ ಕೊಡಲಿಲ್ಲ. ಸ್ಪಿನ್ನರ್ ಆ್ಯಡಮ್ ಝಾಂಪ (3/25) ನಮೀಬಿಯಕ್ಕೆ ಮಾರಕ ಹೊಡೆತ ನೀಡಿದರು.

ನಮೀಬಿಯ ಇನ್ನಿಂಗ್ಸ್ ನ ಕೊನೆಯಲ್ಲಿ ಝೇನ್ ಗ್ರೀನ್ ಕೊಂಚ ಪ್ರತಿರೋಧ ತೋರಿದರು. ಅವರು 30 ಎಸೆತಗಳಲ್ಲಿ 38 ರನ್ಗಳನ್ನು ಬಾರಿಸಿದರು. ಅದರಲ್ಲಿ ಐದು ಬೌಂಡರಿಗಳಿವೆ.

ಆಸ್ಟ್ರೇಲಿಯದ ಆರಂಭಿಕರಾದ ಮಿಚೆಲ್ ಮಾರ್ಶ್ (18) ಮತ್ತು ವಾರ್ನರ್ ಮೂರು ಓವರ್ ಗಳ ಒಳಗೆ 39 ರನ್ಗಳನ್ನು ಸಿಡಿಸಿದರು. ಜೋಶ್ ಇಂಗ್ಲಿಸ್ (5) ಮತ್ತು ಟಿಮ್ ಡೇವಿಡ್ (23) ಕಿರು ದೇಣ ಗೆಗಳನ್ನು ನೀಡಿದರು.

ಇದಕ್ಕೂ ಮೊದಲು, ಅಮೆರಿಕದ ಡಲ್ಲಾಸ್ನಲ್ಲಿ ಅಮೆರಿಕ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯಬೇಕಾಗಿದ್ದ ಅಭ್ಯಾಸ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಫ್ಲೋರಿಡದಲ್ಲಿ ನಡೆದ ಇನ್ನೊಂದು ಅಭ್ಯಾಸ ಪಂದ್ಯದಲ್ಲಿ, ನೆದರ್ಲ್ಯಾಂಡ್ಸ್ ತಂಡವು ಶ್ರೀಲಂಕಾವನ್ನು 20 ರನ್ಗಳಿಂದ ಸೋಲಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News