"ನಾನು ಕ್ರಿಕೆಟ್ ಆಡಿದ್ದಕ್ಕೆ ವಿಷಾದವಾಗುತ್ತಿದೆ": ಮಾಜಿ ಕ್ರಿಕೆಟಿಗ ಅಝರುದ್ದೀನ್ ಬೇಸರ

ಮುಹಮ್ಮದ್ ಅಝರುದ್ದೀನ್ | PC : azharflicks \ www.instagram.com
ಹೈದರಾಬಾದ್: ಇಲ್ಲಿನ ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸ್ಟ್ಯಾಂಡ್ ಒಂದಕ್ಕೆ ಇರಿಸಲಾಗಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರ ಹೆಸರನ್ನು ತೆಗೆದು ಹಾಕುವ ಹೈದರಾಬಾದ್ ಕ್ರಿಕೆಟ್ ಒಕ್ಕೂಟದ ನಿರ್ಧಾರವು ವಿವಾದಕ್ಕೆ ತಿರುಗಿದ್ದು, "ನಾನು ಕ್ರಿಕೆಟ್ ಆಡಿದ್ದಕ್ಕೆ ವಿಷಾದವಾಗುತ್ತಿದೆ" ಎಂದು ಮುಹಮ್ಮದ್ ಅಝರುದ್ದೀನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡೆಯು ದುರದೃಷ್ಟಕರವಾಗಿದೆ ಎಂದು ಹೈದರಾಬಾದ್ ಕ್ರಿಕೆಟ್ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ವಿರುದ್ಧ ಪಕ್ಷಪಾತದ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಉತ್ತರ ಪೆವಿಲಿಯನ್ ಸ್ಟ್ಯಾಂಡ್‌ಗೆ ಇರಿಸಲಾಗಿದ್ದ ಅವರ ಹೆಸರನ್ನು ಅಳಿಸಿ ಹಾಕುವಂತೆ ಸೂಚಿಸಿದ್ದ ಅಧಿಕೃತ ನಿರ್ದೇಶನವನ್ನು ಹೈದರಾಬಾದ್ ಕ್ರಿಕೆಟ್ ಒಕ್ಕೂಟ ಸ್ವೀಕರಿಸಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈದರಾಬಾದ್ ಕ್ರಿಕೆಟ್ ಒಕ್ಕೂಟದ ಪರವಾಗಿ ನೀತಿ ಅಧಿಕಾರಿ ಹಾಗೂ ಒಂಬುಡ್ಸ್‌ಮನ್ ಆಗಿ ಸೇವೆ ಸಲ್ಲಿಸಿದ್ದ ನ್ಯಾ. ವಿ.ಈಶ್ವರಯ್ಯ, ಶನಿವಾರ ಈ ಆದೇಶ ಹೊರಡಿಸಿದ್ದರು.
Cric Buzz ವರದಿಯ ಪ್ರಕಾರ, ಅಝರುದ್ದೀನ್ ಅವರು ಹೈದರಾಬಾದ್ ಕ್ರಿಕೆಟ್ ಒಕ್ಕೂಟದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೀತಿ ನಿರ್ಧಾರಗಳನ್ನು ಕೈಗೊಳ್ಳುವಾಗ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಸ್ಪಷ್ಟವಾಗಿ ಹಿತಾಸಕ್ತಿ ಸಂಘರ್ಷದಲ್ಲಿ ಮುಳುಗಿದ್ದರು ಎಂದು ಲಾರ್ಡ್ಸ್ ಕ್ರಿಕೆಟ್ ಕ್ಲಬ್ ನೀಡಿದ್ದ ಅಧಿಕೃತ ದೂರನ್ನು ಆಧರಿಸಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಅರ್ಜಿಯಲ್ಲಿ, ಅಝರುದ್ದೀನ್ ಅವರು ಸ್ವಯಂಲಾಭಕ್ಕಾಗಿ ಕ್ರಮಗಳನ್ನು ಕೈಗೊಂಡಿದ್ದರು. ಆ ಮೂಲಕ, ಅವರು ಹೊಂದಿದ್ದ ಹುದ್ದೆಯ ಅಧಿಕಾರದ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತತ್ವಗಳನ್ನು ಗಾಳಿಗೆ ತೂರಿದ್ದರು ಎಂದು ಆರೋಪಿಸಲಾಗಿದೆ.